

ಚಿತ್ರದುರ್ಗ: ವಿಧಾನಸಭಾ ಚುನಾವಣೆಯಲ್ಲಿ ಎಲ್ಲಾ ಪಕ್ಷಗಳು ಕಾಡುಗೊಲ್ಲ ಸಮುದಾಯದವರಿಗೆ ಕನಿಷ್ಠ 10 ಕ್ಷೇತ್ರಗಳಲ್ಲಾದರೂ ಸ್ಪರ್ಧಿಸಲು ಟಿಕೆಟ್ ನೀಡಬೇಕು ಎಂದು ಜಿಲ್ಲಾ ಕಾಡುಗೊಲ್ಲ ಪದವೀಧರರ ಎಸ್ಟಿ ಮೀಸಲಾತಿ ಹೋರಾಟ ಸಮಿತಿ, ಜುಂಜಪ್ಪ ಯುವವೇದಿಕೆ ಜಿಲ್ಲಾಧ್ಯಕ್ಷ ದುಮ್ಮಿ ಎ. ಚಿತ್ತಪ್ಪ ಒತ್ತಾಯಿಸಿದರು.
ಮಂಗಳವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿ, ಕಾಂಗ್ರೆಸ್ ಮೊದಲ ಪಟ್ಟಿ ಬಿಡುಗಡೆಯಾಗಿದ್ದು, ಇನ್ನುಳಿದ ಕ್ಷೇತ್ರಗಳಲ್ಲಾದರೂ ಪ್ರಾತಿನಿಧ್ಯ ನೀಡಬೇಕು. ಅದೇ ರೀತಿ ಬಿಜೆಪಿ, ಜೆಡಿಎಸ್ ಸೇರಿ ಉಳಿದ ಪಕ್ಷಗಳಲ್ಲೂ ಕಾಡುಗೊಲ್ಲರಿಗೆ ಅವಕಾಶ ಮಾಡಿಕೊಡಬೇಕು. ನೀಡದೆಯೇ ಕಡೆಗಣಿಸಿದಲ್ಲಿ ಎಲ್ಲಾ ಪಕ್ಷಗಳಿಗೆ ತಕ್ಕಪಾಠ ಕಲಿಸಲಾಗುವುದು ಹೇಳಿದರು.
ಕಾಡುಗೊಲ್ಲ ಸಮುದಾಯವನ್ನು ಎಸ್ಟಿ ಪಟ್ಟಿಗೆ ಸೇರಿಸಬೇಕು. ನಿಗಮದಲ್ಲಿರುವ ಹಣವನ್ನು ಈ ವರ್ಷವೇ ಬಳಕೆ ಮಾಡಬೇಕು. ವಿದ್ಯಾರ್ಥಿಗಳಿಗೆ ಪ್ರತ್ಯೇಕ ಹಾಸ್ಟೆಲ್ ತೆರೆದು ವಿದ್ಯಾರ್ಥಿ ವೇತನವನ್ನು 15 ಸಾವಿರ ರೂ.ಗೆ ಹೆಚ್ಚಿಸಬೇಕು. ಅಲೆಮಾರಿ ಮತ್ತು ಅರೆಅಲೆಮಾರಿ ವಸತಿ ಯೋಜನೆಯಡಿಯಲ್ಲಿ ಮನೆ ನಿರ್ಮಿಸಿಕೊಳ್ಳಲು 10 ಲಕ್ಷ ರೂ. ಸಹಾಯಧನ ನೀಡಬೇಕು. ರಾಜ್ಯದ ಎಲ್ಲಾ ಹಟ್ಟಿಗಳಲ್ಲಿ ಮೂಲ ಸೌಕರ್ಯ ಕಲ್ಪಿಸಲು ಸರ್ಕಾರ ಅನುದಾನ ಹೆಚ್ಚಿಸಿ, ಮಂಜೂರು ಮಾಡಬೇಕು ಎಂದು ಕೋರಿದರು.
ಮುಖಂಡರಾದ ಮಧುಗೌಡ, ಈರಪ್ಪ, ಮೋಹನ್, ನಾಗೇಂದ್ರಪ್ಪ, ನರಸಿಂಹಮೂರ್ತಿ, ರೇವಣಸಿದ್ದಪ್ಪ ಇತರರಿದ್ದರು.