ಮೈಸೂರು ನಗರ ಪಾಲಿಕೆಗೆ ಚುನಾವಣೆ ಭಾಗ್ಯವಿಲ್ಲ

ಜನಪ್ರತಿನಿಧಿಗಳು ಇಲ್ಲದೆ ಕಳೆಯಿತು ಮೂರು ವರ್ಷ
mcc (3)
ಮೈಸೂರು ಮಹಾನಗರ ಪಾಲಿಕೆ
Published on: 

ಸದೇಶ್ ಕಾರ್ಮಾಡ್ ಮೈಸೂರು

ನಗರ ಪಾಲಿಕೆಯ ಅಧಿಕಾರಾವಧಿ ಮುಕ್ತಾಯಗೊಂಡು 3 ವರ್ಷ ಪೂರ್ಣಗೊಂಡಿದ್ದು, ನಗರ ಪಾಲಿಕೆಯಲ್ಲಿ ಜನಪ್ರತಿನಿಧಿಗಳು ಇಲ್ಲದೆ ಜನರ ಸಮಸ್ಯೆಗಳಿಗೆ ಸ್ಪಂದಿಸುವವರು ಇಲ್ಲದಂತಾಗಿದೆ. ಹೀಗಾಗಿ ಪಾಲಿಕೆಗೆ ಚುನಾವಣೆ ಯಾವಗ ನಡೆಯಲಿದೆ ಎಂಬ ಪ್ರಶ್ನೆ ಎಲ್ಲರಲ್ಲೂ ಕಾಡುತ್ತಿದೆ.

ಕಳೆದ ಕೌನ್ಸಿಲ್‌ನ ಅಧಿಕಾರಾವಧಿ 16 ನವೆಂಬರ್ 2023ಕ್ಕೆ ಮುಕ್ತಾಯಗೊಂಡಿತ್ತು. ನಗರ ಪಾಲಿಕೆಯ 65 ವಾರ್ಡ್‌ಗಳಿಗೆ 31 ಆಗಸ್ಟ್ 2018ರಂದು ಚುನಾವಣೆ ನಡೆದಿತ್ತು. ನವೆಂಬರ್ 17 ರಂದು ಆ ಅವಧಿಯ ಮೊದಲ ಮೇಯರ್ ಹಾಗೂ ಉಪ ಮೇಯರ್ ಸ್ಥಾನಕ್ಕೆ ಚುನಾವಣೆ ನಡೆಯಿತು. ಅದೇ ದಿನ ಪಾಲಿಕೆ ಸದಸ್ಯರು ಪ್ರಮಾಣ ವಚನ ಸ್ವೀಕರಿಸಿದ ಹಿನ್ನೆಲೆಯಲ್ಲಿ ಪಾಲಿಕೆ ಅಧಿಕಾರಾವಧಿ 16 ನವೆಂಬರ್ 2023ಕ್ಕೆ ಮುಕ್ತಾಯಗೊಂಡಿತ್ತು.

ಜನರ ಸಮಸ್ಯೆ ಕೇಳುವವರಿಲ್ಲ:

ನಗರ ಪಾಲಿಕೆ ಚುನಾವಣೆ ನಡೆಯದಿರುವುದರಿಂದ ವಾರ್ಡ್ ಮಟ್ಟದಲ್ಲಿ ಸಾರ್ವಜನಿಕರು ಎದುರಿಸುತ್ತಿರುವ ಸಮಸ್ಯೆಗಳು ಮತ್ತಷ್ಟು ಚರ್ಚೆಗೆ ಗ್ರಾಸವಾಗಿವೆ. ಜನಪ್ರತಿನಿಧಿಗಳಿದ್ದಾಗ ಸಾರ್ವಜನಿಕರು ತಮ್ಮ ವಾರ್ಡ್ ಸದಸ್ಯರನ್ನು ನೇರವಾಗಿ ಸಂಪರ್ಕಿಸಿ ಸಮಸ್ಯೆಗಳನ್ನು ತಿಳಿಸಬಹುದಿತ್ತು. ಸದಸ್ಯರು ಪಾಲಿಕೆ ಸಭೆಗಳಲ್ಲಿ ಸಮಸ್ಯೆಗಳನ್ನು ಪ್ರಸ್ತಾಪಿಸಿ ಅಧಿಕಾರಿಗಳಿಂದ ಉತ್ತರ ಕೇಳಬಹುದಿತ್ತು. ಆದರೆ, ಈಗ ಅಂತಹ ವ್ಯವಸ್ಥೆಯೇ ಇಲ್ಲದಂತಾಗಿದೆ. ಅಧಿಕಾರಿಗಳು ಆಡಳಿತಾತ್ಮಕವಾಗಿ ಕೆಲಸ ನಿರ್ವಹಿಸುತ್ತಿದ್ದರೂ, ಜನರಿಂದ ಆಯ್ಕೆಯಾದ ಪ್ರತಿನಿಧಿಗಳ ಮೂಲಕ ನಡೆಯುವ ಆಡಳಿತಕ್ಕೂ ಅಧಿಕಾರಿಗಳ ಮೂಲಕ ನಡೆಯುವ ಆಡಳಿತಕ್ಕೂ ವ್ಯತ್ಯಾಸವಿದೆ. ಚುನಾಯಿತ ಸದಸ್ಯರು ಇಲ್ಲದಿರುವುದರಿಂದ ವಾರ್ಡ್‌ಗಳ ಸ್ಥಳೀಯ ಸಮಸ್ಯೆಗಳಿಗೆ ಆದ್ಯತೆ ನೀಡುವ ವಿಚಾರದಲ್ಲೂ ಸಾರ್ವಜನಿಕರಲ್ಲಿ ಅಸಮಾಧಾನವಿದೆ.

ಚುನಾವಣೆ ನಡೆಸಲು ನಿರಾಸಕ್ತಿ:

ಸಾಮಾನ್ಯವಾಗಿ ಅಧಿಕಾರಾವಧಿ ಮುಕ್ತಾಯಗೊಳ್ಳುವ ಮುನ್ನವೇ ಮುಂದಿನ ಚುನಾವಣೆಗೆ ಸಿದ್ಧತೆಗಳು ಆರಂಭವಾಗಬೇಕಿತ್ತು. ಆದರೆ, ಅಧಿಕಾರಾವಧಿ ಮುಗಿದ ನಂತರವೂ ಚುನಾವಣೆ ನಡೆಸುವ ವಿಚಾರದಲ್ಲಿ ಸರ್ಕಾರ ನಿರ್ದಿಷ್ಟ ನಿರ್ಧಾರ ಕೈಗೊಳ್ಳಲಿಲ್ಲ. ಪರಿಣಾಮ, ಚುನಾಯಿತ ಆಡಳಿತ ಮಂಡಳಿಯಿಲ್ಲದೆ ಪಾಲಿಕೆ ಕಾರ್ಯನಿರ್ವಹಿಸುವ ಪರಿಸ್ಥಿತಿ ನಿರ್ಮಾಣವಾಯಿತು.

ಪಾಲಿಕೆಯ ಅಧಿಕಾರಾವಧಿ ಮುಕ್ತಾಯಗೊಂಡ ಆರಂಭದಲ್ಲಿ ಆಗಿನ ಮುಖ್ಯಮಂತ್ರಿ ಸಿದ್ದರಾಮಯ್ಯ ಚುನಾವಣೆ ನಡೆಸುವ ವಿಚಾರದಲ್ಲಿ ಆಸಕ್ತಿ ತೋರಿದ್ದರು. ಬೆಂಗಳೂರಿನಲ್ಲಿ ಜಿಲ್ಲೆಯ ಕಾಂಗ್ರೆಸ್ ಶಾಸಕರ ಸಭೆ ಕರೆದು ಪಾಲಿಕೆ ಚುನಾವಣೆಗೆ ಸಂಬಂಧಿಸಿದಂತೆ ಮಾಹಿತಿ ಪಡೆದುಕೊಂಡಿದ್ದರು. ಅಲ್ಲದೆ, ನಗರ ಪಾಲಿಕೆಯ ಕಾಂಗ್ರೆಸ್ ಸದಸ್ಯರಿಂದಲೂ ರಾಜಕೀಯ ಹಾಗೂ ಚುನಾವಣಾ ಪರಿಸ್ಥಿತಿಯ ಬಗ್ಗೆ ಮಾಹಿತಿ ಸಂಗ್ರಹಿಸಿದ್ದರು. ಆದರೆ, ನಂತರ ಲೋಕಸಭೆ ಹಾಗೂ ವಿಧಾನ ಪರಿಷತ್ ಚುನಾವಣೆಗಳ ನೆಪದಲ್ಲಿ ಪಾಲಿಕೆ ಚುನಾವಣೆಯ ವಿಚಾರ ಹಿಂದಕ್ಕೆ ಸರಿಯಿತು.

ಈ ಚುನಾವಣೆಗಳು ಮುಗಿದ ಬಳಿಕವಾದರೂ ಪಾಲಿಕೆ ಚುನಾವಣೆ ನಡೆಯಬಹುದು ಎಂಬ ನಿರೀಕ್ಷೆ ಸಾರ್ವಜನಿಕರಲ್ಲಿ ಮೂಡಿತ್ತು. ಆದರೆ, ಅಷ್ಟರಲ್ಲೇ ಗ್ರೇಟರ್ ಮೈಸೂರು ರಚನೆಯ ಪ್ರಸ್ತಾಪ ಮುನ್ನೆಲೆಗೆ ಬಂದಿತು. ಗ್ರೇಟರ್ ಮೈಸೂರು ರಚನೆಯಾದ ಬಳಿಕ ಹೊಸ ಆಡಳಿತ ವ್ಯವಸ್ಥೆ ಹಾಗೂ ವಾರ್ಡ್‌ಗಳ ಮರುವಿಂಗಡಣೆ ಸೇರಿದಂತೆ ಹಲವು ಬದಲಾವಣೆಗಳಾಗಲಿವೆ ಎಂಬ ಕಾರಣ ಮುಂದಿಟ್ಟು ಚುನಾವಣೆಯನ್ನು ಸರ್ಕಾರ ಮುಂದೂಡುತ್ತಾ ಬಂದಿದೆ.

ಗ್ರೇಟರ್ ಮೈಸೂರು ರಚನೆಯೂ ನನೆಗುದಿಗೆ:

ನಗರ ಪಾಲಿಕೆಯನ್ನು ವಿಸ್ತರಿಸಿ ಸುತ್ತಮುತ್ತಲಿನ ನಗರ ಸ್ಥಳೀಯ ಸಂಸ್ಥೆಗಳು ಹಾಗೂ ಗ್ರಾಮೀಣ ಪ್ರದೇಶಗಳನ್ನು ಒಳಗೊಂಡಂತೆ ಗ್ರೇಟರ್ ಮೈಸೂರು ರಚಿಸುವ ಉದ್ದೇಶವನ್ನು ರಾಜ್ಯ ಸರ್ಕಾರ ಹೊಂದಿದೆ. ಈ ಸಂಬಂಧ ಜನವರಿ 8ರಂದು ರಾಜ್ಯಪತ್ರದಲ್ಲಿ ಪ್ರಾಥಮಿಕ ಅಧಿಸೂಚನೆ ಹೊರಡಿಸಿ, ಸಾರ್ವಜನಿಕರಿಂದ ಆಕ್ಷೇಪಣೆ ಸಲ್ಲಿಸಲು 30 ದಿನಗಳ ಕಾಲಾವಕಾಶ ನೀಡಲಾಗಿತ್ತು. ಗ್ರೇಟರ್ ಮೈಸೂರು ರಚನೆಯಿಂದ ನಗರದ ಆಡಳಿತ ವ್ಯಾಪ್ತಿ ವಿಸ್ತರಣೆಯಾಗಲಿದ್ದು, ನಗರಾಭಿವೃದ್ಧಿಯ ದೃಷ್ಟಿಯಿಂದ ಮಹತ್ವದ ಬದಲಾವಣೆಯಾಗಲಿದೆ ಎಂಬ ನಿರೀಕ್ಷೆ ಮೂಡಿತ್ತು. ಆದರೆ, ಪ್ರಾಥಮಿಕ ಅಧಿಸೂಚನೆ ಹೊರಡಿಸಿದ ಬಳಿಕ ಅಂತಿಮ ಅಧಿಸೂಚನೆ ಹೊರಡಿಸುವ ಪ್ರಕ್ರಿಯೆ ಮುಂದುವರಿಯಲಿಲ್ಲ. ಈ ಕುರಿತು ಇತ್ತೀಚೆಗೆ ಜಿಲ್ಲಾ ಉಸ್ತುವಾರಿ ಸಚಿವ ಡಾ.ಯತೀಂದ್ರ ಸಿದ್ದರಾಮಯ್ಯ ಅವರು ಪ್ರತಿಕ್ರಿಯಿಸಿ, ದೇಶಾದ್ಯಂತ ಜನಗಣತಿ ನಡೆಯುತ್ತಿರುವ ಹಿನ್ನೆಲೆಯಲ್ಲಿ ನಿಯಮಾವಳಿಗಳ ಪ್ರಕಾರ ಆಡಳಿತಾತ್ಮಕ ಗಡಿಗಳ ಬದಲಾವಣೆ ಮಾಡಲು ಸಾಧ್ಯವಿಲ್ಲ. ಹೀಗಾಗಿ ಗ್ರೇಟರ್ ಮೈಸೂರು ರಚನೆಯ ಪ್ರಕ್ರಿಯೆಯನ್ನು ಸದ್ಯಕ್ಕೆ ಯಥಾಸ್ಥಿತಿಯಲ್ಲಿ ಕಾಯ್ದುಕೊಳ್ಳಬೇಕಾಗಿದೆ ಎಂದು ತಿಳಿಸಿದ್ದರು. ರಾಜ್ಯದಲ್ಲಿ 2027ರ ಜನವರಿ ಹಾಗೂ ಫೆಬ್ರವರಿ ತಿಂಗಳಿನಲ್ಲಿ ಜನಗಣತಿ ನಡೆಯಲಿದೆ. ಹೀಗಾಗಿ ಗ್ರೇಟರ್ ಮೈಸೂರು ರಚನೆ ಪ್ರಕ್ರಿಯೆ ಮತ್ತಷ್ಟು ವಿಳಂಬವಾಗಲಿದೆ. ಇದರೊಂದಿಗೆ ಪಾಲಿಕೆ ಚುನಾವಣೆಯೂ ವಿಳಂಬವಾಗಲಿದೆ.

ಮೂರು ಪಕ್ಷಗಳಿಗೂ ಅಧಿಕಾರ:

ಕಳೆದ ಅವಧಿಯ ಆಡಳಿತದಲ್ಲಿ ನಗರ ಪಾಲಿಕೆಯು ಹಲವು ರಾಜಕೀಯ ವಿದ್ಯಮಾನಗಳಿಗೆ ಸಾಕ್ಷಿಯಾಯಿತು. ಕಳೆದ ಬಾರಿ ಎಲ್ಲ ಪ್ರಮುಖ ರಾಜಕೀಯ ಪಕ್ಷಗಳು (ಕಾಂಗ್ರೆಸ್, ಬಿಜೆಪಿ ಹಾಗೂ ಜೆಡಿಎಸ್) ಅಧಿಕಾರ ಅನುಭವಿಸಿದ್ದು ವಿಶೇಷವಾಗಿತ್ತು. 2018ರಲ್ಲಿ ರಾಜ್ಯದಲ್ಲಿ ಜೆಡಿಎಸ್-ಕಾಂಗ್ರೆಸ್ ಸರ್ಕಾರ ಅಸ್ತಿತ್ವದಲ್ಲಿ ಇತ್ತು. ಹೀಗಾಗಿ ಪಾಲಿಕೆ ಚುನಾವಣೆ ನಡೆದ ನಂತರ ಮೇಯರ್ ಚುನಾವಣೆ ಸಂದರ್ಭ ಕಾಂಗ್ರೆಸ್-ಜೆಡಿಎಸ್ ನಡುವೆ ಮೈತ್ರಿ ಏರ್ಪಟ್ಟಿತ್ತು. ರಾಜ್ಯದಲ್ಲಿ ಜೆಡಿಎಸ್-ಕಾಂಗ್ರೆಸ್ ಮೈತ್ರಿ ಸರ್ಕಾರ ಪಥನವಾದ ನಂತರ ಜೆಡಿಎಸ್‌ನ ಪರೋಕ್ಷ ಬೆಂಬಲದೊಂದಿಗೆ ಪಾಲಿಕೆ ಇತಿಹಾಸದಲ್ಲಿ ಮೊದಲ ಬಾರಿಗೆ ಬಿಜೆಪಿ ಅಧಿಕಾರಕ್ಕೆ ಏರಿತ್ತು. ಕಳೆದ ಬಾರಿ 4 ಅವಧಿಯಲ್ಲಿ 6 ಮೇಯರ್‌ಗಳು ಅಧಿಕಾರ ನಡೆಸಿದ್ದು ವಿಶೇಷ.