

ಹುಬ್ಬಳ್ಳಿ: ಶರವೇಗದಲ್ಲಿ ಅಭಿವೃದ್ಧಿ ಹೊಂದುತ್ತಿರುವ ಮಹಾನಗರಗಳಲ್ಲಿ ಸ್ವಂತ ಉದ್ಯೋಗ ಸೃಷ್ಟಿಸುವ ಮೂಲಕ ಯುವ ಸಮುದಾಯಕ್ಕೆ ವಿವಿಧ ಕ್ಷೇತ್ರದಲ್ಲಿ ಇರುವ ವಿಪುಲ ಅವಕಾಶಗಳ ಬಗ್ಗೆ ಜಾಗೃತಿ ಮೂಡಿಸಲು ಟೈ ಹುಬ್ಬಳ್ಳಿ ವತಿಯಿಂದ ಶನಿವಾರ "ಫ್ರಾಂಚೈಸ್ ಬ್ರಿಗೇಡ್ ಎಂಬ ವಿನೂತನ ಕಾರ್ಯಕ್ರಮ ಆಯೋಜಿಸಲಾಗಿತ್ತು.
ಇಲ್ಲಿಯ ಗೋಕುಲ ರಸ್ತೆಯ ಖಾಸಗಿ ಹೊಟೇಲ್ ನಲ್ಲಿ ಶ್ರೀದುರ್ಗಾ ಡೆವಲಪರ್ಸ್ ಮತ್ತು ಪ್ರಮೋರ್ಟಸ್ ಮುಖ್ಯ ಪ್ರಾಯೋಜಕತ್ವದಲ್ಲಿ ಏರ್ಪಡಿಸಿದ್ದ ಕಾರ್ಯಕ್ರಮದ ಉದ್ಘಾಟನೆ ನೆರವೇರಿಸಿ ಮಾತನಾಡಿದ ಶಾಸಕ ಮಹೇಶ ಟೆಂಗಿನಕಾಯಿ, ಸ್ಟಾರ್ಟ್ ಅಪ್ ಕಂಪನಿಗಳು ಮುಖ್ಯ ವಾಹಿನಿಯಲ್ಲಿ ಗುರುತಿಸಿಕೊಳ್ಳುವಂತಾಗಬೇಕು. ಈ ಮೂಲಕ ರಾಜ್ಯದ ಟಯರ್ -2 ಮತ್ತು 3 ಸಿಟಿಗಳಲ್ಲಿ ಉದ್ಯೋಗಾವಕಾಶಗಳನ್ನು ಹೆಚ್ಚಿಸಲು ಟೈ ಸಂಸ್ಥೆಯು ತನ್ನದೇ ಆದ ಕೊಡುಗೆ ನೀಡುತ್ತ ಬಂದಿದೆ ಎಂದರು.
ಸ್ವಯಂ ಉದ್ಯೋಗ ಸೃಷ್ಟಿಸಲು ಅವಕಾಶ ಕಲ್ಪಿಸಿಕೊಡುವ ಇಂತಹ ಕಾರ್ಯಕ್ರಮಕ್ಕೆ ಮುಖ್ಯ ಪ್ರಾಯೋಜಕತ್ವ ವಹಿಸುವ ಮೂಲಕ ಶ್ರೀದುರ್ಗಾ ಡೆವಲಪರ್ಸ್ ಮತ್ತು ಪ್ರಮೋರ್ಟಸ್ ಎಂಡಿ ವಿರೇಶ ಉಂಡಿ ಅವರು ಯುವ ಸಮುದಾಯ ಸ್ವಂತ ಉದ್ಯೋಗ ಆರಂಭಿಸಲು ಹುರಿದುಂಬಿಸಿದ್ದಾರೆ ಎಂದು ಮೆಚ್ಚುಗೆ ವ್ಯಕ್ತಪಡಿಸಿದರು.
ದ್ವೀತಿಯ ಸ್ತರದ ನಗರಗಳು ಇಂದು ಹತ್ತು ಹಲವು ರೀತಿಯಲ್ಲಿ ಅಭಿವೃದ್ಧಿ ಹೊಂದುತ್ತಿವೆ. ಆಯಾ ನಗರದಲ್ಲಿ ಉತ್ಪತ್ತಿಯಾಗುವ ಅವಕಾಶಗಳನ್ನು ಹೆಕ್ಕಿ ತೆಗೆಯುವ ಮೂಲಕ ಸ್ವಂತ ಉದ್ಯೋಗದಲ್ಲಿ ಸಾಧನೆ ಮಾಡುವ ಹತ್ತಾರು ಜನರಿಗೆ ಅವಕಾಶ ಕಲ್ಪಿಸುವ ಮಹತ್ತರ ಜವಾಬ್ದಾರಿ ಯುವ ಸಮುದಾಯದ ಮೇಲಿದೆ ಎಂದರು.
ಫ್ರಾಂಚೈಸ್ ಬ್ರಿಗೇಡ್ ಕಾರ್ಯಕ್ರಮದಲ್ಲಿ ಸುಮಾರು 20ಕ್ಕೂ ಹೆಚ್ಚು ಪ್ರತಿಷ್ಠಿತ ಕಂಪನಿಗಳು ಭಾಗವಹಿಸಿ ತಮ್ಮ ಬ್ರ್ಯಾಂಡ್ ಅನ್ನು ಉತ್ತಮ ರೀತಿಯಲ್ಲಿ ಮನವರಿಕೆ ಮಾಡಿಕೊಡಲು ಮುಂದಾಗಿವೆ. ಅಲ್ಲದೇ ವಹಿವಾಟು ಹೆಚ್ಚಿಸಿಕೊಳ್ಳಲು ಮುಂದಾಗಿರುವುದು ಉತ್ತಮ ಪ್ರಯೋಗವಾಗಿದೆ ಎಂದು ಶಾಸಕ ಟೆಂಗಿನಕಾಯಿ ಅಭಿಪ್ರಾಯಪಟ್ಟರು.
ರಿಯಲ್ ಎಸ್ಟೇಟ್ ಉದ್ಯಮದಲ್ಲಿ ಅವಳಿನಗರ ಸೇರಿದಂತೆ ಉತ್ತರ ಕರ್ನಾಟಕದಾದ್ಯಂತ ತಮ್ಮದೇ ಆದ ಛಾಪು ಮೂಡಿಸಿರುವ ಶ್ರೀದುರ್ಗಾ ಡೆವಲಪರ್ಸ್ ಮತ್ತು ಪ್ರಮೋರ್ಟಸ್ ಎಂಡಿ ವಿರೇಶ ಉಂಡಿ ಅವರು ಯುವ ಸಮುದಾಯಕ್ಕೆ ಪ್ರೇರಣೆಯಾಗಿದ್ದಾರೆ ಎಂದರು.
ಶ್ರೀದುರ್ಗಾ ಡೆವಲಪರ್ಸ್ ಮತ್ತು ಪ್ರಮೋರ್ಟಸ್ ಎಂಡಿ ವಿರೇಶ ಉಂಡಿ ಮಾತನಾಡಿ, ಯುವ ಸಮುದಾಯ ವಿದ್ಯಾಭ್ಯಾಸ ಪೂರೈಸಿದ ನಂತರ ಸರ್ಕಾರಿ ಉದ್ಯೋಗಕ್ಕಾಗಿ ಕಾಯದೇ ಇಂತಹ ಕಾರ್ಯಕ್ರಮಗಳಲ್ಲಿ ಪಾಲ್ಗೊಳ್ಳುವ ಮೂಲಕ ಪ್ರತಿಷ್ಠಿತ ಕಂಪನಿಗಳ ಫ್ರಾಂಚೈಸಿ ಪಡೆದುಕೊಂಡು ಸಾಧನೆ ಮಾಡಬಹುದು. ಮಹಾನಗರಗಳ ಅಭಿವೃದ್ಧಿಗೆ ತಮ್ಮದೇ ಆದ ಕೊಡುಗು ನೀಡಬಹುದು ಎಂದರು.
ಟೈ ಹುಬ್ಬಳ್ಳಿ ಅಧ್ಯಕ್ಷ ಡಾ. ವಿವೇಕ ಪಾಟೀಲ, ಉಪಾಧ್ಯಕ್ಷ ಗಿರೀಶ ಮಾನೆ, ಕಾರ್ಯದರ್ಶಿ ನಾಗರಾಜ ಕೊಟಗಿ ಹಾಗೂ ಆಡಳಿತ ಮಂಡಳಿ ಸದಸ್ಯರು ಉಪಸ್ಥಿತರಿದ್ದರು.