

ಮಂಗಳೂರು: ವಿಚಾರಣೆಗೆಂದು ಠಾಣೆಗೆ ಕರೆಸಿ ಮೂವರು ಯುವಕರ ಹಲ್ಲೆ ನಡೆಸಿದ ಆರೋಪದ ಮೇಲೆ ಬಜ್ಪೆ ಠಾಣೆ ಇನ್‌ಸ್ಪೆಕ್ಟರ್ ಸಂದೇಶ್ ಪಿ.ಜಿ.ಮತ್ತು ಮೂವರು ಸಿಬ್ಬಂದಿಯನ್ನು ನಗರ ಪೊಲೀಸ್ ಆಯುಕ್ತ ಎನ್.ಶಶಿಕುಮಾರ್ ಸೇವೆಯಿಂದ ಸೋಮವಾರ ಅಮಾನತು ಮಾಡಿದ್ದಾರೆ.
ಘಟನೆಗೆ ಸಂಬಂಧಿಸಿ ಉತ್ತರ ಎಸಿಪಿ ಮಹೇಶ್ ಕುಮಾರ್ ವಿಚಾರಣೆ ನಡೆಸಿದಾಗ ಆರೋಪ ಸಾಬೀತಾದ ಹಿನ್ನೆಲೆಯಲ್ಲಿ ಇಲಾಖಾ ಶಿಸ್ತು ಕ್ರಮ ಮತ್ತು ಇಲಾಖಾ ವಿಚಾರಣೆ ಬಾಕಿ ಇರಿಸಿ ಅಮಾನತು ಮಾಡಲಾಗಿದೆ. ಕಾನೂನು ಮತ್ತು ಸುವ್ಯವಸ್ಥೆ ಡಿಸಿಪಿ ಹರಿರಾಂ ಶಂಕರ್ ಅವರಿಗೆ ವಿಚಾರಣೆ ನಡೆಸಿ ವರದಿ ನೀಡಲು ಸೂಚನೆ ನೀಡಲಾಗಿದೆ.
ಪ್ರಕರಣದ ವಿವರ: ಕಟೀಲು ದೇವಸ್ಥಾನ ವ್ಯಾಪ್ತಿಯ ಕೆಲವು ಅಂಗಡಿಗಳನ್ನು ಎಸಿ ಮದನ್ ಮೋಹನ್ ಈ ಹಿಂದೆಯೇ ತೆರವು ಮಾಡಿ ಆದೇಶ ಹೊರಡಿಸಿದ್ದರು. ಆದರೂ ಅಂಗಡಿಗಳು ತೆರೆದು ಕಾರ್ಯಾಚರಿಸಲಾಗುತ್ತಿತ್ತು. ಅದರಲ್ಲಿ ಒಂದು ಅಂಗಡಿಗೆ ಮೂಡುಬಿದಿರೆ ನಿವಾಸಿಯೊಬ್ಬರು ಬೆಳಗ್ಗೆ ಮತ್ತು ಸಾಯಂಕಾಲ ಎಳನೀರು ತಂದು ಹಾಕುತ್ತಿದ್ದರು. ಶುಕ್ರವಾರ ಅಲ್ಲಿದ್ದ ಮಹೇಶ್, ದುರ್ಗಾಚರಣ್ ಮತ್ತು ದಿನೇಶ್ ಎಂಬುವರು ಅಂಗಡಿ ಮುಚ್ಚಲಾಗಿದೆ, ಇಲ್ಲಿ ಹಾಕುವಂತಿಲ್ಲ ಎಂದು ಹೇಳಿದ್ದರು. ಅದಕ್ಕೆ ಅವರು ತನಗೆ ಎಳನೀರು ಅನ್‌ಲೋಡ್ ಮಾಡಲು ಅಡ್ಡಿ ಮಾಡಿದ್ದಾರೆ ಎಂದು ಇನ್‌ಸ್ಪೆಕ್ಟರ್‌ಗೆ ಮಾಹಿತಿ ನೀಡಿದ್ದರು. ಶನಿವಾರ ಸಾಯಂಕಾಲ ಇನ್‌ಸ್ಪೆಕ್ಟರ್ ಮೂವರನ್ನೂ ಠಾಣೆಗೆ ಕರೆಸಿ, ವಿಚಾರಣೆ ಸಂದರ್ಭ ಯುವಕರು ಉತ್ತರ ಕೊಡದೆ ಅನುಚಿತವಾಗಿ ಮಾತನಾಡಿದ್ದಾರೆ ಎಂದು ಆರೋಪಿಸಿ ಹೊಡೆದಿದ್ದಾರೆ ಎನ್ನಲಾಗಿದೆ. ಪ್ರಾಥಮಿಕ ತನಿಖೆಯಲ್ಲಿ ಪೊಲೀಸ್ ಅಧಿಕಾರಿ, ಸಿಬ್ಬಂದಿಯಿಂದ ಲೋಪ ಕಂಡು ಬಂದಿರುವುದರಿಂದ ಈ ಕ್ರಮ ಕೈಗೊಳ್ಳಲಾಗಿದೆ ಎಂದು ಪೊಲೀಸ್ ಆಯುಕ್ತ ಎನ್.ಶಶಿಕುಮಾರ್ ತಿಳಿಸಿದ್ದಾರೆ.
ಸಾರ್ವಜನಿಕರು ಠಾಣೆಗೆ ಬಂದಾಗ, ಅವರು ಆರೋಪಿಗಳಾಗಿದ್ದರೂ ಪೊಲೀಸರು ಅನುಚಿತವಾಗಿ ನಡೆದುಕೊಳ್ಳಬಾರದು. ಕಾನೂನಿನ ಮೂಲಕ ಕ್ರಮಕ್ಕೆ ಅವಕಾಶವಿದೆ. ಎಲ್ಲ ವಿಚಾರಗಳನ್ನು ಹಿರಿಯ ಅಧಿಕಾರಿಗಳ ಗಮನಕ್ಕೆ ತಂದು ಮುಂದಿನ ಕ್ರಮ ಕೈಗೊಳ್ಳಬೇಕು. ಜನಸ್ನೇಹಿಯಾಗಿ ಕೆಲಸ ಮಾಡುವುದು ಜವಾಬ್ದಾರಿ. ಈ ವಿಚಾರವನ್ನು ಎಲ್ಲ ಪೊಲೀಸ್ ಅಧಿಕಾರಿ, ಸಿಬ್ಬಂದಿಗೆ ತಿಳಿಸಲಾಗಿದೆ.
ಎನ್.ಶಶಿಕುಮಾರ್ ನಗರ ಪೊಲೀಸ್ ಆಯುಕ್ತ