

ಕನಕಗಿರಿ: ಬಸವಣ್ಣನವರು ಸಮ ಸಮಾಜ ನಿರ್ಮಾಣಕ್ಕೆ ಅಪಾರ ಕೊಡುಗೆ ನೀಡಿದ್ದಾರೆ ಎಂದು ತಹಸೀಲ್ದಾರ್ ವಿಶ್ವನಾಥ ಮುರುಡಿ ಹೇಳಿದರು.
ಇಲ್ಲಿನ ಬಸವೇಶ್ವರ ವೃತ್ತದಲ್ಲಿ ತಾಲೂಕಾಡಳಿತದಿಂದ ಹಮ್ಮಿಕೊಳ್ಳಲಾಗಿದ್ದ ಜಯಂತಿ ಕಾರ್ಯಕ್ರಮದಲ್ಲಿ ಮಾತನಾಡಿದರು. ವಚನಗಳ ಮೂಲಕವೇ ಬಸವಣ್ಣನವರು ಸಮಾಜದ ಅಂಕುಡೊಂಕುಗಳನ್ನು ತಿದ್ದಲು ಪ್ರಯತ್ನಿಸಿದರು. 12ನೇ ಶತಮಾನದಲ್ಲಿ ಕಾಯಕದ ಮೂಲಕ ದೇವರನ್ನು ಕಾಣುವ ಪ್ರಯತ್ನ ಮಾಡಬೇಕು ಎಂದರು.
ಬಸವಣ್ಣನವರನ್ನು ನಮ್ಮ ನಾಡಿನ ಸಾಂಸ್ಕೃತಿಕ ನಾಯಕ ಎಂದು ಗುರುತಿಸಲಾಗಿದ್ದು, ಇಂದು ಬಸವಣ್ಣನೆಂದರೆ ವಿಶ್ವವೇ ಇತ್ತ ಕಡೆ ತಿರುಗಿ ನೋಡುವಂತಾಗಿದೆ ಎಂದರು.
ಸಿಡಿಪಿಒ ವಿರೂಪಾಕ್ಷಿ ಮಾತನಾಡಿ, 12ನೇ ಶತಮಾನದಲ್ಲಿಯೇ ಅನುಭವ ಮಂಟಪದ ಮೂಲಕ ಪ್ರಜಾಪ್ರಭುತ್ವದ ಮಾದರಿಯನ್ನು ತೋರಿಸಿದ್ದಾರೆ. ತಾರತಮ್ಯವನ್ನು ಖಂಡಿಸಿ ಜನರಿಗೆ ಸರಳವಾಗಿ ಅರ್ಥವಾಗುವಂತೆ ವಚನಗಳನ್ನು ರಚಿಸಿದ್ದಾರೆ. ತಮ್ಮ ವಚನಗಳಲ್ಲಿ ಯಾರಿಗೂ ಕೆಡುಕನ್ನು ಮಾಡಬೇಡ. ಸುಳ್ಳು ನುಡಿಯಬೇಡ ಎಂದು ತಿಳಿಸಿಕೊಟ್ಟಿದ್ದಾರೆ ಎಂದರು.
ಕಾಂಗ್ರೆಸ್ ವಕ್ತಾರ ಶರಣಬಸಪ್ಪ ಭತ್ತದ್ ಮಾತನಾಡಿ, ಬಸವಣ್ಣನವರು ಹನ್ನೆರಡು ಸಾವಿರ ವೈಶ್ಯೆಯರಿಗೆ ದೀಕ್ಷೆ ನೀಡಿ ಶರಣೆಯರನ್ನಾಗಿ ಮಾಡುವುದರ ಮೂಲಕ ಕ್ರಾಂತಿಯನ್ನೇ ಮಾಡಿದ್ದಾರೆ. ಅವರ ಕ್ರಾಂತಿಯಿಂದಾಗಿ 12ನೇ ಶತಮಾನದಲ್ಲಿ ಸಾಕಷ್ಟು ಬದಲಾವಣೆಯಾದವು ಎಂದರು.
ಪಪಂ ಅಧ್ಯಕ್ಷೆ ಹುಸೇನಬೀ ಚಳ್ಳಮರದ, ಸದಸ್ಯರಾದ ಸಂಗಪ್ಪ ಸಜ್ಜನ್, ಅಭಿಷೇಕ ಕಲುಬಾಗಿಲಮಠ, ಅನಿಲ್ ಬಿಜ್ಜಳ, ತಾಪಂ ಇಒ ರಾಜಶೇಖರ, ಪಪಂ ಮುಖ್ಯಾಧಿಕಾರಿ ದತ್ತಾತ್ರೇಯ ಹೆಗಡೆ, ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಗಂಗಾಧರಸ್ವಾಮಿ ಕಲುಬಾಗಿಲಮಠ, ಜಿಪಂ ಮಾಜಿ ಸದಸ್ಯ ವೀರೇಶ ಸಮಗಂಡಿ, ಪ್ರಮುಖರಾದ ಉಪ್ಪು ಹೊನ್ನೂರು, ಬಿ.ಕನಕಪ್ಪ, ಮಹಾಂತೇಶ ಸಜ್ಜನ್, ಬಿಜೆಪಿ ಮಂಡಲ ಅಧ್ಯಕ್ಷ ಸಣ್ಣ ಕನಕಪ್ಪ ಇತರರಿದ್ದರು.