ಕಾರು ಪಲ್ಟಿಯಾಗಿ ಮೂವರು ಯುವಕರು ಸಾವು

web
Published on

ಕೆ.ಆರ್.ಪೇಟೆ : ತಾಲೂಕಿನ ಅಕ್ಕಿಹೆಬ್ಬಾಳು ಸೇತುವೆಯ ಬಳಿ ಶನಿವಾರ ರಾತ್ರಿ ಕಾರೊಂದು ಚಾಲಕನ ನಿಯಂತ್ರಣ ತಪ್ಪಿ ಹಳ್ಳಕ್ಕೆ ಮಗುಚಿ ಬಿದ್ದ ಪರಿಣಾಮ ಮೂವರು ಯುವಕರು ಸ್ಥಳದಲ್ಲಿಯೇ ಮೃತಪಟ್ಟು, ಮತ್ತೊಬ್ಬ ಗಂಭೀರವಾಗಿ ಗಾಯಗೊಂಡಿದ್ದಾನೆ.

ಪಟ್ಟಣದ ಅಗ್ರಹಾರ ಬಡಾವಣೆಯ ಅಶೋಕ್ ಕುಮಾರ್ ಅವರ ಮಗ ಚಿರಂಜೀವಿ(21), ಬಸವೇಶ್ವರನಗರದ ಭಗವಾನ್ ಕಾಫಿ ವರ್ಕ್ಸ್ ಮಾಲೀಕ ಚೇತನ್ ಅವರ ಮಗ ಅನಿಕೇತನ(21), ಪಿರಿಯಾಪಟ್ಟಣ ತಾಲೂಕಿನ ಬೈಲುಕುಪ್ಪೆ ಗ್ರಾಮದ ಸೋಮಶೇಖರ್ ಅವರ ಮಗ ಪವನ್ ಮೃತರು. ಪಟ್ಟಣದ ವಿಜಯಕುಮಾರ್ ಅವರ ಪುತ್ರ ಸಾಗರ್ ಗಂಭೀರವಾಗಿ ಗಾಯಗೊಂಡು ಮೈಸೂರಿನ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾನೆ.

ಘಟನೆಯ ವಿವರ: ಒಂದೇ ಕಾಲೇಜಿನಲ್ಲಿ ಓದುತ್ತಿದ್ದ ನಾಲ್ವರೂ ಯುವಕರು ರಜೆಯ ಹಿನ್ನೆಲೆಯಲ್ಲಿ ಊರಿಗೆ ಬಂದಿದ್ದು, ಕೆಲಸದ ನಿಮಿತ್ತ ಸಾಲಿಗ್ರಾಮ ತಾಲೂಕಿನ ಭೇರ್ಯ ಕಡೆಗೆ ಹೋಗುತ್ತಿದ್ದ ವೇಳೆ ಜಲಸೂರು-ಬೆಂಗಳೂರು ಹೆದ್ದಾರಿಯ ತಿರುವಿನಲ್ಲಿ ಕಾರು ಚಾಲಕನ ನಿಯಂತ್ರಣ ತಪ್ಪಿ ಹಳ್ಳಕ್ಕೆ ಮಗುಚಿ ಬಿದ್ದಿದೆ. ಪರಿಣಾಮ ಕಾರಿನಲ್ಲಿದ್ದ ಚಿರಂಜೀವಿ, ಪವನ್, ಅನಿಕೇತನ ಅವರಿಗೆ ಗಂಭೀರವಾದ ಗಾಯಗಳಾಗಿ ಸ್ಥಳದಲ್ಲಿಯೇ ಮೃತಪಟ್ಟರು. ಸಾಗರ್ ಗಾಯಗೊಂಡು ಒದ್ದಾಡುತ್ತಿದ್ದಾಗ ಸಾರ್ವಜನಿಕರು ತಕ್ಷಣ ನೆರವಾದರು.

ಸ್ಥಳಕ್ಕೆ ಕೆ.ಆರ್.ಪೇಟೆ ಗ್ರಾಮಾಂತರ ಪೊಲೀಸರು ಭೇಟಿ ನೀಡಿ ಪರಿಶೀಲನೆ ನಡೆಸಿದರು. ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ಮೂರು ಶವಗಳನ್ನು ಪಟ್ಟಣದ ಸಾರ್ವಜನಿಕ ಆಸ್ಪತ್ರೆಯಲ್ಲಿ ವೈದ್ಯಕೀಯ ಪರೀಕ್ಷೆ ನಡೆಸಿ ಕುಟುಂಬದವರಿಗೆ ಹಸ್ತಾಂತರಿಸಲಾಗಿದ್ದು, ಮಕ್ಕಳನ್ನು ಕಳೆದುಕೊಂಡ ಪಾಲಕರ ಆಕ್ರಂದನ ಮುಗಿಲುಮುಟ್ಟಿತ್ತು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net