

ಮೈಸೂರು: ನಗರದಲ್ಲಿ ಸೋಮವಾರ ಸಂಜೆ ಗುಡುಗು ಸಹಿತ ಸುರಿದ ಮಳೆಗೆ ಜನಜೀವನ ಅಸ್ತವ್ಯಸ್ತಗೊಂಡಿತು. ಹಲವೆಡೆ ಮರದ ಕೊಂಬೆಗಳು ಮುರಿದು ಬಿದ್ದು, ಅವಾಂತರ ಸೃಷ್ಟಿಯಾಯಿತು. ನೆಲಕ್ಕುರುಳಿ ಸಂಚಾರಕ್ಕೆ ಅಡ್ಡಿಯಾಗಿದ್ದ ಮರಗಳ ಕೊಂಬೆಗಳನ್ನು ಪಾಲಿಕೆ ಸಿಬ್ಬಂದಿ ತೆರವುಗೊಳಿಸಿ, ಸುಗಮ ಸಂಚಾರಕ್ಕೆ ಅನುಕೂಲ ಮಾಡಿಕೊಟ್ಟರು.
ಬಹುತೇಕ ಕಡೆ ವಿದ್ಯುತ್ ತಂತಿಗಳ ಮೇಲೆ ಮರಗಳ ಕೊಂಬೆ ಉರುಳಿದ ಪರಿಣಾಮ ಕೆಲಕಾಲ ವಿದ್ಯುತ್ ಸಂಪರ್ಕ ಕಡಿತಗೊಂಡಿತ್ತು. ಬೆಳಗ್ಗೆಯಿಂದ ಮಧ್ಯಾಹ್ನದವರೆಗೂ ಬಿರು ಬಿಸಿಲು ಇತ್ತಾದರೂ ಸಂಜೆಯಾಗುತ್ತಿದ್ದಂತೆ ಸ್ವಲ್ಪ ಗಾಳಿ ಬೀಸಲು ಆರಂಭವಾಯಿತು. ಜತೆಯಲ್ಲಿ ಮಳೆಯೂ ಆರಂಭವಾಗಿ ಎರಡು ಗಂಟೆಗೂ ಹೆಚ್ಚು ಕಾಲ ಸುರಿಯಿತು. ಜೋರು ಮಳೆ ಸುರಿದ ಕಾರಣ ತಗ್ಗು ಪ್ರದೇಶಕ್ಕೆ ನೀರು ಹರಿಯಿತು. ಪರಿಣಾಮ, ಜನ ಮತ್ತು ವಾಹನ ಸಂಚಾರ ಅಸ್ತವ್ಯಸ್ತವಾಯಿತು.
ಬಯಲು ರಂಗಮಂದಿರ, ಅಕ್ಷಯಭಂಡಾರ್, ಎಸ್‌ಪಿ ಕಚೇರಿ ಬಳಿಯ ಮರದ ದೊಡ್ಡ ಕೊಂಬೆಗಳು ಉರುಳಿ ಬಿದ್ದವು. ತಕ್ಷಣ ಪಾಲಿಕೆಯ ಅಭಯ ತಂಡ ಮರವನ್ನು ತೆರವುಗೊಳಿಸಿತು. ಇನ್ನು ಮಳೆಯಿಂದ ಯಾವುದೇ ದೊಡ್ಡ ಮಟ್ಟದ ಹಾನಿ ಸಂಭವಿಸಿಲ್ಲ.