ಡಿ. 25ರೊಳಗೆ ನೂತನ ಮೆಟ್ರೋ ಮಾರ್ಗ ಉದ್ಘಾಟನೆ

metro new line (1)
Published on

ಬೆಂಗಳೂರು: ಬಹುನಿರೀತ ನಮ್ಮ ಮೆಟ್ರೋ 2ನೇ ಹಂತದ ಯಲಚೇನಹಳ್ಳಿ-ಅಂಜನಾಪುರ ಟೌನ್​ಶಿಪ್​ ಮಾರ್ಗ ಉದ್ಘಾಟನೆಗೆ ಮುಹೂರ್ತ ಕೂಡಿ ಬಂದಿದ್ದು, ಡಿ. 25ರೊಳಗೆ ನೂತನ ಮಾರ್ಗದಲ್ಲಿ ವಾಣಿಜ್ಯ ಸೇವೆ ಆರಂಭಿಸಲಾಗುತ್ತಿದೆ.

ನಮ್ಮ ಮೆಟ್ರೋ 2ನೇ ಹಂತದ ಮೊದಲ ಮಾರ್ಗವಾಗಿ ಯಲಚೇನಹಳ್ಳಿ-ಅಂಜನಾಪುರ ಟೌನ್​ಶಿಪ್​ವರೆಗೆ ಮೆಟ್ರೋ ಸಂಚಾರಕ್ಕೆ ಸಿದ್ಧತೆ ನಡೆಸಲಾಗಿದೆ. ಅದಕ್ಕೆ ಸಂಬಂಧಿಸಿದಂತೆ ರೈಲ್ವೆ ಸುರಕ್ಷತಾ ಆಯುಕ್ತರು ಮಾರ್ಗದಲ್ಲಿನ ಸುರಕ್ಷತಾ ಕ್ರಮಗಳನ್ನು ಪರಿಶೀಲಿಸಿ ವಾಣಿಜ್ಯ ಸಂಚಾರಕ್ಕೆ ಅನುಮತಿ ನೀಡಿದ್ದಾರೆ. ಅದರಂತೆ ಬಿಎಂಆರ್​ಸಿಎಲ್​ ಇದೀಗ ಮಾರ್ಗದ ಉದ್ಘಾಟನೆಗೆ ಎಲ್ಲ ಸಿದ್ಧತೆ ಮಾಡಿಕೊಳ್ಳುತಿದ್ದು, ಉದ್ಘಾಟನಾ ಕಾರ್ಯಕ್ರಮಕ್ಕೆ ಮುಖ್ಯಮಂತ್ರಿ ಬಿ.ಎಸ್​.ಯಡಿಯೂರಪ್ಪ ಹಾಗೂ ಕೇಂದ್ರ ಸಚಿವರನ್ನು ಕರೆಸಲು ನಿರ್ಧರಿಸಲಾಗಿದೆ. ಅದಕ್ಕಾಗಿ ದಿನಾಂಕ ನಿಗದಿ ಮಾಡುವಂತೆಯೂ ಬಿಎಂಆರ್​ಸಿಎಲ್​ ಕೋರಿದೆ. ಅಲ್ಲಿಂದ ಪ್ರತಿಕ್ರಿಯೆ ಬಂದ ನಂತರ ಉದ್ಘಾಟನಾ ದಿನಾಂಕ ನಿಗದಿ ಮಾಡಲಾಗುತ್ತದೆ. ಬಿಎಂಆರ್​ಸಿಎಲ್​ ಲೆಕ್ಕಾಚಾರದಂತೆ ಡಿ. 25ರೊಳಗೆ ಮಾರ್ಗದಲ್ಲಿ ವಾಣಿಜ್ಯ ಸಂಚಾರ ಆರಂಭಿಸಲಾಗುತ್ತದೆ.

ಹಸಿರು ಮಾರ್ಗ 6 ಕಿ.ಮೀ. ವಿಸ್ತರಣೆ: ಯಲಚೇನಹಳ್ಳಿಯಿಂದ ಅಂಜನಾಪುರ ಮಾರ್ಗವು ಮೆಟ್ರೋ ಮೊದಲ ಹಂತದಲ್ಲಿ ನಿರ್ಮಾಣಗೊಂಡು ಕಾರ್ಯಾಚರಣೆಗೊಳ್ಳುತ್ತಿರುವ ನಾಗಸಂದ್ರದಿಂದ ಯಲಚೇನಹಳ್ಳಿ ಮಾರ್ಗದ ವಿಸ್ತರಣಾ ಮಾರ್ಗವಾಗಿದೆ. ಈ ಮಾರ್ಗವನ್ನು ಹಸಿರು ಮಾರ್ಗವೆಂದು ಕರೆಯಲಾಗುತ್ತದೆ. ಇದೀಗ ಯಲಚೇನಹಳ್ಳಿಯಿಂದ ಅಂಜನಾಪುರ ಮಾರ್ಗದ ಉದ್ಘಾಟನೆಯಿಂದಾಗಿ ಹಸಿರು ಮಾರ್ಗದ ಉದ್ದ ಮತ್ತಷ್ಟು ಹೆಚ್ಚಲಿದೆ. ಸದ್ಯ 24 ಕಿ.ಮೀ. ಇರುವ ಹಸಿರು ಮಾರ್ಗವು, 30 ಕಿ.ಮೀ.ಗೆ ಹೆಚ್ಚಲಿದ್ದು, ನಿಲ್ದಾಣಗಳ ಸಂಖ್ಯೆ 24ರಿಂದ 29ಕ್ಕೆ ಏರಿಕೆಯಾಗಲಿದೆ.

ಕ್ಷಣ ಕ್ಷಣದ ಸುದ್ದಿಗಳ ಅಪ್ಡೇಟ್ಸ್​ಗಾಗಿ ನಮ್ಮ ಫೇಸ್​ಬುಕ್​ ಪುಟ ಲೈಕ್ ಮಾಡಿ ಮತ್ತು ಫಾಲೋ ಮಾಡಿ..

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net