ನೀರಾವರಿಯಿಂದ ರೈತರ ಪ್ರಗತಿ

31NSG1
Published on

ನೇಸರಗಿ: ನೇಸರಗಿ ಭಾಗದ ರೈತರ ಬಹುದಿನಗಳ ಬೇಡಿಕೆಯಾಗಿದ್ದ ಚನ್ನವೃಷಬೇಂದ್ರ ಏತ ನೀರಾವರಿ ಯೋಜನೆಗೆ ಚಾಲನೆ ನೀಡಿದ್ದು, ರೈತ ಸಮುದಾಯದ ಆರ್ಥಿಕ ಸಬಲತೆಗೆ ಸಹಕಾರಿಯಾಗಲಿದೆ. ರೈತರು ಸದುಪಯೋಗ ಪಡಿಸಿಕೊಳ್ಳಬೇಕು ಎಂದು ಜಿಲ್ಲಾ ಉಸ್ತುವಾರಿ ಸಚಿವ ಸತೀಶ ಜಾರಕಿಹೊಳಿ ತಿಳಿಸಿದರು.

ಸ್ಥಳೀಯ ಎಪಿಎಂಸಿ ಆವರಣದಲ್ಲಿ ಚನ್ನವೃಷಬೇಂದ್ರ ಏತ ನೀರಾವರಿ ಯೋಜನೆಯ 520 ಕೋಟಿ ರೂ. ಮೊತ್ತದ ಕಾಮಗಾರಿಗೆ ಸೋಮವಾರ ಶಂಕು ಸ್ಥಾಪನೆ ನೆರವೇರಿಸಿ ಮಾತನಾಡಿ, ಶಾಸಕ ಬಾಬಾಸಾಹೇಬ ಪಾಟೀಲ ಅವರು ನಿರಂತರ ಪ್ರಯತ್ನದಿಂದ ಸಿಎಂ ಹಾಗೂ ಜಲಸಂಪನ್ಮೂಲ ಸಚಿವರಿಗೆ ಒತ್ತಡ ತಂದು ಜಿಲ್ಲೆಯ ಚನ್ನವೃಷಬೇಂದ್ರ ಹಾಗೂ ಸವದತ್ತಿ ಕ್ಷೇತ್ರದ ಸತ್ತಿಗೇರಿ ಏತ ನೀರಾವರಿ ಯೋಜನೆ ತರಲಾಗಿದೆ. ಆರ್ಥಿಕ ಸಬಲೀಕರಣ ಸರ್ಕಾರದ ಕನಸಾಗಿದೆ ಎಂದರು.

55 ಕೋಟಿ ರೂ.ವೆಚ್ಚದ ಯೋಜನೆಗೆ ಅನುಮೋದನೆ ಸಿಕ್ಕಿದ್ದು, ಮುಂಬರುವ ದಿನಗಳಲ್ಲಿ ಖನಗಾಂವ ಬಳಿ ಜಿಲ್ಲಾಸ್ಪತ್ರೆ ನಿರ್ಮಿಸುವ ಯೋಜನೆ ರೂಪಿಸಿದೆ. ಸರ್ಕಾರದ ಗ್ಯಾರಂಟಿ ಯೋಜನೆಗಳ ಜತೆಗೆ ಅಭಿವೃದ್ಧಿ ಕಾರ್ಯ ಮಾಡಲಾಗುತ್ತಿದೆ ಎಂದರು.

ಶಾಸಕ ಬಾಬಾಸಾಹೇಬ ಪಾಟೀಲ ಮಾತನಾಡಿ, ಈ ಭಾಗದ ರೈತರಿಗೆ ನೀರಾವರಿ ಸೌಲಭ್ಯ ಒದಗಿಸುವುದರಿಂದ ಜನರು ಗುಳೆ ಹೋಗುವುದನ್ನು ತಡೆಯಲು ಸಹಕಾರಿಯಾಗುತ್ತದೆ. 31 ಗ್ರಾಮಗಳಿಗೆ 21 ಸಾವಿರ ಎಕರೆ ವಿಸ್ತೀರ್ಣದ ಕಾಮಗಾರಿಯಾಗಿದ್ದು, 18 ತಿಂಗಳ ಅವಧಿಯ ಕಾಮಗಾರಿ ಇದಾಗಿದೆ. 11,600 ಹೆಕ್ಟೇರ್ ಪ್ರದೇಶ, 1 ಟಿಎಂಸಿ ನೀರು ಹರಿಸುವ ಯೋಜನೆಯಾಗಿದೆ. ಗೋಕಾಕ ತಾಲೂಕಿನ ಗಡ್ಡಿಹೊಳಿ ಗ್ರಾಮದ ಮಾರ್ಕಂಡೇಯ ನದಿಯಿಂದ ನೀರನ್ನು ಎತ್ತಿ ತರುವಂತಹ ಯೋಜನೆಯಾಗಿದೆ. ಶೀಘ್ರದಲ್ಲೇ ನೇಸರಗಿ ಭಾಗದ ಜನರಿಗೆ ಪ್ರಾಥಮಿಕ ಆರೋಗ್ಯ ಕೇಂದ್ರ ಸ್ಥಾಪಿಸಲಾಗುವುದು ಎಂದರು.

ಬೈಲಹೊಂಗಲ ಶಾಸಕ ಮಹಾಂತೇಶ ಕೌಜಲಗಿ ಮಾತನಾಡಿ, ನಮ್ಮ ಸರ್ಕಾರ ಅಧಿಕಾರಕ್ಕೆ ಬಂದ ಎರಡು ತಿಂಗಳಲ್ಲಿ ಗ್ಯಾರಂಟಿ ಯೋಜನೆ ಜಾರಿಗೆ ತರುವ ಜತೆಗೆ ಬೃಹತ್ ಕಾಮಗಾರಿಗಳನ್ನು ಕೈಗೊಂಡಿದೆ ಎಂದರು.

ನೀರಾವರಿ ಇಲಾಖೆ ಇಇ ರಘುರಾಮ ಎಸ್.ವಿ. ಪ್ರಾಸ್ತಾವಿಕ ಮಾತನಾಡಿದರು. ಗಾಳೇಶ್ವರ ಮಠದ ಚಿದಾನಂದ ಸ್ವಾಮೀಜಿ, ಪಿಕೆಪಿಎಸ್ ಅಧ್ಯಕ್ಷ ನಾನಾಸಾಹೇಬ ಪಾಟೀಲ, ಸಚಿನ್ ಪಾಟೀಲ, ನಿಂಗಪ್ಪ ಅರಕೇರಿ, ರೋಹಿಣಿ ಪಾಟೀಲ, ಸಿ.ಆರ್.ಪಾಟೀಲ, ಶಿವನಗೌಡ ಪಾಟೀಲ, ಉಮೇಶ ಪಾಟೀಲ, ಜಗದೀಶ ಪಾಟೀಲ, ಎ.ಆರ್.ಮಾಳಣ್ಣವರ, ಭರಮಣ್ಣ ಸತ್ಯಣ್ಣವರ, ಶಿವಾನಂದ ಕುಂಕೂರ, ನಿಂಗಪ್ಪ ತಳವಾರ, ಈರಪ್ಪ ಉಳವಿ, ಮಂಜುನಾಥ ಹುಲಮನಿ, ಅಣ್ಣಪ್ಪ ಕಡಕೋಳ, ರವಿ ಸಿದ್ದಮ್ಮನವರ, ಎಇಇ ಚಿರಂಜೀವಿ ಟಿ., ಎಇ ಶ್ರೀಮಂತ ಚಂದ್ರಗೊಂಡ, ಎಇ ಮಹಾಂತೇಶ ಕೋಹಳ್ಳಿ ಇತರರಿದ್ದರು. ಪ್ರಾಚಾರ್ಯ ಡಾ.ಕೀರನಾಯ್ಕ ಗಡ್ಡಿಗೌಡರ ನಿರೂಪಿಸಿದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net