

ರಾಯಚೂರು/ವಿಜಯನಗರ: ರಾಜ್ಯದಲ್ಲಿ ಅಲ್ಲಲ್ಲಿ ಮಳೆಯ ಅಬ್ಬರ ಇಂದು ಜೋರಾಗಿದೆ. ಎರಡು ಪ್ರತ್ಯೇಕ ಪ್ರಕರಣಗಳಲ್ಲಿ ಸಿಡಿಲು ಬಡಿದು ಇಬ್ಬರು ಕುರಿಗಾಹಿಗಳು ಮೃತಪಟ್ಟ ಘಟನೆ ಸಂಭವಿಸಿದೆ.
ರಾಯಚೂರು ಜಿಲ್ಲೆಯ ಮಸ್ಕಿ ತಾಲೂಕಿನ ಚಿಲಕರಾಗಿಯಲ್ಲಿ ಕುರಿ ಮೇಯಿಸಲು ತೆರಳಿದ್ದ ಕುರಿಗಾಹಿ ಲಿಂಗಸಗೂರು ತಾಲೂಕಿನ ಆನಂದಗಲ್ ಗ್ರಾಮದ ಈರಪ್ಪ ಮೇದನಾಪೂರ (25) ಸಿಡಿಲು ಬಡಿತದಿಂದ ಸಾವನ್ನಪ್ಪಿದ್ದಾನೆ. ಕುರಿಗಾಯಿ ಜೊತೆ 17ಕ್ಕೂ ಅಧಿಕ ಕುರಿ ಹಾಗೂ ಮೇಕೆಗಳು ಬಲಿಯಾಗಿವೆ. ಮತ್ತೊಬ್ಬ ಕುರಿಗಾಯಿ ಕುಪ್ಪಣ್ಣನಿಗೆ ಗಂಭೀರ ಗಾಯವಾಗಿದೆ. ಈ ಕುರಿತು ಕವಿತಾಳ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ವಿಜಯನಗರ ಜಿಲ್ಲೆಯ ಕೂಡ್ಲಿಗಿ ತಾಲೂಕಿನ ಕುದುರೇಡೆವು ಗ್ರಾಮದಲ್ಲಿ ಕುರಿ ಮೇಯಿಸಲು ತೆರಳಿದ್ದ ನಿಂಗರಾಜ(26) ಎನ್ನುವ ಕುರಿಗಾಹಿ ಸಿಡಿಲು ಬಡಿತದಿಂದ ಸಾವನ್ನಪ್ಪಿದ್ದಾನೆ. ಗುಡುಗು, ಸಿಡಿಲಿನ ವಾತಾವರಣ ಇದ್ದರೂ ಕುರಿಗಳ ಜತೆ ಮನೆಗೆ ಹೋಗುತ್ತಿದ್ದ. ಈ ವೇಳೆ ಸಿಡಿಲು ಬಡಿದು ಸ್ಥಳದಲ್ಲೇ ಸಾವನ್ನಪ್ಪಿದ್ದಾನೆ. ಗುಡೇಕೋಟೆ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ಘಟನೆ ಸಂಭವಿಸಿದೆ.