

ಬೆಂಗಳೂರು:ರಾಜಧಾನಿಯ ಹಲವು ಬಡಾವಣೆಗಳಲ್ಲಿ ಶನಿವಾರ ಗುಡುಗು, ಬಿರುಗಾಳಿ ಸಹಿತ ವರುಣಾರ್ಭಟ ಜೋರಾಗಿತ್ತು. ಇದರಿಂದಾಗಿ ನಗರದ ಪ್ರಮುಖ ಜಂಕ್ಷನ್,ಅಂಡರ್ಪಾಸ್ಗಳಲ್ಲಿ ಮಳೆನೀರು ನಿಂತಿತ್ತು. ವಾಹನಗಳು ನಿಧಾನಗತಿಯಲ್ಲಿ ಸಾಗಿದವು. ರಸ್ತೆಗಳಲ್ಲಿ ಮಳೆನೀರು ನಿಂತಿದ್ದರಿಂದ ಹೆಬ್ಬಾಳ, ಜಾಲಹಳ್ಳಿ ಕ್ರಾಸ್, ಮೈಸೂರು ರಸ್ತೆ ಸೇರಿ ನಗರದ ಇತರೆ ಕಡೆಗಳಲ್ಲಿ ಸಂಚಾರ ಸಿಕ್ಕು ಉಂಟಾಗಿತ್ತು.ಹಲವು ಕಡೆಗಳಲ್ಲಿ ವಾಹನ ಸಂಚಾರಕ್ಕೆ ನಿರ್ಬಂಧ ವಿಧಿಸಿದ್ದ ಕಾರಣ ದಟ್ಟಣೆ ಉಂಟಾಯಿತು. ತಗ್ಗುಪ್ರದೇಶಗಳಲ್ಲಿ ನೀರು ನುಗ್ಗಿತ್ತು. ಮ್ಯಾನ್ಹೋಲ್ಗಳು ಉಕ್ಕಿ ಹರಿದು ರಸ್ತೆ ಮೇಲೆ ಕೊಳಚೆ ನೀರು ಹರಿಯುತ್ತಿತ್ತು.
ಎಚ್ಎಎಲ್ ವಿಮಾನ ನಿಲ್ದಾಣ ರಸ್ತೆಯಿಂದ ದೊಮ್ಮಲೂರು ಫ್ಲೈಓವರ್ ಕಡೆಗೆ, ಸ್ವಾಮಿ ವಿವೇಕಾನಂದ ರಸ್ತೆಯಿಂದ 80 ಅಡಿ ರಸ್ತೆ ಕಡೆಗೆ ಹಾಗೂ ವಸಂತನಗರದ ಅಂಡರ್ಪಾಸ್, ಐಟಿಟಿ ಭವನದಿಂದ ಬಾಣಸವಾಡಿ ಸರ್ವಿಸ್ ರಸ್ತೆ, ಹೆಬ್ಬಾಳ ರಸ್ತೆ, ಪುಟ್ಟೇನಹಳ್ಳಿ ಅಂಡರ್ಪಾಸ್, ಸಿಲ್ಕ್ ಬೋರ್ಡ್, ಕೆ.ಆರ್.ಪುರ ರಸ್ತೆಯಲ್ಲಿ ನೀರು ತುಂಬಿದ ಕಾರಣ ವಾಹನಗಳು ನಿಧಾನಗತಿಯಲ್ಲಿ ಸಾಗಿದವು. ಚೊಕ್ಕಸಂದ್ರ 46, ಬಾಗಲಕುಂಟೆ 35, ಬಾಣಸವಾಡಿ ಪೂರ್ವ 33, ವಿ.ನಾಗೇನಹಳ್ಳಿ 32, ಯಲಹಂಕ ಕೆಎಸ್ಎನ್ಡಿಎಂಸಿ 30, ಹೊರಮಾವು 26, ನಂದಿನಿ ಲೇಔಟ್26, ಶೆಟ್ಟಿಹಳ್ಳಿ 25, ಮನೋರಾಯನಪಾಳ್ಯ 24, ಜಕ್ಕೂರು 21, ಬಸವನಪುರ 20, ಪೀಣ್ಯ ಕೈಗಾರಿಕಾ ಪ್ರದೇಶ 16 ಮತ್ತು ಕೊಡಿಗೆಹಳ್ಳಿ 16 ಮಿಮೀ ಮಳೆ ಬಿದ್ದಿತ್ತು. ಬೆಳಗ್ಗೆಯಿಂದ ಮೋಡ ಕವಿದ ವಾತಾವರಣ ಕಾಣಿಸಿಕೊಂಡಿತ್ತು. ಮಧ್ಯಾಹ್ನ, ಸಂಜೆ ವೇಳೆ ಕೆಲ ಪ್ರದೇಶಗಳಲ್ಲಿ ಜೋರಾಗಿ ಬಿತ್ತು. ಗ್ರಾಹಕರ ಸಂಖ್ಯೆ ಕುಸಿತದಿಂದ ಸರಿಯಾಗಿ ವ್ಯಾಪಾರ ಇಲ್ಲದೆ ಬೀದಿಬದಿ ವ್ಯಾಪಾರಿಗಳು ನಷ್ಟ ಅನುಭವಿಸಿದ್ದರು.
ಕೃಷ್ಣರಾಜೇಂದ್ರ ಮಾರುಕಟ್ಟೆ, ಕೆಂಪೇಗೌಡ ಬಸ್ ನಿಲ್ದಾಣ, ಮೈಸೂರು ರಸ್ತೆ, ಕೆಂಗೇರಿ, ನಾಯಂಡಹಳ್ಳಿ, ಚಾಮರಾಜಪೇಟೆ, ಬಸವನಗುಡಿ, ಆರ್.ಟಿ.ನಗರ, ಬಿಟಿಎಂ ಲೇಔಟ್, ಕೆ.ಆರ್. ಪುರ, ಸಹಕಾರನಗರ, ಜಯನಗರ, ಬಸವನಗುಡಿ, ಜೆ.ಪಿ.ನಗರ, ಹನುಮಂತನಗರ, ಮಲ್ಲೇಶ್ವರ, ಯಶವಂತಪುರ,ಶಿವಾಜಿನಗರ, ವಿಜಯನಗರ, ದಾಸರಹಳ್ಳಿ, ವೈಟ್ಫೀಲ್ಡ್ ಹಾಗೂ ಸರ್ಜಾಪುರದಲ್ಲಿ ಮಳೆಯಾಗಿತ್ತು.
2 ದಿನ ಸಾಧಾರಣ ಮಳೆ: ಬೆಂಗಳೂರು ಮತ್ತು ಸುತ್ತಮುತ್ತ ಪ್ರದೇಶಗಳಲ್ಲಿ ಮುಂದಿನ 2 ದಿನ ಮೋಡ ಕವಿದ ವಾತಾವರಣ ಇರಲಿದೆ. ಈ ಅವಧಿಯಲ್ಲಿ ಗುಡುಗು ಸಹಿತ ಸಾಧಾರಣ ಮಳೆಯಾಗುವ ಸಂಭವ ಇದೆ. ಗಂಟೆಗೆ 40 ಕಿ.ಮೀ ವೇಗದಲ್ಲಿ ಬಿರುಗಾಳಿ ಬೀಸಲಿದೆ. ಗರಿಷ್ಠ ಮತ್ತು ಕನಿಷ್ಠ ತಾಪಮಾನ ಕ್ರಮವಾಗಿ 29 ಮತ್ತು 20 ಡಿ.ಸೆ. ಇರಲಿದೆ ಎಂದು ಹವಾಮಾನ ಇಲಾಖೆ ಮಾಹಿತಿ ಕೊಟ್ಟಿದೆ.