ಗುಬ್ಬಿ ಅಮಾನಿಕೆರೆಯಲ್ಲಿ ಈಜಲು ಹೋಗಿ ಮೂವರು ವಿದ್ಯಾರ್ಥಿಗಳು ನೀರುಪಾಲು

12Gubbi Photo 06
Published on

ಗುಬ್ಬಿ: ಸರ್ಕಾರಿ ಹಾಸ್ಟೆಲ್‌ನಿಂದ ಶಾಲೆಗೆ ತೆರಳುವುದಾಗಿ ಹೋಗಿದ್ದ ಐವರು ವಿದ್ಯಾರ್ಥಿಗಳಲ್ಲಿ ಮೂವರು ಬುಧವಾರ ಮಧ್ಯಾಹ್ನ ಗುಬ್ಬಿ ಅಮಾನಿಕೆರೆಯಲ್ಲಿ ಈಜಲು ಹೋಗಿ ನೀರು ಪಾಲಾಗಿದ್ದಾರೆ.

ಸಮಾಜ ಕಲ್ಯಾಣ ಇಲಾಖೆ ವಿದ್ಯಾರ್ಥಿನಿಲಯದ ಶ್ರೀನಿವಾಸ್ (14), ನಂದನ್(13) ಹಾಗೂ ದರ್ಶನ್(14) ಮೃತರು. ಶ್ರೀನಿವಾಸ್, ದರ್ಶನ್ 9ನೇ ತರಗತಿ, ನಂದನ್ 8ನೇ ತರಗತಿ ವ್ಯಾಸಂಗ ಮಾಡುತ್ತಿದ್ದ. ಎಂದಿನಂತೆ ಬೆಳಗ್ಗೆ ಹಾಸ್ಟೆಲ್‌ನಲ್ಲಿ ತಿಂಡಿ ಸೇವಿಸಿ ಶಾಲೆಗಳಿಗೆ ಹೋಗುವುದಾಗಿ ತೆರಳಿದ್ದ ವಿದ್ಯಾರ್ಥಿಗಳು 4 ಕಿ.ಮೀ ಕ್ರಮಿಸಿ ಅಮಾನಿಕೆರೆ ಎರಡನೇ ಕೋಡಿ ಬಳಿಗೆ ತೆರಳಿದ್ದರು.

ಕೋಡಿ ಸಮೀಪ ಆಂಜನೇಯಸ್ವಾಮಿ ದೇವಾಲಯ ಬಳಿ ಸೈಕಲ್‌ಗಳನ್ನು ನಿಲ್ಲಿಸಿ, ಸಮವಸ್ತ್ರ ಬಿಚ್ಚಿಟ್ಟು ಶ್ರೀನಿವಾಸ್, ನಂದನ್ ಮತ್ತು ದರ್ಶನ್ ನೀರಿಗಿಳಿದರೆ, ಅಶೋಕ್ ಮತ್ತು ಮೇಘರಾಜ್ ಹೊರಗುಳಿದಿದ್ದರು. ಈಜು ಬಾರದ ಈ ಮೂವರು ಇದ್ದಕ್ಕಿದ್ದಂತೆ ನೀರಿನ ಸೆಳೆತಕ್ಕೆ ಸಿಲುಕಿ ಮುಳುಗುತ್ತಿದ್ದುದನ್ನು ಕಂಡ ದಡದಲ್ಲಿದ್ದ ವಿದ್ಯಾರ್ಥಿಗಳು, ಸಮೀಪದಲ್ಲಿ ಬಟ್ಟೆ ಒಗೆಯುತ್ತಿದ್ದವರಿಗೆ ವಿಷಯ ತಿಳಿಸಿದ್ದಾರೆ. ಅವರು ರಕ್ಷಣೆಗೆ ಬರುವಷ್ಟರಲ್ಲಿ ಮುಳುಗಿದ್ದರು. ಅಗ್ನಿಶಾಮಕ ದಳ ಸಿಬ್ಬಂದಿ ಮತ್ತು ಪೊಲೀಸರು ಎರಡು ಗಂಟೆ ಕಾರ್ಯಾಚರಣೆ ನಡೆಸಿ ವಿದ್ಯಾರ್ಥಿಗಳ ಶವ ಹೊರತೆಗೆದರು. ಘಟನೆ ನಡೆದು ಒಂದು ತಾಸಿನಲ್ಲಿ ಶವಗಳನ್ನು ಸರ್ಕಾರಿ ಆಸ್ಪತ್ರೆ ಶವಾಗಾರಕ್ಕೆ ತರಲಾಯಿತು.

ನಂತರ ಆಸ್ಪತ್ರೆಯತ್ತ ಧಾವಿಸಿದ ಜಿಪಂ ಸಿಇಒ ಶುಭಕಲ್ಯಾಣ್, ತಹಸೀಲ್ದಾರ್ ಎಂ.ಮಮತಾ, ತಾಪಂ ಇಒ ನರಸಿಂಹಯ್ಯ, ಬಿಇಒ ವೆಂಕಟೇಶಪ್ಪ ಹಾಗೂ ಸಮಾಜ ಕಲ್ಯಾಣ ಇಲಾಖಾಧಿಕಾರಿ ರಾಮಣ್ಣ ಅವರಿಂದ ಘಟನೆ ಬಗ್ಗೆ ವರದಿ ಪಡೆದರು. ಸಿಪಿಐ ದೀಪಕ್ ಅವರೊಂದಿಗೆ ಚರ್ಚಿಸಿ ಪ್ರಕರಣ ದಾಖಲು ಮಾಡಿದರು. ಶವಪರೀಕ್ಷೆ ನಡೆಸಿ ಶವಗಳನ್ನು ಪಾಲಕರಿಗೆ ನೀಡಲಾಯಿತು.

ಶಾಲೆ, ಹಾಸ್ಟೆಲ್ ಹಾಜರಾತಿ ಬಗ್ಗೆ ಗೊಂದಲದ ಹೇಳಿಕೆ: ಬೇರೆ ಬೇರೆ ಶಾಲೆಯ ಈ ವಿದ್ಯಾರ್ಥಿಗಳು ಹಾಸ್ಟೆಲ್‌ನಿಂದ ಒಂದೇ ತಂಡವಾಗಿ ಹೊರಡುತ್ತಿದ್ದರು. ಸರ್ಕಾರಿ ಹಾಸ್ಟೆಲ್‌ನ ಈ ವಿದ್ಯಾರ್ಥಿಗಳು ಶಾಲೆಗೆ ಹೋಗದಿರುವುದಕ್ಕೆ ಜವಾಬ್ದಾರಿ ಯಾರು ಎಂಬ ಚರ್ಚೆ ಕೇಳಿಬರುತ್ತಿದೆ. ಚಿದಂಬರಾಶ್ರಮ ಶಾಲೆಯ ಮಕ್ಕಳು ಎರಡು ದಿನಗಳಿಂದ ಶಾಲೆಗೆ ಗೈರಾಗಿದ್ದರು ಎಂದು ತಿಳಿಸಿದರೆ, ಸಮಾಜ ಕಲ್ಯಾಣ ಇಲಾಖೆಯು ಮಕ್ಕಳು ನಿತ್ಯ ಶಾಲೆಗೆ ತೆರಳಿದ್ದಾರೆ ಎಂದು ಹೇಳಿದೆ. ಈ ಗೊಂದಲದ ಹೇಳಿಕೆ ಅಧಿಕಾರಿಗಳಿಗೆ ತಲೆಬಿಸಿ ಮಾಡಿದೆ.

ಬೇರೆಬೇರೆ ಶಾಲೆ ವಿದ್ಯಾರ್ಥಿಗಳು: ಶ್ರೀನಿವಾಸ್, ನಂದನ್ ಹಾಗೂ ಮೇಘರಾಜ್ ಚಿದಂಬರಾಶ್ರಮದಲ್ಲಿ, ದರ್ಶನ್, ಗುಬ್ಬಿ ಸರ್ಕಾರಿ ಪ್ರೌಢಶಾಲೆ ಮತ್ತು ಅಶೋಕ್ ಶ್ರೀನಿವಾಸ ಪ್ರೌಢಶಾಲೆಯಲ್ಲಿ ಓದುತ್ತಿದ್ದರು. ಶ್ರೀನಿವಾಸ್ ಬೆಂಗಳೂರಿನ ಜೈಮಾರುತಿ ನಗರ, ನಂದನ್ ನಿಟ್ಟೂರು ಹೋಬಳಿ ಕಲ್ಲೇನಹಳ್ಳಿ, ದರ್ಶನ್ ಎನ್.ರಾಂಪುರ ನಿವಾಸಿಗಳು ಎನ್ನಲಾಗಿದೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net