

ತುಮಕೂರು: ಜಿಲ್ಲೆಯಲ್ಲಿ ಕರೊನಾ ಆರ್ಭಟ ಮುಂದುವರಿದಿದೆ. ಗುರುವಾರ ಕೂಡ 117 ಜನರಲ್ಲಿ ಸೋಂಕು ದೃಢವಾಗಿದ್ದು, ಇಬ್ಬರು ಮೃತಪಟ್ಟಿದ್ದಾರೆ. 102 ಮಂದಿ ಗುಣಮುಖರಾಗಿ ಮನೆಗೆ ತೆರಳಿದ್ದಾರೆ.
ಒಟ್ಟು ಸೋಂಕಿತರ ಸಂಖ್ಯೆ 3866ಕ್ಕೇರಿದ್ದು, 980 ಸಕ್ರಿಯ ಪ್ರಕರಣಗಳು ಜಿಲ್ಲೆಯ ವಿವಿಧ ಆಸ್ಪತ್ರೆ ಹಾಗೂ ಕೋವಿಡ್ ಕೇರ್ ಸೆಂಟರ್‌ಗಳಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ. ಭವಿಷ್ಯದಲ್ಲಿ ಇನ್ನೂ ಸೋಂಕಿತರ ಸಂಖ್ಯೆ ಹೆಚ್ಚಾಗುವ ಆತಂಕ ಎದುರಾಗಿದ್ದು ಜಿಲ್ಲಾಡಳಿತ ಸೂಕ್ತ ಚಿಕಿತ್ಸೆಗೆ ಸಜ್ಜಾಗುತ್ತಿದೆ.
ತುಮಕೂರು ತಾಲೂಕಿನಲ್ಲಿ ಕರೊನಾ ಸೋಂಕಿತರ ಸಂಖ್ಯೆ ಜಾಸ್ತಿಯಾಗುತ್ತಿದ್ದು, ಗುರುವಾರ ಬರೋಬ್ಬರಿ 63 ಜನರಲ್ಲಿ ಸೋಂಕು ದೃಢವಾಗಿದೆ, ಪಾವಗಡ 14, ಮಧುಗಿರಿ 10, ತಿಪಟೂರು 9, ತುರುವೇಕೆರೆ 6, ಶಿರಾ 4, ಕುಣಿಗಲ್ 2, ಗುಬ್ಬಿ 5 ಹಾಗೂ ಚಿಕ್ಕನಾಯಕನಹಳ್ಳಿ ತಾಲೂಕಿನಲ್ಲಿ ನಾಲ್ವರಿಗೆ ಸೋಂಕು ದೃಢವಾಗಿದೆ. ಇವರೆಲ್ಲರ ಪ್ರಾಥಮಿಕ ಸಂಪರ್ಕದಲ್ಲಿದ್ದ 154 ಹಾಗೂ ದ್ವಿತೀಯ ಸಂಪರ್ಕದಲ್ಲಿದ್ದ 12 ಜನರನ್ನು ಗುರುತಿಸಿ ಕ್ವಾರಂಟೈನ್ ಮಾಡಲಾಗಿದೆ. ಗುರುವಾರದ ಸೋಂಕಿತರಲ್ಲಿ 77 ಪುರುಷ ಹಾಗೂ 40 ಮಹಿಳೆಯರಿದ್ದಾರೆ. ಐದು ವರ್ಷದೊಳಗಿನ ಇಬ್ಬರು ಮಕ್ಕಳು ಹಾಗೂ 60 ವರ್ಷ ಮೇಲ್ಪಟ್ಟ 14 ಜನರು ಕೂಡ ಸೋಂಕಿಗೆ ಸಿಕ್ಕಿಬಿದ್ದಿದ್ದಾರೆ.
ತುಮಕೂರು ನಗರದ ಸಪ್ತಗಿರಿ ಬಡಾವಣೆಯ 64 ವರ್ಷದ ಪುರುಷ ಹಾಗೂ ಗುಬ್ಬಿ ತಾಲೂಕು ಕಡಬ ಗ್ರಾಮದ 59 ವರ್ಷದ ಮಹಿಳೆ ಚಿಕಿತ್ಸೆ ಫಲಕಾರಿಯಾಗದೆ ಮೃತಪಟ್ಟಿದ್ದು, ಸಾವಿನ ಸಂಖ್ಯೆ 119ಕ್ಕೇರಿದೆ. ಜಿಲ್ಲೆಯಲ್ಲಿ ಕರೊನಾ ಸೋಂಕಿತರು ಹೆಚ್ಚಿನ ಸಂಖ್ಯೆಯಲ್ಲಿ ಮೃತಪಡುತ್ತಿರುವುದು ಜನರನ್ನು ಭಯಕ್ಕೀಡುಮಾಡಿದ್ದು ಜಿಲ್ಲಾಡಳಿತ ಸಾವಿನ ಸಂಖ್ಯೆ ಕಡಿಮೆ ಮಾಡುವ ನಿಟ್ಟಿನಲ್ಲಿ ಚಿಂತಿಸಬೇಕಿದೆ.
ಗುರುವಾರ ಪಾವಗಡದ ಇಬ್ಬರು ಗರ್ಭಿಣಿಯರಲ್ಲಿ ಸೋಂಕು ದೃಢವಾಗಿದೆ, ಸೋಂಕು ಪತ್ತೆಯಾದ 74 ಜನರಲ್ಲಿ ರೋಗದ ಯಾವುದೇ ಲಕ್ಷಣಗಳಿಲ್ಲದಿರುವುದು ಗಮನಾರ್ಹ. ಇನ್ನುಳಿದ 43 ಜನರಲ್ಲಿ ನೆಗಡಿ, ಗಂಟಲು ನೋವು ಹಾಗೂ ಜ್ವರದಂತಹ ಸಣ್ಣಪುಟ್ಟ ಲಕ್ಷಣಗಳಿದ್ದು ಕೋವಿಡ್ ಕೇರ್ ಸೆಂಟರ್‌ಗೆ ದಾಖಲಿಸಿಕೊಂಡು ಚಿಕಿತ್ಸೆ ನೀಡಲಾಗುತ್ತಿದೆ.
ರೋಗ ಲಕ್ಷಣ ಕಾಣಿಸಿದರೆ ಸಂಪರ್ಕಿಸಿ: ಮಧುಮೇಹ, ಅಧಿಕ ರಕ್ತದೊತ್ತಡ, ಜ್ವರ, ಕೆಮ್ಮು, ಶೀತ ಹಾಗೂ ಇನ್ನಿತರೆ ರೋಗ ಲಕ್ಷಣ ಕಾಣಿಸಿದರೆ ತಕ್ಷಣವೇ ಹತ್ತಿರದ ಆರೋಗ್ಯ ಕೇಂದ್ರಕ್ಕೆ ಭೇಟಿ ನೀಡಿ ಆರೋಗ್ಯ ತಪಾಸಣೆ ಮಾಡಿಸಿಕೊಳ್ಳಬೇಕು. ಅಗತ್ಯ ನೆರವಿಗೆ ದೂ.0816 2278387, 2251414, 2257368,2252025, 2278386 ಅಥವಾ ಸಹಾಯವಾಣಿ 104ಗೆ ಕರೆ ಮಾಡಬಹುದು.