ಮಹಾನ್ ಪುರುಷರಿಗೆ ಜನ್ಮ ನೀಡಿದ ದೇವಭೂಮಿ

thrirang yathra
Published on

ವಿಜಯವಾಣಿ ಸುದ್ದಿಜಾಲ ಉಳ್ಳಾಲ

ಲಕ್ಷಾಂತರ ವರ್ಷಗಳ ಇತಿಹಾಸವಿರುವ, ಅನೇಕ ಸಾಧು ಸಂತರು, ಮಹಾನ್ ಪುರುಷರಿಗೆ ಜನ್ಮ ನೀಡಿದ ಪುಣ್ಯಭೂಮಿ, ದೇವಭೂಮಿ ಭಾರತ. ಆದರೂ ನಾವಿಂದು ಕ್ರಿಸ್ತಪೂರ್ವ, ಕ್ರಿಸ್ತಶಕ ಎಂದು ದಿನಗಳ ಲೆಕ್ಕ ಹಾಕಬೇಕಾಗಿರುವುದು ದುರಂತ ಎಂದು ಬಿಜೆಪಿ ಜಿಲ್ಲಾಧ್ಯಕ್ಷ ಸುದರ್ಶನ್ ಮೂಡುಬಿದಿರೆ ಅಭಿಪ್ರಾಯಪಟ್ಟರು.

ಸ್ವಾತಂತ್ರ್ಯೋತ್ಸವ ಪ್ರಯುಕ್ತ ಮಂಗಳೂರು ಮಂಡಲ ಬಿಜೆಪಿ ವತಿಯಿಂದ ತೊಕ್ಕೊಟ್ಟಿನಲ್ಲಿ ಗುರುವಾರ ತಿರಂಗಾ ಯಾತ್ರೆಯ ಸಭಾ ಕಾರ್ಯಕ್ರಮದಲ್ಲಿ ಮಾತನಾಡಿದರು.

ಜಗತ್ತೇ ಭಾರತ, ಭಾರತವೇ ಜಗತ್ತು ಎನ್ನುವಂತಿದ್ದ ದೇಶಕ್ಕೆ ಪರಕೀಯ ದಾಳಿಯಿಂದ ಒಂದು ಕಾಲದಲ್ಲಿ ಗುಲಾಮಗಿರಿ ಒಪ್ಪಿಕೊಳ್ಳಬೇಕಾದ ದುಸ್ಥಿತಿ ಬಂತು. ಸ್ವಾತಂತ್ರ್ಯ ನಂತರವೂ ಸ್ವಾರ್ಥ, ಕುಟುಂಬ ರಾಜಕಾರಣದಿಂದ ಗುಲಾಮಗಿರಿಯಿಂದ ಹೊರಬರಲು ಸಾಧ್ಯವಾಗಿಲ್ಲ. ಆದರೆ ಇಂದು ಭಾರತದ ಸಂಸ್ಕೃತಿ ಬಗ್ಗೆ ಅಧ್ಯಯನ ನಡೆಯುವ ಮೂಲಕ ದೇಶಕ್ಕೆ ಮತ್ತೆ ಗೌರವ ಬರುವಂತಾಗಿದೆ ಎಂದರು.

ಜಿಲ್ಲಾ ಉಪಾಧ್ಯಕ್ಷ ಸಂತೋಷ್ ಕುಮಾರ್ ರೈ, ಪ್ರಧಾನ ಕಾರ್ಯದರ್ಶಿ ಕಸ್ತೂರಿ ಪಂಜ, ಸತೀಶ್ ಕುಂಪಲ, ಮಾಜಿ ಶಾಸಕ ಜಯರಾಮ್ ಶೆಟ್ಟಿ, ಮುಖಂಡರಾದ ಟಿ.ಜಿ.ರಾಜಾರಾಮ್ ಭಟ್, ಜಯಶ್ರೀ ಕರ್ಕೇರ, ರಣದೀಪ್ ಕಾಂಚನ್, ಚಂದ್ರಶೇಖರ ಉಚ್ಚಿಲ್, ಸೀತಾರಾಮ ಬಂಗೇರ ಮೊದಲಾದವರು ಉಪಸ್ಥಿತರಿದ್ದರು.

ಬಿಜೆಪಿ ಮಂಡಲಾಧ್ಯಕ್ಷ ಚಂದ್ರಹಾಸ ಪಂಡಿತ್‌ಹೌಸ್ ಪ್ರಾಸ್ತಾವಿಕ ಮಾತನಾಡಿದರು. ನವೀನ್ ಪಾದಲ್ಪಾಡಿ ವಂದಿಸಿದರು. ಆನಂದ ಶೆಟ್ಟಿ ಕಾರ್ಯಕ್ರಮ ನಿರೂಪಿಸಿದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net