

ವಿಜಯವಾಣಿ ಸುದ್ದಿಜಾಲ ಉಡುಪಿ
ಈ ವರ್ಷದ ಸೂಪರ್ ಮೂನ್ಗಳ ಸರದಿ ಇಂದಿನಿಂದಲೇ (ಅ.7) ಪ್ರಾರಂಭಗೊಳ್ಳಲಿದ್ದು, ವರ್ಷಾಂತ್ಯದಲ್ಲಿ ಮೂರು ಬಾರಿ ಗೋಚರಿಸಲಿದೆ ಎಂದು ಉಡುಪಿಯ ಭೌತ ಶಾಸ್ತ್ರಜ್ಞ ಡಾ. ಎ.ಪಿ. ಭಟ್ ಮಾಹಿತಿ ನೀಡಿದ್ದಾರೆ.
ಭೂಮಿ ಹಾಗೂ ಚಂದ್ರನ ಸರಾಸರಿ ದೂರ 3 ಲಕ್ಷ 84 ಸಾವಿರ ಕಿಮೀ ಇದೆ. ಈ ಮೂರು ದಿನಗಳಲ್ಲಿ ಚಂದ್ರನು ಸುಮಾರು 3 ಲಕ್ಷ 61 ಸಾವಿರ ಕಿಮೀ ದೂರದಲ್ಲಿ ಗೋಚರಿಸಲಿದ್ದಾನೆ. ಅಂದರೆ, ಸುಮಾರು 23 ಸಾವಿರ ಕಿಮೀ ಸಮೀಪದಲ್ಲಿ ಚಂದ್ರ ಕಾಣಿಸುತ್ತಾನೆ. ಹೀಗಾಗಿ ಪ್ರತಿ ಹುಣ್ಣಿಮೆಯಂದು ಗೋಚರಿಸುತ್ತಿದ್ದ ಚಂದ್ರ ಈ ಮೂರು ದಿನಗಳಲ್ಲಿ ಇನ್ನೂ ಸುಮಾರು 18 ಅಂಶ ದೊಡ್ಡದಾಗಿ ಕಾಣಿಸಲಿದ್ದಾನೆ. ಹೀಗಾಗಿ ಬೆಳದಿಂಗಳೂ ಹೆಚ್ಚು ಪ್ರಭೆಯಿಂದ ಕೂಡಿರಲಿದೆ ಎಂದು ತಿಳಿಸಿದ್ದಾರೆ.
ಹುಣ್ಣಿಮೆಯ ಚಂದ್ರ ಬಲು ಚೆಂದ. ಶರತ್ಕಾಲದ ಆಶ್ವಯುಜ ಮಾಸದಲ್ಲಿ ರಾತ್ರಿಯಲ್ಲೂ ಆಕಾಶ ಇನ್ನಷ್ಟು ಭವ್ಯವಾಗಿ ಗೋಚರಿಸುತ್ತದೆ. ತಿಳಿಯಾದ ಬಿಳಿ ಬಣ್ಣದ ಮೋಡಗಳ ಮಧ್ಯೆ ಬೆಳ್ಳಂ ಬೆಳದಿಂಗಳ ಚಂದ್ರಮ ಇನ್ನೂ ಸುಂದರವಾಗಿ ಕಾಣಲಿದ್ದಾನೆ. ಸೂಪರ್ ಮೂನ್ನ ಬೆಳದಿಂಗಳ ನಡುವೆ ಅಲ್ಲಲ್ಲಿ ತೇಲುವ ಮಂಜುಗಡ್ಡೆಗಳ ಬಿಳಿ-ಹಳದಿ ವರ್ತುಲದ ಹ್ಯಾಲೋ ಸಹ ಗೋಚರಿಸಬಹುದು. ಪ್ರಕೃತಿಯ ಈ ವೈಭವ ಆರಾಧಿಸಬೇಕು, ಆಸ್ವಾದಿಸಬೇಕು ಎನ್ನುತ್ತಾರೆ. ಡಾ.ಎ.ಪಿ. ಭಟ್.