

ಭರತ್ ಶೆಟ್ಟಿಗಾರ್ ಮಂಗಳೂರು
ಮಹಾನಗರ ಪಾಲಿಕೆ ವ್ಯಾಪ್ತಿಗೆ ನೀರು ಸರಬರಾಜು ಮಾಡುವ ವ್ಯವಸ್ಥೆಯ ತುಂಬೆ ಅಣೆಕಟ್ಟಿನ ಎಲ್‌ಎಲ್‌ಪಿಎಸ್ 1- 18ಎಂಜಿಡಿ ಮತ್ತು 81.7 ಎಂಎಲ್‌ಡಿ ರೇಚಕ ಸ್ಥಾವರದ ಜಾಕ್‌ವೆಲ್ ಮೇಲ್ದರ್ಜೆಗೇರಿಸುವ ಕಾಮಗಾರಿ ವೇಗವಾಗಿ ಸಾಗುತ್ತಿದ್ದು ಶೇ.70ರಷ್ಟು ಕೆಲಸ ಪೂರ್ಣಗೊಂಡಿದೆ. ಕಾಮಗಾರಿ ಮುಗಿಸಲು ಡಿ.24ರ ಗಡುವು ನೀಡಲಾಗಿದ್ದು, ವಾರದೊಳಗೆ ಮುಗಿಯುವ ನಿರೀಕ್ಷೆಯಿದೆ.
ಸ್ಮಾರ್ಟ್ ಸಿಟಿ ಯೋಜನೆಯಡಿ ಕೆಲಸ ಕೈಗೆತ್ತಿಕೊಳ್ಳಲಾಗಿದ್ದು, 9 ಕೋಟಿ ರೂ. ಮೊತ್ತದ ಟೆಂಡರ್‌ನಲ್ಲಿ 1.5 ಕೋಟಿ ರೂ. ರೇಚಕ ಸ್ಥಾವರ ಮೇಲ್ದರ್ಜೆಗೇರಿಸುವ ಕೆಲಸ ನಡೆಯುತ್ತಿದೆ. ಉಳಿದ ಮೊತ್ತದಲ್ಲಿ ಎರಡನೇ ಹಂತದಲ್ಲಿ ಅಣೆಕಟ್ಟಿನ ತಡೆಗೋಡೆ ಮರು ನಿರ್ಮಾಣ ಕಾಮಗಾರಿ ನಡೆಯಲಿದೆ. ಎರಡು ವರ್ಷಗಳ ಹಿಂದೆ ಮಳೆ, ನೆರೆ ಸಂದರ್ಭ ಒಂದು ಭಾಗದಲ್ಲಿ ತಡೆಗೋಡೆ ಕುಸಿದಿತ್ತು.
ಪ್ರಸ್ತುತ ಮೇಲ್ದರ್ಜೆಗೇರುತ್ತಿರುವ ಜ್ಯಾಕ್‌ವೆಲ್ 1971ರಲ್ಲಿ ನಿರ್ಮಿಸಲಾಗಿದ್ದು, 50 ವರ್ಷಗಳಷ್ಟು ಹಳೆಯದು. ಕಲ್ಲಿನ ಗೋಡೆಯಾಗಿದ್ದು, ಬಿರುಕು ಬಿಟ್ಟು ನೀರು ಸರಬರಾಜಿಗೆ ಸಮಸ್ಯೆಯಾಗಿದ್ದರಿಂದ ದುರಸ್ತಿಗೆ ನಿರ್ಧರಿಸಲಾಗಿತ್ತು. ಮೊದಲಿಗೆ ಗ್ರೌಟಿಂಗ್ ಮಾಡಿ ಬಾವಿ ಒಳಗಡೆ ಒಸರು ನೀರು ಬರದಂತೆ ತಡೆಯಲಾಯಿತು. ಕಬ್ಬಿಣದ ಮೆಶ್ ಹೊಡೆದು ಸಿಮೆಂಟ್ ಮತ್ತು ಮರಳು ಮಿಶ್ರಣವನ್ನು ಅದರ ಮೇಲೆ ಲೇಪಿಸಲಾಗುತ್ತಿದೆ. ಈ ಪ್ರಕ್ರಿಯೆಗೆ ಗೆನೆಟಿಂಗ್ ಎನ್ನಲಾಗುತ್ತದೆ. ಅದರ ಮೇಲೆ ಶಾಟ್ ಕ್ರೇಟಿಂಗ್ ಮಾಡಲಾಗುತ್ತದೆ. ಇದು ಗೋಡೆ ಗಟ್ಟಿಗೊಳಿಸುವ ಪ್ರಕ್ರಿಯೆ. ನಂತರ ಆರ್‌ಸಿಸಿ ಸ್ಲಾೃಬ್ ನಿರ್ಮಾಣವಾಗಲಿದ್ದು, ನಿಗದಿತ ಅವಧಿಯಲ್ಲಿ ಕೆಲಸ ಮುಗಿಸಿಕೊಡುವುದಾಗಿ ಗುತ್ತಿಗೆದಾರರು ಮೇಯರ್ ಜತೆ ನಡೆದ ಸಭೆಯಲ್ಲಿ ಭರವಸೆ ನೀಡಿದ್ದಾಗಿ ಎಂದು ಅಧಿಕಾರಿಗಳು ತಿಳಿಸಿದ್ದಾರೆ.
ನೀರು ಪೂರೈಕೆಗೆ ಅಡ್ಡಿಯಿಲ್ಲ: ಕಾಮಗಾರಿ ನಡೆಯುತ್ತಿರುವಲ್ಲೇ 81 ಎಂಎಲ್‌ಡಿ ಮತ್ತು 2 ಎಂಜಿಡಿ ಜ್ಯಾಕ್‌ವೆಲ್‌ಗಳಿವೆ. ಇದರಲ್ಲಿ 2 ಎಂಜಿಡಿ ಬ್ರಿಟಿಷರ ಕಾಲದ್ದು. ಅದರಲ್ಲಿ ಸ್ಟಾೃಂಡ್ ಬೈ ಪಂಪ್‌ಗಳಿತ್ತು. ಅಂದರೆ ಒಂದು ಹಾಳಾದರೆ ಇನ್ನೊಂದು ಪಂಪ್ ಉಪಯೋಗಿಸಿ ನೀರು ಸರಬರಾಜಿನಲ್ಲಿ ವ್ಯತ್ಯಯವಾಗದಂತೆ ನೋಡಿಕೊಳ್ಳವುದಕ್ಕೆ ಉಪಯೋಗಿಸುವುದು. ಸದ್ಯ ಎಲ್ಲ ಪಂಪ್‌ಗಳನ್ನೂ ಚಾಲನೆ ಮಾಡಿ, ಇಂಟರ್‌ಲಿಂಕ್ ಮಾಡಲಾಗಿದೆ. ಸದ್ಯ ಮೇಲ್ದರ್ಜೆಗೇರುತ್ತಿರುವ ಜ್ಯಾಕ್‌ವೆಲ್‌ನಿಂದ ಪಣಂಬೂರು ಮತ್ತು ಬೆಂದೂರು ರೇಚಕ ಸ್ಥಾವರಕ್ಕೆ ನೀರು ಪೂರೈಸಲಾಗುತ್ತಿತ್ತು. ಪಡೀಲ್‌ನಲ್ಲಿ ಒಂದು ರೇಚಕ ಸ್ಥಾವರವಿದ್ದು, ತುಂಬೆಯಲ್ಲಿ ಇಂಟರ್‌ಲಿಂಕ್ ಸಂಪರ್ಕ ನೀಡಿ, ನಿರಂತರ ನೀರು ಪೂರೈಕೆಗೆ ವ್ಯವಸ್ಥೆ ಮಾಡಲಾಗಿದೆ. ಹೀಗಾಗಿ ಪೂರೈಕೆ ಸ್ಥಗಿತ ಮಾಡಬೇಕಾದ ಅವಶ್ಯಕತೆ ಬಂದಿಲ್ಲ. ಆದರೆ ಪೂರೈಕೆಯಾಗುವ ನೀರಿನ ಪ್ರಮಾಣ ಸ್ವಲ್ಪ ಕಡಿಮೆಯಾಗಬಹುದು ಎನ್ನುತ್ತಾರೆ ಅಧಿಕಾರಿಗಳು. ದುರಸ್ತಿಗೆ ಚಾಲನೆ ನೀಡುವಾಗ ಎರಡು ಬಾರಿ ನೀರು ಸ್ಥಗಿತಗೊಳಿಸಲಾಗಿತ್ತು.
ತುಂಬೆಯಲ್ಲಿ ಜಾಕ್‌ವೆಲ್ ಕಾಮಗಾರಿ ಭಾಗಶಃ ಪೂರ್ಣಗೊಂಡಿದ್ದು, ನಿಗದಿತ ಅವಧಿಯಲ್ಲಿ ಪೂರ್ಣಗೊಳಿಸುವುದಾಗಿ ಗುತ್ತಿಗೆದಾರರು ತಿಳಿಸಿದ್ದಾರೆ. ಆರಂಭದಲ್ಲಿ ಮಂಗಳೂರು ನಗರಕ್ಕೆ ನೀರು ಪೂರೈಕೆಯಲ್ಲಿ ಸಮಸ್ಯೆಯಾಗಿತ್ತಾದ್ದರೂ, ಅದನ್ನು ಬಗೆಹರಿಸಲಾಗಿದೆ. ಸದ್ಯ ನೀರು ಪೂರೈಕೆಗೆ ಅಡಚಣೆಯಾಗಿಲ್ಲ. ಅಶ್ವಿನ್ ಎಸ್. ಮಹಾನಗರ ಪಾಲಿಕೆ ಇಂಜಿನಿಯರ್