

ಶಿವಮೊಗ್ಗ: ಸಕ್ರೆಬೈಲ್ ಬಳಿ ತುಂಗಾ ಜಲಾಶಯದ ಹಿನ್ನೀರಿನಲ್ಲಿ ಶುಕ್ರವಾರ ಮಧ್ಯಾಹ್ನ ಮಹಿಳೆ ಸೇರಿ ಮೂವರ ಮೃತದೇಹಗಳು ಪತ್ತೆಯಾಗಿದ್ದು, ಆತ್ಮಹತ್ಯೆ ಮಾಡಿಕೊಂಡಿರುವ ಶಂಕೆ ವ್ಯಕ್ತವಾಗಿದೆ.
ಸಕ್ರೆಬೈಲ್ ಸಮೀಪದ 10ನೇ ಮೈಲಿಕಲ್ಲು ಬಳಿ ತುಂಗಾನದಿ ಹಿನ್ನೀರಿನಲ್ಲಿ ಮೃತದೇಹಗಳು ಕಂಡುಬಂದಿವೆ. ವಿಷಯ ತಿಳಿಯುತ್ತಿದ್ದಂತೆ ತುಂಗಾನಗರ ಠಾಣೆ ಪೊಲೀಸರು ಸ್ಥಳಕ್ಕೆ ದೌಡಾಯಿಸಿ ಪರಿಶೀಲಿಸಿದರು.
ಮೃತದೇಹಗಳು ಕೊಳೆತ ಸ್ಥಿತಿಯಲ್ಲಿದ್ದು, ಗುರುತು ಪತ್ತೆಯಾಗಿಲ್ಲ. ಎರಡು ದಿನಗಳ ಹಿಂದೆಯೇ 35ರಿಂದ 45 ವರ್ಷದೊಳಗಿನ ಇಬ್ಬರು ಪುರುಷರು ಮತ್ತು ಮಹಿಳೆ ಸಾಮೂಹಿಕವಾಗಿ ಆತ್ಮಹತ್ಯೆ ಮಾಡಿಕೊಂಡಿರುವ ಶಂಕೆ ವ್ಯಕ್ತವಾಗಿದೆ. ಮೂವರೂ ಸ್ಥಳೀಯರಲ್ಲ, ಬೇರೆಡೆಯಿಂದ ಇಲ್ಲಿಗೆ ಬಂದು ಹಿನ್ನೀರಿಗೆ ಹಾರಿ ಆತ್ಮಹತ್ಯೆ ಮಾಡಿಕೊಂಡಿರುವ ಸಾಧ್ಯತೆ ಇದೆ ಎನ್ನಲಾಗಿದೆ. ತುಂಗಾನಗರ ಠಾಣೆ ಪೊಲೀಸರು ಮೃತದೇಹಗಳನ್ನು ವಶಕ್ಕೆ ಪಡೆದು ಮರಣೋತ್ತರ ಪರೀಕ್ಷೆಗೆ ಮೆಗ್ಗಾನ್ ಆಸ್ಪತ್ರೆಗೆ ರವಾನೆ ಮಾಡಿದರು.