ಚೀನಾ ಸರ್ಕಾರದ ವಿರುದ್ಧ ಟಿಬೆಟಿಯನ್ನರ ಪ್ರತಿಭಟನೆ

16
Published on

ಮೈಸೂರು: ಟಿಬೆಟ್‌ನ ಪಂಚನ್ ಲಾಮಾ ಸೇರಿದಂತೆ ಎಲ್ಲ ರಾಜಕೀಯ ಕೈದಿಗಳ ಬಿಡುಗಡೆ ಆಗ್ರಹಿಸಿ ಚೀನಾ ಸರ್ಕಾರದ ವಿರುದ್ಧ ಟಿಬೆಟಿಯನ್ನರು ನಗರದಲ್ಲಿ ಪ್ರತಿಭಟನೆ ನಡೆಸಿದರು.

ಟಿಬೆಟಿಯನ್ ಯುವ ಕಾಂಗ್ರೆಸ್, ಮೈಸೂರು ಪ್ರಾಂತೀಯ ಟಿಬೆಟಿಯನ್ ಮಹಿಳಾ ಸಂಘಟಣೆ ಮತ್ತು ಬೈಲಕುಪ್ಪೆ, ಹುಣಸೂರು ಮತ್ತು ಕೊಳ್ಳೆಗಾಲ ಟಿಬೆಟಿಯನ್ ವಿದ್ಯಾರ್ಥಿ ಸಂಘದಿಂದ ಪ್ರತಿಭಟನೆ ನಡೆಸಿ, ವಿಶ್ವಸಂಸ್ಥೆ ಮಧ್ಯೆ ಪ್ರವೇಶಿಸಬೇಕು ಎಂದು ಆಗ್ರಹಿಸಿದರು.

ಟಿಬೆಟಿನ ಪಂಚೆನ್ ಲಾಮಾ, ಗಡು ಚೂಯಿ ನೀಮಾ ಅಪಹರಣ ಹಾಗೂ ಕಣ್ಮರೆಯಾಗಿ 30ನೇ ವರ್ಷವಾಗಿದೆ. 1995ರ ಈ ದಿನದಂದು ಪಂಚನ್ ಲಾಮಾ ತನ್ನ 6ನೇ ವಯಸ್ಸಿನಲ್ಲಿ ಚೀನಾ ಆಡಳಿತದಿಂದ ಅಪಹರಣಕ್ಕೊಳಪಟ್ಟ ಪ್ರಪಂಚದ ಅತ್ಯಂತ ಕಿರಿಯ ರಾಜಕೀಯ ಕೈದಿ ಎನಿಸಿದ್ದಾರೆ ಎಂದರು.

ಆದರೆ ಇವತ್ತಿನವರೆಗೂ ಅವರ ಬಗ್ಗೆ ಯಾವುದೇ ರೀತಿಯ ಮಾಹಿತಿ ಇಲ್ಲ. ಟಿಬೆಟಿಯನ್ನರು ಪಂಚೆನ್ ಲಾಮಾರ ಆರೋಗ್ಯ ಹಾಗೂ ಧಾರ್ಮಿಕ ಶಿಕ್ಷಣದ ಬಗ್ಗೆ ತೀವು ಕಳವಳ ಹೊಂದಿದ್ದಾರೆ ಎಂದು ಹೇಳಿದರು.

ಟಿಬೆಟಿನ ಮಾನವ ಹಕ್ಕು ಹಾಗೂ ಪ್ರಜಾಸತ್ತೆಯ ಕೇಂದ್ರದ ಮಾಹಿತಿಯ ಪ್ರಕಾರ 2500ಕ್ಕೂ ಹೆಚ್ಚು ರಾಜಕೀಯ ಕೈದಿಗಳಿದ್ದಾರೆ. ಇವೆಲ್ಲದರ ಬಗ್ಗೆ ಚೀನಾ ಆಡಳಿತ ಉತ್ತರ ನೀಡಬೇಕು. 11ನೇ ಪಂಚನ್ ಲಾಮಾ ಹಾಗೂ ಇತರ ಎಲ್ಲ ರಾಜಕೀಯ ಕೈದಿಗಳನ್ನು ಬಿಡುಗಡೆ ಮಾಡಬೇಕು ಎಂದು ಕೈ ಜಿಂಗ್ ಪಿಂಗ್ ನೇತೃತ್ಯದ ಚೀನಾ ಸರ್ಕಾರವನ್ನು ಒತ್ತಾಯಿಸುತ್ತೇವೆ ಎಂದು ಪ್ರತಿಭಟನಾನಿರತರು ತಿಳಿಸಿದರು.

ಟಿಬೆಟಿಯನ್ ಜನರ ಹಕ್ಕು ಹಾಗೂ ಭಾವನೆಗಳನ್ನು ಗೌರವಿಸಬೇಕು. ಎಲ್ಲ ರಾಜಕೀಯ ಕೈದಿಗಳನ್ನು ಬಿಡುಗಡೆಗೊಳಿಸಬೇಕು. ದಲಾಯಿ ಲಾಮಾ ಅವರ ಮಧ್ಯಸ್ಥಿಕೆ ಒಪ್ಪಿಕೊಳ್ಳಬೇಕು. ಹಾಗೆಯೇ ಟಿಬೆಟಿನ ಪ್ರಾಥಮಿಕ ಶಾಲೆಗಳಲ್ಲಿ ಚೀನಾದ ದ್ವಿಭಾಷಾ ನೀತಿಯನ್ನು ನಿಲ್ಲಿಸಬೇಕು ಎಂದರು.

ವಿಶ್ವ ಸಂಸ್ಥೆಯ ಮಾನವ ಹಕ್ಕು ಸಮಿತಿಯು 11ನೇ ಪಂಚನ್ ಲಾಮಾ ಗೆಡುನ್ ಚೊಯೀ ನೀಮಾ ಅವರ ಇರುವಿಕೆ ಹಾಗೂ ಅವರ ಶಿಕ್ಷಣದ ಬಗ್ಗೆ ಮಧ್ಯೆ ಪ್ರವೇಶಿಸಿ ಕಾಳಜಿ ವಹಿಸಬೇಕು ಎಂದು ಆಗ್ರಹಿಸಿದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net