ವ್ಯಕ್ತಿ ಆತ್ಮಹತ್ಯೆಗೆ ಕಾರಣವಾಗಿದ್ದ ಮೂವರಿಗೆ 10 ವರ್ಷ ಕಾರಾವಾಸ ಶಿಕ್ಷೆ

dist Court building
Published on

ಶಿವಮೊಗ್ಗ: ಆಸ್ತಿಯ ವಿಚಾರದ ಕಿರುಕುಳದಿಂದ ಮನನೊಂದು ಕ್ರಿಮಿನಾಶಕ ಸೇವಿಸಿ ವ್ಯಕ್ತಿಯ ಸಾವಿಗೆ ಕಾರಣವಾಗಿದ್ದ ಮೂವರಿಗೆ ಶಿವಮೊಗ್ಗದ 4ನೇ ಹೆಚ್ಚುವರಿ ಜಿಲ್ಲಾ ಮತ್ತು ಸತ್ರ ನ್ಯಾಯಾಲಯದ ಭದ್ರಾವತಿ ಪೀಠಾಸೀನವು ತಲಾ 10 ವರ್ಷ ಕಠಿಣ ಕಾರಾವಾಸ ಶಿಕ್ಷೆ ಹಾಗೂ 2 ಲಕ್ಷ ರೂ. ದಂಡ ವಿಧಿಸಿದೆ.

ಭದ್ರಾವತಿ ತಾಲೂಕಿನ ಗುಡಮಘಟ್ಟೆ ಗ್ರಾಮದ ಚಿಕ್ಕಮಗಳೂರು ರಂಗಪ್ಪ, ಪೂಜಾರ್ ಹನುಮಂತಪ್ಪ ಮತ್ತು ಕಲೀ ರಂಗಪ್ಪ ಶಿಕ್ಷೆಗೆ ಗುರಿಯಾದವರು. ಅದೇ ಗ್ರಾಮದ ಮಂಜಪ್ಪ ಎಂಬುವರು ಆತ್ಮಹತ್ಯೆ ಮಾಡಿಕೊಂಡಿದ್ದರು. 2018ರ ಜ.31ರಂದು ಬೆಳಗ್ಗೆ ಮಂಜಪ್ಪ ಕ್ರಿಮಿನಾಶಕ ಸೇವಿಸಿ ಆತ್ಮಹತ್ಯೆ ಮಾಡಿಕೊಂಡಿದ್ದರು. ಈ ಬಗ್ಗೆ ಮಂಜಪ್ಪ ಪತ್ನಿ ನೀಡಿದ ದೂರಿನ ಮೇರೆಗೆ ಹೊಳೆಹೊನ್ನೂರು ಠಾಣೆಯಲ್ಲಿ ಮೂವರ ವಿರುದ್ಧ ಪ್ರಕರಣ ದಾಖಲಾಗಿತ್ತು.

ಆಗಿನ ತನಿಖಾಧಿಕಾರಿಯಾಗಿದ್ದ ಪಿಎಸ್‌ಐ ಸುರೇಶ ಅವರು ದೋಷಾರೋಪಣ ಪಟ್ಟಿಯನ್ನು ನ್ಯಾಯಾಲಯಕ್ಕೆ ಸಲ್ಲಿಸಿದ್ದರು. ಈ ಬಗ್ಗೆ ವಿಚಾರಣೆ ನಡೆಸಿದ ನ್ಯಾಯಾಧೀಶೆ ಇಂದಿರಾ ಮೈಲಸ್ವಾಮಿ ಚೆಟ್ಟಿಯಾರ ಅವರು ಆರೋಪ ಸಾಬೀತಾಗಿದ್ದರಿಂದ ಮೂವರಿಗೆ ಕಠಿಣ ಕಾರಾಗೃಹ ಶಿಕ್ಷೆ ಮತ್ತು ದಂಡ ವಿಧಿಸಿದ್ದಾರೆ. ಸರ್ಕಾರಿ ಅಭಿಯೋಜಕಿ ಪಿ.ರತ್ನಮ್ಮ ಅವರು ಸರ್ಕಾರದ ಪರವಾಗಿ ವಾದ ಮಂಡಿಸಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net