

ಬ್ರಹ್ಮಾವರ/ಕಡಬ: ಎರಡು ಪ್ರತ್ಯೇಕ ಘಟನೆಗಳಲ್ಲಿ ಮೂವರು ಯುವಕರು ನೀರುಪಾಲಾಗಿದ್ದಾರೆ.
ಉಡುಪಿ ಜಿಲ್ಲೆ ಬ್ರಹ್ಮಾವರ ಸಮೀಪದ ಬಾರಕೂರು ಸೀತಾನದಿಯ ಹಾಲೇಕೊಡಿಯಲ್ಲಿ ಶುಕ್ರವಾರ ಮೀನು ಹಿಡಿಯಲು ಹೋಗಿದ್ದ ಖಾಸಗಿ ಸಂಸ್ಥೆ ಉದ್ಯೋಗಿ ಹೊಸಾಳ ಗ್ರಾಮದ ಹರ್ಷ(25) ಮತ್ತು ಬಾರಕೂರು ಸರ್ಕಾರಿ ಕಾಲೇಜಿನ ತೃತೀಯ ವರ್ಷದ ಬಿಕಾಂ ವಿದ್ಯಾರ್ಥಿ ಕಾರ್ತಿಕ್(21) ಮೃತಪಟ್ಟಿದ್ದಾರೆ. ಗುರುವಾರ ಸಾಯಂಕಾಲ ಬಲೆ ಬೀಸಿದ್ದು, ಶುಕ್ರವಾರ ಮುಂಜಾನೆ ಬಲೆ ಎಳೆಯಲು ಹೋದಾಗ ನೀರಿನಲ್ಲಿ ಬಿದ್ದು ಸಾವು ಸಂಭವಿಸಿದೆ.
ಅಗ್ನಿಶಾಮಕ ದಳದ ಸಿಬ್ಬಂದಿ ಮತ್ತು ಸಾರ್ವಜನಿಕರು ನದಿಯಲ್ಲಿ ಹೂತು ಹೋದ ಶವಗಳನ್ನು ಮೇಲೆತ್ತುವಲ್ಲಿ ಶ್ರಮಿಸಿದರು. ಬ್ರಹ್ಮಾವರ ತಹಸೀಲ್ದಾರ್ ಕಿರಣ್ ಗೌರಯ್ಯ, ಪೊಲೀಸ್ ಠಾಣಾಧಿಕಾರಿ ರಾಘವೇಂದ್ರ ಸಿ. ಭೇಟಿ ನೀಡಿದರು. ಬ್ರಹ್ಮಾವರ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಇನ್ನೊಂದು ಘಟನೆ ದ.ಕ. ಜಿಲ್ಲೆಯ ಬೆಳ್ಳಾರೆ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ನಡೆದಿದೆ. ಎಡಮಂಗಲ ಗ್ರಾಮದ ದೋಳ್ತಿಲ ಎಂಬಲ್ಲಿ ಗುರುವಾರ ರಾತ್ರಿ ಕುಮಾರಧಾರಾ ನದಿಗೆ ದೋಳ್ತಿಲ ನಿವಾಸಿ ರಾಮಣ್ಣ ನಾಯ್ಕರ ಪುತ್ರ ಪ್ರಕಾಶ್(25) ಆಕಸ್ಮಿಕವಾಗಿ ಬಿದ್ದು ಸಾವಿಗೀಡಾಗಿದ್ದು, ಶುಕ್ರವಾರ ಮೃತದೇಹ ಪತ್ತೆಯಾಗಿದೆ.
ಸ್ನೇಹಿತರೊಂದಿಗೆ ಗುರುವಾರ ಸಾಯಂಕಾಲ ತೆರಳಿದ್ದ ಸಂದರ್ಭ ಆಕಸ್ಮಿಕವಾಗಿ ಕಾಲುಜಾರಿ ನದಿ ನೀರಿಗೆ ಬಿದ್ದಿದ್ದು, ಜತೆಗಿದ್ದವರು ರಕ್ಷಿಸಲು ಮುಂದಾದರೂ ಸಾಧ್ಯವಾಗಿರಲಿಲ್ಲ. ಶುಕ್ರವಾರ ಅಗ್ನಿಶಾಮಕ ದಳ ಶವ ಪತ್ತೆ ಹಚ್ಚಿದೆ. ಸ್ಥಳಕ್ಕೆ ಕಡಬ ತಹಸೀಲ್ದಾರ್ ಜಾನ್‌ಪ್ರಕಾಶ್ ರೋಡ್ರಿಗಸ್, ಬೆಳ್ಳಾರೆ ಠಾಣಾಧಿಕಾರಿ ಆಂಜನೇಯ ರೆಡ್ಡಿ ಭೇಟಿ ನೀಡಿದ್ದಾರೆ.