

ಮೈಸೂರು: ನವರಾತ್ರಿ ಸಂದರ್ಭ ಮೈಸೂರು ರಾಜವಂಶಸ್ಥರು ನಡೆಸುವ ‘ಖಾಸಗಿ ದರ್ಬಾರ್’ಗೆ ಮೈಸೂರು ಅರಮನೆಯಲ್ಲಿ ಮಂಗಳವಾರ ರತ್ನ ಖಚಿತ ಸಿಂಹಾಸನದ ಜೋಡಣೆ ಕಾರ್ಯ ನಿರ್ವಿಘ್ನವಾಗಿ ನಡೆಯಿತು.
ನವರಾತ್ರಿ ಸಂದರ್ಭ ಈ ಸಿಂಹಾಸನದ ಮೇಲೆ ರಾಜವಂಶಸ್ಥ ಯದುವೀರ್ ಕೃಷ್ಣದತ್ತ ಚಾಮರಾಜ ಒಡೆಯರ್ ಕುಳಿತು ಖಾಸಗಿ ದರ್ಬಾರ್ ನಡೆಸುವರು. ಸಿಂಹಾಸನ ಜೋಡಣೆ ಹಿನ್ನೆಲೆಯಲ್ಲಿ ಅರಮನೆಗೆ ಮಧ್ಯಾಹ್ನದವರೆಗೆ ಪ್ರವಾಸಿಗರ ಭೇಟಿಗೆ ನಿರ್ಬಂಧ ವಿಧಿಸಲಾಗಿತ್ತು. ಗೌಪ್ಯತೆ ಕಾಪಾಡುವ ನಿಟ್ಟಿನಲ್ಲಿ ಸಿಂಹಾಸನ ಜೋಡಣೆ ಕಾರ್ಯದ ಸಂದರ್ಭ ದರ್ಬಾರ್ ಹಾಲ್ ಸೇರಿದಂತೆ ವಿವಿಧೆಡೆ ಅಳವಡಿಸಿರುವ ಸಿಸಿ ಕ್ಯಾಮರಾಗಳಿಗೆ ಪರದೆ ಹಾಕಲಾಗಿತ್ತು.
ಪ್ರತಿ ಬಾರಿ ದಸರಾ ಮುಕ್ತಾಯಗೊಂಡ ನಂತರ ಸಿಂಹಾಸನವನ್ನು ಕಳಚಿ ಅರಮನೆಯ ಖಜಾನೆಯಲ್ಲಿ ಬಿಗಿ ಭದ್ರತೆಯೊಂದಿಗೆ ಸಿಂಹಾಸನ ಇಡಲಾಗುತ್ತದೆ. ಈ ಕೊಠಡಿಯ ತಲಾ ಒಂದು ಕೀ ಅರಮನೆ ಮಂಡಳಿ ಹಾಗೂ ರಾಜವಂಶಸ್ಥರ ಬಳಿ ಇರುತ್ತದೆ. ಇಬ್ಬರ ಸಮ್ಮುಖದಲ್ಲಿ ಸಿಂಹಾಸನವನ್ನು ಹೊರ ತೆಗೆದು ಟ್ರ್ಯಾಲಿ ಮೂಲಕ ದರ್ಬಾರ್ ಬಿಗಿ ಪೊಲೀಸ್ ಬಂದೋಬಸ್ತ್‌ನಲ್ಲಿ ಹಾಲ್‌ಗೆ ತರಲಾಯಿತು. ಈ ಸಂದರ್ಭ ರಾಜವಂಶಸ್ಥೆ ಪ್ರಮೋದಾ ದೇವಿ ಒಡೆಯರ್ ಇದ್ದರು.
ಸಿಂಹಾಸನವನ್ನು 8 ಮತ್ತು ಬೆಳ್ಳಿಯ ಭದ್ರಾಸನವನ್ನು 6 ಬಿಡಿಭಾಗಗಳಾಗಿ ವಿಂಗಡಿಸಲಾಗಿರುತ್ತದೆ. ಸಿಂಹಾಸನದ ಬಿಡಿಭಾಗ ಹಾಗೂ ಭದ್ರಾಸನ ಜೋಡಿಸಿದ ನಂತರ ಸಿಂಹಾಸನಕ್ಕೆ ಉಮಾಪಕ್ಷಿ, ಮುತ್ತಿನ ಜಾಲರಿ, ಮಕರ ತೋರಣ, 25 ಜತೆ ನಗಗಳು, 1 ಜತೆ ಚಿನ್ನದ ಕುದುರೆ, ತುರಾಯಿ ಜೋಡಿ, 1 ಜತೆ ಚಿನ್ನದ ಕಳಶ ಜೋಡಿಸಿ ಅಲಂಕರಿಸಲಾಯಿತು. ಎಲ್ಲ ಬಿಡಿ ಭಾಗಗಳನ್ನು ಜೊಡಿಸಿ ನಂತರ ನವರಾತ್ರಿಯ ಮೊದಲ ದಿನವಾದ ಅ.22 ರಂದು ರಾಜಮನೆತನದವರು ಪೂಜೆ ಸಲ್ಲಿಸಿದ ನಂತರ ಸಿಂಹಾಸನಕ್ಕೆ ಸಿಂಹದ ಆಕೃತಿಯನ್ನು ಜೋಡಿಸಲಾಗುತ್ತದೆ. ಆಗ ಸಿಂಹಾಸನ ಪರಿಪೂರ್ಣಗೊಳ್ಳುತ್ತದೆ.
ಸಿಂಹಾಸನ ಜೋಡಣೆಗೂ ಮುನ್ನ ಅರಮನೆಯ ದರ್ಬಾರ್ ಹಾಲ್‌ನಲ್ಲಿ ಬೆಳಗ್ಗೆ ಶುಭ ಘಳಿಗೆಯಲ್ಲಿ ಧಾರ್ಮಿಕ ಕೈಂಕರ್ಯ ನಡೆಸ ಲಾಯಿತು. ಅರಮನೆ ಪುರೋಹಿತರು ಗಣಹೋಮ, ಚಾಮುಂಡಿಪೂಜೆ, ಶಾಂತಿ ಹೋಮ ನೆರವೇರಿಸಿ ಪೂರ್ಣಾಹುತಿ ನೆರವೇರಿ ಸಿದರು. ಸಿಂಹಾಸನ ಜೋಡಣೆ ಕಾರ್ಯ ಮುಕ್ತಾಯಗೊಳಿಸಿ ಧಾರ್ಮಿಕ ವಿಧಿ ವಿಧಾನಗಳು ಪೂರ್ಣಗೊಂಡ ಬಳಿಕ ರತ್ನಖಚಿತ ಸಿಂಹಾಸನವನ್ನು ಶ್ವೇತವಸ್ತ್ರದಿಂದ ಮುಚ್ಚಲಾಯಿತು.