

ಮಂಗಳೂರು: ಕುರ್ನಾಡು ಸುಬ್ಬುಗುಳಿ ಮಸೀದಿ ಬಳಿ ಭಾನುವಾರ ರಾತ್ರಿ ದ್ವಿಚಕ್ರ ವಾಹನದಲ್ಲಿ ಬಂದ ಮೂವರು ಯುವಕರು ಬೊಬ್ಬೆ ಹಾಕುವ ಮೂಲಕ ಶಾಂತಿ ಭಂಗಕ್ಕೆ ಯತ್ನಿಸಿದ್ದಾರೆ. ಪ್ರಕರಣಕ್ಕೆ ಸಂಬಂಧಿಸಿದಂತೆ ಕುರ್ನಾಡು ನಿವಾಸಿಗಳಾದ ಶರಣ್, ವಿಘ್ನೇಶ್, ಹರ್ಷಿತ್ ಎಂಬುವರನ್ನು ಕೊಣಾಜೆ ಪೊಲೀಸರು ಬಂಧಿಸಿದ್ದಾರೆ. ಸುಬ್ಬುಗುಳಿಯ ತಾಜುಲ್ ಉಲಮಾ ಜುಮಾ ಮಸೀದಿ ಎದುರು ಘೋಷಣೆ, ಕೇಕೆ ಹಾಕಿದ ಯುವಕರು ಬೋಳಿಯಾರ್ ಕಡೆಗೆ ತೆರಳಿದ್ದು, ಅಲ್ಲಿಂದ ವಾಪಾಸಾಗುವಾಗ ಮಸೀದಿ ಬಳಿ ಜನ ಸೇರಿದ್ದರು. ಇದನ್ನು ಗಮನಿಸಿದ ಯುವಕರು ಮಸೀದಿ ಹತ್ತಿರದ ಕ್ಲಬ್ ಒಂದರ ಬಳಿ ಅಡಗಿಕುಳಿತ್ತಿದ್ದು, ಸ್ಥಳೀಯರ ಮಾಹಿತಿಯಂತೆ ಪೊಲೀಸರು ಅವರನ್ನು ಬಂಧಿಸಿದ್ದಾರೆ. ಶಾಂತಿ ಕದಡಲು ಯತ್ನಿಸಿದ ಯುವಕರ ವಿರುದ್ಧ ಕಠಿಣ ಕ್ರಮ ಕೈಗೊಳ್ಳಬೇಕು ಎಂದು ಸ್ಥಳೀಯರು ಆಗ್ರಹಿಸಿದ್ದಾರೆ.