ಠಾಣೆ ಆವರಣದಲ್ಲಿ ಕಟ್ಟಿದ್ದ ಬೀದಿನಾಯಿ ಮೂವರ ಮೇಲೆ ದಾಳಿ

IMG-20240702-WA0301
ಗುಂಡ್ಲುಪೇಟೆ ಪೊಲೀಸ್ ಠಾಣೆಯ ಸಿಬ್ಬಂದಿಯಿಂದ ಸಲಹುತ್ತಿದ್ದ ಬೀದಿ ನಾಯಿ ಕರಿಯ.
Published on

ಗುಂಡ್ಲುಪೇಟೆ: ಪಟ್ಟಣದ ಠಾಣೆಯಲ್ಲಿ ಸಿಬ್ಬಂದಿಯೇ ಸಾಕಿದ್ದ ಬೀದಿನಾಯಿಯೊಂದು ಸೋಮವಾರ ಮೂವರಿಗೆ ಕಚ್ಚಿ ಗಾಯಗೊಳಿಸಿದೆ.

ಪ್ರತಿ ದಿನವೂ ಠಾಣೆಯ ಸಿಬ್ಬಂದಿಯೇ ಆಹಾರ ನೀಡುತ್ತ ಸಾಕಿದ್ದ ಬೀದಿ ನಾಯಿ ಸರ್ಕಲ್ ಇನ್ಸ್‌ಪೆಕ್ಟರ್, ದೂರು ನೀಡಲು ಬಂದಿದ್ದ ಶಿಕ್ಷಕ ಹಾಗೂ ಮತ್ತೊಬ್ಬರಿಗೆ ಕಡಿದು ಗಾಯಗೊಳಿಸಿದೆ. ಯಾರಿಗೂ ಯಾವುದೇ ತೊಂದರೆ ಮಾಡದೆ ಠಾಣೆ ಬಳಿ ಇರುತ್ತಿದ್ದ ನಾಯಿ ಸೋಮವಾರ ಇದ್ದಕ್ಕಿದ್ದಂತೆ ಕಡಿದು ಗಾಯಗೊಳಿಸಿದೆ. ನಾಯಿಯನ್ನು ಹಿಡಿಸುವ ಪ್ರಯತ್ನ ನಡೆಸುವಷ್ಟರಲ್ಲಿ ಅದು ಮೃತಪಟ್ಟಿದೆ.

ಠಾಣೆ ಮುಂದೆ ಇರುತ್ತಿದ್ದ ಕರಿಯ ಎಂಬ ಹೆಸರಿನ ಬೀದಿನಾಯಿ ರಾತ್ರಿ ವೇಳೆ ಯಾರೇ ಬಂದರೂ ಬೊಗಳಿ ಎಚ್ಚರಿಸುವ ಮೂಲಕ ಪೊಲೀಸರೊಂದಿಗೆ ನೈಟ್ ಡ್ಯೂಟಿ ಸಹ ಮಾಡಿ ಮೆಚ್ಚುಗೆಗೆ ಪಾತ್ರವಾಗಿತ್ತು. ಎಎಸ್‌ಐ ಎ.ಮಹೇಶ್ ಎಂಬುವರು ನಾಯಿಗೆ ಹಾಲು, ಅನ್ನ ತಿಂಡಿ ಹಾಕಿ ಮಗನಂತೆ ಪ್ರೀತಿಯಿಂದ ಸಾಕುತ್ತಿದ್ದರು. ಕಳೆದ 20 ದಿನಗಳ ಹಿಂದೆ ಠಾಣೆಯತ್ತ ಓಡಿಬಂದ ಹುಚ್ಚು ನಾಯಿಯೊಂದು ಬೈಕಿನಿಂದ ಕೆಳಗಿಳಿದ ಕಾನ್‌ಸ್ಟೇಬಲ್ ಮಂಜುಗೆ ಕಚ್ಚಿತ್ತು. ಇದೇ ಸಂದರ್ಭದಲ್ಲಿ ಸಮೀಪದಲ್ಲೇ ಇದ್ದ ಬೀದಿ ನಾಯಿಗೂ ಕಚ್ಚಿತ್ತು ಎನ್ನಲಾಗಿದೆ. ಕೂಡಲೇ ಆಸ್ಪತ್ರೆಗೆ ತೆರಳಿದ ಮಂಜು ಚುಚ್ಚುಮದ್ದು ಹಾಕಿಸಿಕೊಂಡಿದ್ದರು. ಎರಡು ದಿನಗಳ ನಂತರ ಪಶುವೈದ್ಯರಿಂದ ಬೀದಿನಾಯಿಗೂ ವ್ಯಾಕ್ಸಿನ್ ಹಾಕಿಸಲಾಗಿತ್ತು. ಆದರೆ ಅಷ್ಟರಲ್ಲಾಗಲೇ ನಾಯಿಗೆ ರೇಬಿಸ್ ನಂಜೇರಿತ್ತು.

ಮೊಬೈಲ್ ಕಳೆದು ಹೋಗಿರುವ ಬಗ್ಗೆ ದೂರು ಕೊಡಲು ಸೋಮವಾರ ಠಾಣೆಗೆ ಬಂದಿದ್ದ ಶಿಕ್ಷಕ ನಾಗೇಂದ್ರ ಎಂಬುವರ ಬಲಕಾಲನ್ನು ಹಿಂಬದಿಯಿಂದ ಬೀದಿನಾಯಿ ಕಚ್ಚಿತ್ತು. ಇವರು ದೂರು ನೀಡುವುದನ್ನು ಬಿಟ್ಟು ಆಸ್ಪತ್ರೆಗೆ ತೆರಳಿ ಚುಚ್ಚುಮದ್ದು ಪಡೆದರು. ಇದಾದ ನಂತರ ಸ್ನೇಹಿತರೊಂದಿಗೆ ಬಂದಿದ್ದ ಮತ್ತೊಬ್ಬನನ್ನು ಕಚ್ಚಿದೆ. ಅಲ್ಲದೆ ಅದೇ ವೇಳೆ ಠಾಣೆಗೆ ಬಂದ ಸರ್ಕಲ್ ಇನ್‌ಸ್ಪೆಕ್ಟರ್ ಪರಶಿವಮೂರ್ತಿ ಜೀಪಿನಿಂದ ಕೆಳಗಿಳಿಯುತ್ತಿದ್ದಂತೆ ಅವರ ಕಾಲನ್ನೂ ಕಚ್ಚಿದ್ದು, ಅವರೂ ಚಿಕಿತ್ಸೆ ಪಡೆದುಕೊಂಡಿದ್ದಾರೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net