

ಚಿತ್ರದುರ್ಗ: ಕೇಂದ್ರ ಸರ್ಕಾರ ಜಲ ಜೀವನ್ ಮಿಷನ್ ಯೋಜನೆಯಡಿ(ಜೆಜೆಎಂ)ಗ್ರಾಮೀಣ ಪ್ರದೇಶದ ಮನೆಗಳಿಗೆ ನಲ್ಲಿ ನೀರಿನ ಸಂಪರ್ಕ ಕಲ್ಪಿಸ ಲು ರಾಜ್ಯಕ್ಕೆ 9 ಸಾವಿರ ಕೋಟಿ ರೂ.ಬಿಡುಗಡೆ ಮಾಡಿದ್ದು, 3 ವರ್ಷದೊಳಗೆ ಈ ಯೋಜನೆ ರಾಜ್ಯದಲ್ಲಿ ಅನುಷ್ಠಾನವಾಗಬೇಕಿದೆ ಎಂದು ಗ್ರಾಮೀಣಾಭಿವೃದ್ಧಿ ಹಾಗೂ ಪಂಚಾಯತ್ ರಾಜ್ ಸಚಿವ ಕೆ.ಎಸ್.ಈಶ್ವರಪ್ಪ ಹೇಳಿದರು.
ಜಿಪಂದಲ್ಲಿ ಶುಕ್ರವಾರ ಕುಡಿವ ನೀರು ಪೂರೈಕೆ ಕಾಮಗಾರಿಗಳ ಪ್ರಗತಿ ಪರಿಶೀಲಿಸಿ ಮಾತನಾಡಿ,ಕೇಂದ್ರ ಸರ್ಕಾರ,ರಾಜ್ಯದಲ್ಲಿ ಈ ಯೋಜನೆ ಅನುಷ್ಠಾನಕ್ಕೆ 4 ವರ್ಷದ ಗಡುವು ಕೊಟ್ಟಿದ್ದರೂ,ಮುಂದಿನ ವಿಧಾನಸಭಾ ಚುನಾವಣೆ ಅವಧಿಯೊಳಗೆ ರಾಜ್ಯದ ಎಲ್ಲ ಗ್ರಾಮೀಣ ಮನೆಗಳಿಗೆ ನಲ್ಲಿ ನೀರಿನ ಸಂಪರ್ಕ ಕಲ್ಪಿಸಬೇಕಿದೆ ಎಂದರು.
ಚಿತ್ರದುರ್ಗ ತಾಲೂಕು ಸಿರಿಗೆರೆ-ಭರಮಸಾಗರ ಬಹು ಗ್ರಾಮ ಕುಡಿವ ನೀರಿನ ಯೋಜನೆ ಪೂರ್ಣಗೊಂಡಿದೆ. ಈ ಹಿನ್ನೆಲೆಯಲ್ಲಿ 29 ಹಳ್ಳಿಗಳ 6714 ಮನೆಗಳಿಗೆ ನಲ್ಲಿ ನೀರಿನ ಸಂಪರ್ಕ ಕಲ್ಪಿಸಲು14 ಕೋಟಿ ರೂ.ವೆಚ್ಚದ ಡಿಪಿಆರ್ ಸಿದ್ಧವಾಗಿದೆ. ಹಿರಿಯೂರು ತಾಲೂಕು ಐಮಂಗಲ ಮತ್ತು ಹರ್ತಿಕೋಟೆ ಎಂವಿಎಸ್ ಯೋಜನೆಗಳನ್ನು ಶೀಘ್ರ ಪೂರ್ಣಗೊಳಿಸಿ,ಜೆಜೆಎಂನ ತ್ವರಿತ ಅನುಷ್ಠಾನಕ್ಕೆ ತಾಕೀತು ಮಾಡಿದ ಸಚಿವರು,ಐದಾರು ತಿಂಗಳ ಒಳಗೆ ಜವಗೊಂಡನಹಳ್ಳಿ ಎಂವಿಎಸ್ ಸಿದ್ಧವಾಗಿರಬೇಕು.
ಎಂಎಲ್‌ಸಿ ಎಲೆಕ್ಷನ್ ನೀತಿ ಸಂಹಿತೆ ನ.13ರಂದು ಪೂರ್ಣವಾಗಲಿದ್ದು,ಶೀಘ್ರ ಕಾಮಗಾರಿ ಆದೇಶ ವಿತರಿಸಲು ಸಜ್ಜಾಗಿರಬೇಕು. ಡಿಸೆಂಬರ್ 1ರಂದು ನಗರದಲ್ಲಿ ಪರಿಶೀಲನೆ ನಡೆಸುತ್ತೇನೆ. ಒಂದು ವೇಳೆ ಗ್ರಾಪಂಗಳಿಗೆ ಆಯೋಗ ಚುನಾವಣೆಗೆ ದಿನಾಂಕ ಪ್ರಕಟಿಸಿದರೆ ಯಾವ ಕೆಲಸಗಳೂ ಆಗುವುದಿಲ್ಲ ಎಂಬ ಅರಿವಿರಲಿ. ಇಂದು ಅತ್ಯಂತ ಗೌರವದಿಂದ ಮಾತನಾಡುತ್ತಿದ್ದೇನೆ. ಒಂದನೇ ತಾರೀಖಿನಂದು ಸೂಚಿಸಿದ ಕೆಲಸಗಳು ಆಗದಿದ್ದರೆ ಬೇರೆಯೇ ರೀತಿಯೇ ಮಾತನಾಡುವೇ ಎಂದು ಎಚ್ಚರಿಸಿದರು. ಯೋಜನೆ ಅನುಷ್ಠಾನಕ್ಕೆ ಇತರೆ ಇಲಾಖೆಗಳಿಂದ ಏನು ಆಗಬೇಕಿ ತಿಳಿಸುವಂತೆ ಸೂಚಿಸಿದರು.
ಕೇಳುವುದಕ್ಕೆ ಯಾಕೆ ಬಡತನ?: ನಮ್ಮ ಇಲಾಖೆಯಿಂದ ಅನುದಾನ ಕೇಳಿ,ಕೇಳುವಾಗ ಹೆಚ್ಚಿನ ಪ್ರಮಾಣದಲ್ಲೇ ಕೇಳಿ. ಅದಕ್ಕೆ ಯಾಕೆ ಬಡತನವೆಂದು ಜಿಪಂ ಅಧ್ಯಕ್ಷೆ ಶಶಿಕಲಾ ಸುರೇಶ್‌ಬಾಬು ಅವರನ್ನು ಪ್ರಶ್ನಿಸಿದ ಸಚಿವರು,ಅಧಿಕಾರಿಗಳು ಪೋಸ್ಟ್‌ಮೆನ್ ಕೆಲಸ ಮಾಡದೇ,ಪ್ರಗತಿ ಸಾಧಿಸ ಬೇಕೆಂದರು. ಜಿಲ್ಲೆಯ 1052 ಶುದ್ಧ ಕುಡಿವ ನೀರಿನ ಘಟಕಗಳ ಪೈಕಿ 105 ಹೊರತುಪಡಿಸಿ ಉಳಿದೆಲ್ಲವೂ ದುರಸ್ತಿಯಾಗಿವೆ ಎಂದು ಟಿ.ಯೋಗೇಶ್ ಹೇಳಿದಾಗ,ಸಚಿವರು ಮೆಚ್ಚುಗೆ ವ್ಯಕ್ತಪಡಿಸಿದರು. ಇನ್ನುಳಿದ ಆರ್‌ಒಗಳು 15 ದಿನದೊಳಗೆ ದುರಸ್ತಿಯಾಗಲಿವೆ ಎಂದು ಸಿಇಒ ಹೇಳಿ ದರು. ಕುಡಿವ ನೀರು ನೈರ್ಮಲ್ಯ ಇಲಾಖೆ ಅಧಿಕಾರಿಗಳಿದ್ದರು.