

ವಿಜಯಪುರ: ಬಿಸಿಲೂರು ಖ್ಯಾತಿಯ ವಿಜಯಪುರದಲ್ಲಿ ಮುಂಗಾರು ಪೂರ್ವ ಮಳೆ ಸಮೃದ್ಧವಾಗಿ ಸುರಿದ ಬೆನ್ನಲ್ಲೇ ಮುಂಗಾರಿನ ಆರ್ಭಟವೂ ಜೋರಾಗಿದ್ದು, ಭಾನುವಾರ ರಾತ್ರಿ ಸುರಿದ ಧಾರಾಕಾರ ಮಳೆ ಹಲವು ಅವಾಂತರಗಳನ್ನು ಸೃಷ್ಠಿಸಿದೆ.
ಗುಡುಗು ಸಿಡಿಲು ಮಿಂಚಿನಾರ್ಭಟದೊಂದಿಗೆ ಸುರಿದ ಧಾರಾಕಾರ ಮಳೆಗೆ ಮನೆಯ ಮೇಲ್ಛಾವಣಿ ಕುಸಿದು ಮಹಿಳೆಯೋರ್ವಳು ಅಸುನೀಗಿದ್ದಾಳೆ. ತಿಕೋಟಾ ತಾಲೂಕಿನ ಬಾಬಾನಗರ ಗ್ರಾಮದಲ್ಲಿ ರಾತ್ರಿ ಈ ಘಟನೆ ನಡೆದಿದ್ದು, ಸಂಗೀತಾ ಬಾಳನಗೌಡ ಪಾಟೀಲ (30) ಮೃತರಾಗಿದ್ದು, ಅದೃಷ್ಠವಶಾತ್ ಇನ್ನುಳಿದ ಕುಟುಂಬ ಸದಸ್ಯರು ಪ್ರಾಣಾಪಾಯದಿಂದ ಪಾರಾಗಿದ್ದಾರೆ. ಮಳೆಯಿಂದಾಗಿ ಮನೆ ಸೋರಿಕೆಯಾಗುತ್ತಿದ್ದ ವೇಳೆ ಬಾಳನಗೌಡ ಹಾಗೂ ಮಕ್ಕಳು ಹೊರಬಂದಿದ್ದು, ಇನ್ನೇನು ಸಂಗೀತಾ ಹೊರಬರಬೇಕೆನ್ನುವಷ್ಟರಲ್ಲಿಯೇ ಮೇಲ್ಚಾವಣಿ ಕುಸಿದಿದೆ. ಮಣ್ಣಲ್ಲಿ ಹುದುಗಿದ್ದ ಸಂಗೀತಾಳನ್ನು ಹೊರತೆಗೆಯಲಾಗಿದ್ದು, ಗ್ರಾಮದಲ್ಲಿ ದುಃಖ ಮಡುಗಟ್ಟಿದೆ.
ಬಬಲೇಶ್ವರ ತಾಲೂಕಿನ ಕಾತ್ರಾಳದಲ್ಲಿ ಸೋಮನಿಂಗ ಬಿರಾದಾರ ಎಂಬುವರ ಮನೆ ಭಾಗಶಃ ಹಾನಿಯಾಗಿದೆ. ದೇವರಹಿಪ್ಪರಗಿಯ ಹಂಚಲಿಯಲ್ಲಿ ಮುರಗಯ್ಯ ಈರಯ್ಯ ಮಠ ಹಾಗೂ ಕಡಕೋಳ ಗ್ರಾಮದ ಸಿದ್ದಲಿಂಗವ್ವ ಸಿದ್ದಪ್ಪ ಹರಿಜನ ಎಂಬುವರ ಮನೆ ಹಾನಿಗೀಡಾಗಿದೆ. ಜಿಲ್ಲೆಯ ವಿವಿಧೆಡೆ ಉಂಟಾದ ಹಾನಿಗೆ ಸಂಬಂಧಿಸಿದಂತೆ ಅಧಿಕಾರಿಗಳು ಮಾಹಿತಿ ಕಲೆ ಹಾಕುತ್ತಿದ್ದಾರೆ.