ರಚನಾತ್ಮಕ ಚಿಂತನೆಗಳ ಮೂಲಕ ವ್ಯಸನ ಮುಕ್ತ ಜೀವನ ನಡೆಸಲು ಸಾಧ್ಯ

Through constructive thinking it is possible to lead an addiction free life
Published on

ಮಡಿಕೇರಿ:

ದೃಢ ನಿರ್ಧಾರ, ಕರ್ತವ್ಯ ಪ್ರಜ್ಞೆ, ರಚನಾತ್ಮಕ ಚಿಂತನೆಗಳ ಮೂಲಕ ವ್ಯಸನ ಮುಕ್ತ ಜೀವನವನ್ನು ನಡೆಸಲು ಸಾಧ್ಯ. ಆರೋಗ್ಯವಂತ ಶರೀರವೇ ಆತ್ಮದ ಅರಮನೆ. ಅನಾರೋಗ್ಯವಂತ ಶರೀರವೇ ಆತ್ಮದ ಸೆರೆಮನೆ. ದುಶ್ಚಟಮುಕ್ತ ಸಮಾಜದ ನಿರ್ಮಾಣ ನಮ್ಮೆಲ್ಲರ ಹೊಣೆ ಎಂದು ಅಖಿಲ ಕರ್ನಾಟಕ ಜನಜಾಗೃತಿ ವೇದಿಕೆಯ ಶಿಬಿರಾಧಿಕಾರಿ ನಂದಕುಮಾರ್ ಪಿ.ಪಿ. ಹೇಳಿದರು. ಮಡಿಕೇರಿ ತಾಲೂಕು ಶ್ರೀ ಕ್ಷೇ.ಧ.ಗ್ರಾ..ಯೋಜನೆ ಬಿ.ಸಿ ಟ್ರಸ್ಟ್, ಕೊಡಗು ಜಿಲ್ಲಾ ಜನಜಾಗೃತಿ ವೇದಿಕೆ, ಮಡಿಕೇರಿ ತಾಲೂಕು ಪ್ರಗತಿಬಂಧು ಸ್ವ-ಸಹಾಯ ಸಂಘಗಳ ಒಕ್ಕೂಟ ಮತ್ತು ಮಡಿಕೇರಿ ಸರ್ಕಾರಿ ಪದವಿ ಪೂರ್ವ ಕಾಲೇಜಿನ ಸಂಯುಕ್ತ ಆಶ್ರಯದಲ್ಲಿ ಬುಧವಾರ ನಡೆದ ಮಾದಕ ವ್ಯಸನ ವಿರೋಧಿ ದಿನಾಚರಣೆ ಜಾಗೃತಿ ಕಾರ್ಯಕ್ರಮದಲ್ಲಿ ಮಾತನಾಡಿದರು.

ಮಾದಕ ವ್ಯಸನವೆಂಬುದೊಂದು ರೋಗ. ವಿಶ್ವ ಆರೋಗ್ಯ ಸಂಸ್ಥೆಯ ಕಳೆದ ಸಂಶೋಧನೆಯ ಪ್ರಕಾರ ನಮ್ಮ ಭಾರತದಲ್ಲಿ ವರ್ಷಕ್ಕೆ ೫ ಲಕ್ಷ ಜನರು ಮದ್ಯಪಾನದಿಂದ ಮರಣ ಹೊಂದಿದರೆ ೧೪.೫ ಲಕ್ಷ ಜನರು ಮಾದಕ ದ್ರವ್ಯ, ಮಾದಕ ವ್ಯಸನ ಅಥವಾ ಇನ್ನಿತರ ಚಟಗಳಿಂದ ಬಲಿಯಾಗುತ್ತಿರುವುದು ಶೋಚನೀಯ. ಪ್ರಪಂಚದ ಐದು ಭೀಕರವಾದ ಖಾಯಿಲೆಗಳಲ್ಲಿ ಮಾದಕ ವ್ಯಸನ ಕೂಡ ಒಂದು. ವಿದ್ಯಾರ್ಥಿಗಳ ಜೀವನ ಹಸಿ ಮಣ್ಣಿನ ಮಡಿಕೆ ಇದ್ದ ಹಾಗೆ. ಅವರ ಹದಿಹರೆಯದ ವಯಸ್ಸಿನಲ್ಲಿ ಜೀವನ ಶೈಲಿ, ಮಾಧ್ಯಮ, ಆರ್ಥಿಕ ಸ್ವಾತಂತ್ರ್ಯ ಕೊರತೆ, ಪಾಶ್ಚಾತ್ಯ ಸಂಸ್ಕೃತಿ, ನಕಾರಾತ್ಮಕ ಚಿಂತನೆಗಳ ಕಾರಣಗಳಿಂದಾಗಿ ಅಮಲು ಪದಾರ್ಥ ಹಾಗೂ ಇನ್ನಿತರ ವ್ಯಸನಗಳಿಗೆ ಬಲಿಯಾಗುವ ಸಾಧ್ಯತೆಗಳಿವೆ. ಅತಿಯಾದ ಮೊಬೈಲ್ ಬಳಕೆಯಿಂದ ಯುವಜನತೆ ಹಾಳಾಗುತ್ತಿದ್ದಾರೆ. ವಿದ್ಯಾರ್ಥಿಗಳು ಇದರ ಬಗ್ಗೆ ಗಮನ ಹರಿಸಿ ಸಮಾಜದಲ್ಲಿ ಉತ್ತಮ ಪ್ರಜೆಯಾಗಿ ಹೊರಹೊಮ್ಮ ಬೇಕು.. ಬಹುತೇಕ ಯುವಜನತೆ ಬಾಹ್ಯ ವ್ಯಕ್ತಿಗಳ ಪ್ರಭಾವದಿಂದ ದುಶ್ಚಟಗಳಿಗೆ ದಾಸರಾಗುತ್ತಿದ್ದು, ಇದನ್ನು ತಡೆಗಟ್ಟಲು ಸಂಕಲ್ಪ ಮಾಡೋಣ ಎಂದು ಪ್ರತಿಜ್ಞಾ ವಿಧಿ ಬೋಧಿಸಿದರು.

ನಗರ ಸಭಾ ಮಾಜಿ ಸದಸ್ಯ, ಕೊಡಗು ಜಿಲ್ಲಾ ಜನಜಾಗೃತಿ ವೇದಿಕೆ ಸದಸ್ಯ ಟಿ.ಎಂ ಅಯ್ಯಪ್ಪ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿ, ಉತ್ತಮ ಸ್ನೇಹಿತರನ್ನು ಹೊಂದುವುದರಿಂದ ಸಮಾಜದಲ್ಲಿ ಉತ್ತಮ ಪ್ರಜೆಯಾಗಿ ಬಾಳಬಹುದು. ವಿದ್ಯಾರ್ಥಿಗಳು ಈ ವಯಸ್ಸಿನಲ್ಲಿಯೇ ಜಾಗೃತರಾಗಬೇಕು. ಯುವಶಕ್ತಿ ದೇಶದ ಭವಿಷ್ಯ ಎಂದು ಹೇಳಿದರು.

ಅಧ್ಯಕ್ಷತೆ ವಹಿಸಿದ್ದ ಉಪನ್ಯಾಸಕ ಚಿದಾನಂದ ಮಾತನಾಡಿ, ಕಾಲೇಜು ಜೀವನದಲ್ಲಿ ವಿದ್ಯಾರ್ಥಿಗಳ ಮನಸ್ಸು ತುಂಬಾ ಚಂಚಲ ಸ್ಥಿತಿಯಲ್ಲಿರುತ್ತದೆ. ಈ ಹಂತದಲ್ಲಿ ವಿದ್ಯಾರ್ಥಿಗಳು ತಮ್ಮ ಮನಸ್ಸನ್ನು ಹತೋಟಿಗೆ ತಂದುಕೊಳ್ಳುವುದು ಅನಿವಾರ್ಯತೆ ಇದೆ. ವಿದ್ಯಾರ್ಥಿಗಳೇ ಉತ್ತಮ ಸಮಾಜದ ಆಸ್ತಿ ಎಂದು ಹೇಳಿದರು. ಮಹದೇವಪೇಟೆ ಒಕ್ಕೂಟದ ಅಧ್ಯಕ್ಷೆ ಶುಭಾಷಿಣಿ ವೇದಿಕೆಯಲ್ಲಿ ಉಪಸ್ಥಿತರಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net