ಮಂಥರ್ ಗೌಡಗೆ ಟಿಕೆಟ್ ಸ್ವಾಗತಾರ್ಹ

WhatsApp Image 2023-04-07 at 6.03.19 PM
Published on

ಮಡಿಕೇರಿ: ಮಡಿಕೇರಿ ಕ್ಷೇತ್ರದಲ್ಲಿ ಕಾಂಗ್ರೆಸ್ ಪಕ್ಷದಿಂದ ಡಾ.ಮಂಥರ್ ಗೌಡರವರಿಗೆ ಹೈಕಮಾಂಡ್ ಆಯ್ಕೆ ಮಾಡಿರುವುದನ್ನು ಕೊಡಗು ಜಿಲ್ಲಾ ಕಾಂಗ್ರೆಸ್ ಸ್ವಾಗತಿಸುವುದಾಗಿ ಕೆಪಿಸಿಸಿ ಸದಸ್ಯ ಬೇಕಲ್ ರಮಾನಾಥ್ ತಿಳಿಸಿದರು.


ನಗರದ ಪತ್ರಿಕಾಭವನದಲ್ಲಿ ಆಯೋಜಿಸಿದ್ದ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಡಾ.ಮಂಥರ್ ಗೌಡರವರ ಯೋಚನೆ ಹಾಗೂ ಯೋಜನೆಗಳು ಕೊಡಗನ್ನು ಅಭಿವೃದ್ಧಿಯಲ್ಲಿ ಮುಂಚೂಣಿಯ ಜಿಲ್ಲೆಯನ್ನಾಗಿಸುವುದರಲ್ಲಿ ಯಾವುದೇ ಸಂಶಯವಿಲ್ಲ. ಗ್ರಾಮೀಣ ಶಾಲೆಗಳಿಗೆ ಮೂಲಭೂತ ಸೌಕರ್ಯ, ಭತ್ತದ ತಳಿಗಳ ಸಂರಕ್ಷಣೆ, ಸುಸ್ಥಿರ ಪ್ರವಾಸೋದ್ಯಮಕ್ಕೆ ಹೆಚ್ಚಿನ ಒತ್ತು ನೀಡಲಿದ್ದಾರೆ. ಹೈಕಮಾಂಡ್ ಆಯ್ಕೆ ಮಾಡಿ ಟಿಕೆಟ್ ನೀಡಿರುವುದು ಸ್ವಾಗತಾರ್ಹ ಎಂದರು.


ಅಭಿವೃದ್ಧಿ ಮತ್ತು ಬದಲಾವಣೆ ಘೋಷಣೆ ಮೇಲೆ ಚುನಾವಣೆ ನಡೆಯುತ್ತಿದ್ದು, ಸ್ಥಳೀಯರು ಬೆಂಬಲ ನೀಡುವ ನಿರೀಕ್ಷೆ ಹೊಂದಲಾಗಿದೆ. ಕಾಡಿನಂಚಿನಲ್ಲಿ ವಾಸಿಸುತ್ತಿರುವ ಹಾಗೂ ಆದಿವಾಸಿ ಕುಟುಂಬಗಳ ಸಮಸ್ಯೆಗಳಿಗೆ ಸ್ಪಂದಿಸುವ ಚಿಂತನೆ ಇಟ್ಟುಕೊಂಡಿದ್ದಾರೆ. ಉದ್ಯೋಗ ಸೃಷ್ಠಿ, ಸ್ವಾವಲಂಬನೆಯ ಬದುಕು, ಕಲ್ಯಾಣ ಕರ್ನಾಟಕದ ಉದ್ದೇಶ ಹೊಂದಿರುವ ಮಂಥರ್‌ರವರಿಗೆ ಜಿಲ್ಲೆಯ ಜನತೆ ಸಂಪೂರ್ಣ ಬೆಂಬಲ ನೀಡುವಂತೆ ಮನವಿ ಮಾಡಿದರು.


ಕೊಡಗಿನ ಕಾಂಗ್ರೆಸ್ ಬದಲಾಗಿದ್ದು, ಜನರು ಕೂಡ ಜನರೂ ಬದಲಾಗಿದ್ದಾರೆ. ಪಕ್ಷವು ತಳ ಮಟ್ಟದಿಂದಲೇ ಸಂಘಟನೆಯಾಗಿದ್ದು, ಮಂಥರ್ ಗೌಡ ಸಮರ್ಥ ನಾಯಕ ಎಂಬುದು ಜನರ ಅರಿವಿಗೆ ಬಂದಿದೆ. ಪಕ್ಷದಲ್ಲಿರುವ ಕೆಲವು ಗೊಂದಲ, ಅಸಮಾಧಾನಗಳು ನಿವಾರಣೆಯಾಗಲಿವೆ. ಮಂಥರ್‌ಗೌಡ ಕೊಡಗಿನವರಾಗಿದ್ದು, ಎಲ್ಲರೂ ಬೆಂಬಲ ನೀಡುವ ವಿಶ್ವಾಸವಿದೆ ಎಂದು ರಮಾನಾಥ್ ಹೇಳಿದರು.


ಸುದ್ದಿಗೋಷ್ಠಿಯಲ್ಲಿ ಪಕ್ಷದ ಜಿಲ್ಲಾ ಕಾರ್ಯದರ್ಶಿ ಜನಾರ್ಧನ್, ಡಿಸಿಸಿ ಸದಸ್ಯರಾದ ಸುನಿಲ್ ಪತ್ರಾವೋ, ಚುಮ್ಮಿ ದೇವಯ್ಯ, ಪ್ರಕಾಶ್ ಆಚಾರ್ಯ ಹಾಜರಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net