

ತುಮಕೂರು : ಪಕ್ಷ ಸಂಘಟನೆಯಲ್ಲಿ ಸಕ್ರಿಯವಾಗಿ ತೊಡಗಿಸಿಕೊಳ್ಳದೆ ಒಕ್ಕಲಿಗರ ಹೆಸರಲ್ಲಿ ಯಲಚವಾಡಿ ನಾಗರಾಜು ವಿಧಾನಪರಿಷತ್‌ಗೆ ಟಿಕೆಟ್ ಕೇಳುತ್ತಿರುವುದು ನಾಚಿಕೆಗೇಡಿನ ಸಂಗತಿ ಎಂದು ಬಯಲು ಸೀಮೆ ಅಭಿವೃದ್ಧಿ ಮಂಡಳಿ ಮಾಜಿ ಅಧ್ಯಕ್ಷ, ಕಾಂಗ್ರೆಸ್ ಮುಖಂಡ ಕಲ್ಲಹಳ್ಳಿ ದೇವರಾಜು ಟೀಕಿಸಿದರು.
ಗ್ರಾಮಾಂತರ ವಿಧಾನಸಭಾ ಕ್ಷೇತ್ರದಿಂದ 2013ರಲ್ಲಿ ಕಾಂಗ್ರೆಸ್ಸಿನಿಂದ ಸ್ಪರ್ಧಿಸಿ, ಅತ್ಯಂತ ಹೀನಾಯವಾಗಿ ಸೋತು ಠೇವಣಿ ಕಳೆದುಕೊಂಡಿರುವ ಯಲಚವಾಡಿ ನಾಗರಾಜು, ಒಕ್ಕಲಿಗರ ಹೆಸರು ಹೇಳಿಕೊಂಡು ಸ್ಥಳೀಯ ಸಂಸ್ಥೆಗಳಿಂದ ನಡೆಯಲಿರುವ ಪರಿಷತ್‌ಗೆ ಟಿಕೆಟ್ ಕೇಳುತ್ತಿರುವುದಕ್ಕೆ ಕಾಂಗ್ರೆಸ್‌ನ ಎಲ್ಲಾ ಒಕ್ಕಲಿಗ ಮುಖಂಡರು ವಿರೋಧವಿದೆ. ಜಾತಿ ಬಳಸಿಕೊಳ್ಳುವುದು ಖಂಡನೀಯ ಎಂದು ನಗರದಲ್ಲಿ ಮಂಗಳವಾರ ಜಂಟಿ ಸುದ್ದಿಗೋಷ್ಠಿಯಲ್ಲಿ ತಿರುಗೇಟು ನೀಡಿದರು.
ಜಿಲ್ಲೆಯಲ್ಲಿ ಪ್ರಸ್ತುತ 330 ಗ್ರಾಪಂಯಿಂದ 1100 ಒಕ್ಕಲಿಗ, 600 ಲಿಂಗಾಯಿತ, ಪರಿಶಿಷ್ಟ ಜಾತಿ, ವರ್ಗ ಮತ್ತು ಒಬಿಸಿಯಿಂದ 3626 ಮತ್ತು ನಗರಪಾಲಿಕೆ, ನಗರಸಭೆ, ಪುರಸಭೆ, ಪಟ್ಟಣ ಪಂಚಾಯಿತಿ ಸೇರಿ 258 ಸೇರಿ ಒಟ್ಟು 5376 ಮತದಾರರಿದ್ದಾರೆ. ಕೇವಲ ಜಾತಿ, ಹಣ ಬಲದಿಂದ ಪರಿಷತ್ ಚುನಾವಣೆ ಗೆಲ್ಲಲು ಸಾಧ್ಯವಿಲ್ಲ. ಕಷ್ಟ ಸುಖಗಳಿಗೆ ಸ್ಪಂದಿಸುವ ಸದಾ ಜನರ ಜತೆ ಒಡನಾಟ ಹೊಂದಿರುವರನ್ನು ಪಕ್ಷಾತೀತವಾಗಿ ಎಲ್ಲರೂ ಪ್ರೀತಿಸುತ್ತಾರೆ. ಈ ನಿಟ್ಟಿನಲ್ಲಿ ಜಿಲ್ಲೆ ಜನರ ಮನಸು ಗೆದ್ದಿರುವ ರಾಜೇಂದ್ರಗೆ ಟಿಕೆಟ್ ನೀಡುವುದರಿಂದ ಪಕ್ಷಕ್ಕೆ ಗೆಲುವು ನಿಶ್ಚಿತ ಎಂದರು.
ಜಾತ್ಯಾತೀತ, ಪಕ್ಷಾತೀತವಾಗಿ ಜನರ ಸಂಕಷ್ಟಗಳಿಗೆ ನೆರವಾಗುವ ಮಾಜಿ ಶಾಸಕ ಕೆ.ಎನ್.ರಾಜಣ್ಣ ಸರ್ವಜನಾಂಗದ ನಾಯಕರೆನಿಸಿದ್ದಾರೆ. ನಮ್ಮ ಸಮಾಜದ ಜತೆ ಉತ್ತಮ ಒಡನಾಟ ಹೊಂದಿದ್ದು ಅವರ ಪುತ್ರ ರಾಜೇಂದ್ರಗೆ ಪರಿಷತ್‌ನಿಂದ ಕಣಕ್ಕಿಳಿಸಿದರೆ ಕಾಂಗ್ರೆಸ್ ಗೆಲ್ಲಲ್ಲು ಸಾಧ್ಯ. ಈ ಹಿನ್ನೆಲೆಯಲ್ಲಿ ಪಕ್ಷದ ಹೈಕಮಾಂಡ್ ಹಾಗೂ ಸ್ಥಳೀಯ ಮುಖಂಡರು ಗೆಲ್ಲುವ ಸಮರ್ಥ ಅಭ್ಯರ್ಥಿ ಆಯ್ಕೆ ಮಾಡಲಿ. ಪಕ್ಷ ಸಂಘಟನೆಯಿಂದೆ ದೂರ ಉಳಿದಿದ್ದ ಯಲಚವಾಡಿ ಈಗ ಟಿಕೆಟ್‌ಗೆ ಆಗ್ರಹಿಸುತ್ತಿರುವ ಹಿಂದೆ ಪಿತೂರಿ ಅಡಗಿದೆ ಎಂದು ಬೈರವೇಶ್ವರ ಬ್ಯಾಂಕ್ ಮಾಜಿ ಅಧ್ಯಕ್ಷ ಚಿಕ್ಕರಂಗೇಗೌಡ ದೂರಿದರು.
ಒಕ್ಕಲಿಗ ಮುಖಂಡರ ದಂಡು : ಸಹಕಾರ ಮಹಾಮಂಡಳದ ರಾಜ್ಯಾಧ್ಯಕ್ಷ ಟಿ.ಜಿ.ವೆಂಕಟೇಗೌಡ, ಡಿಸಿಸಿ ಬ್ಯಾಂಕ್ ನಿರ್ದೇಶಕರಾದ ನಾಗೇಶ್‌ಬಾಬು, ಈಶ್ವರಯ್ಯ, ಮಧುಗಿರಿ ಬಿಸಿಸಿ ಅಧ್ಯಕ್ಷ ರಾಜಗೋಪಾಲ್, ಮುಖಂಡರಾದ ತುರುವೇಕೆರೆ ದೇವರಾಜು, ಭರತ್‌ಗೌಡ, ವಿಜಯಕುಮಾರ್, ರಾಮಲಿಂಗಾರೆಡ್ಡಿ, ಶಿವರಾಮ್, ಜಯರಾಂ, ದಾನಿಗೌಡ, ಶ್ರೀನಿವಾಸ್, ವೆಂಕಟೇಶ್, ಶಿವಕುಮಾರ್, ನಾರಾಯಣಗೌಡ, ಜಿ.ಎಲ್.ಮೂರ್ತಿ, ಕೆಂಚಪ್ಪ, ರಾಜಕುಮಾರ್, ಸುವರ್ಣಮ್ಮ ಸೇರಿ ನೂರಾರು ಒಕ್ಕಲಿಗ ಮುಖಂಡರ ದಂಡೇ ಸುದ್ದಿಗೋಷ್ಠಿಯಲ್ಲಿ ಹಾಜರಿರುವ ಮೂಲಕ ಮಾಜಿ ಶಾಸಕ ಕೆ.ಎನ್.ರಾಜಣ್ಣ ಪುತ್ರ ರಾಜೇಂದ್ರ ಪರ ಶಕ್ತಿಪ್ರದರ್ಶನ ನಡೆಸಿದರು.
ಜಯಚಂದ್ರ, ನಾರಾಯಣ್‌ಗೆ ಟಿಕೆಟ್ ಕೊಡಲಿ : ಒಂದು ವೇಳೆ ಪಕ್ಷದ ಹೈಕಮಾಂಡ್ ಪರಿಷತ್ ಚುನಾವಣೆಯಲ್ಲಿ ಒಕ್ಕಲಿಗ ಸಮುದಾಯದ ಅಭ್ಯರ್ಥಿ ಕಣಕ್ಕಿಳಿಸಲು ಮನಸು ಮಾಡಿದ್ದೇ ಆದರೆ ಹಿರಿಯರಾದ ಆರ್.ನಾರಾಯಣ್, ಮಾಜಿ ಸಚಿವ ಟಿ.ಬಿ.ಜಯಚಂದ್ರ ಅವರಿಗೆ ಟಿಕೆಟ್ ನೀಡಲಿ. ಯಾವುದೇ ಕಾರಣಕ್ಕೂ ಯಲಚವಾಡಿಗೆ ಟಿಕೆಟ್ ಕೊಡಬಾರದು. ಅವರನ್ನು ಬಿಟ್ಟು ಪಕ್ಷ ಘೋಷಿಸುವ ಯಾವುದೇ ಅಭ್ಯರ್ಥಿಯನ್ನು ಒಕ್ಕಲಿಗ ಸಮುದಾಯ ಬೆಂಬಲಿಸಲಿದೆ ಎಂದು ಕಲ್ಲಹಳ್ಳಿ ದೇವರಾಜು ಹೇಳಿದರು.