

ಬೆಳಗಾವಿ: ಅಪ್ರಾಪ್ತೆ ಮೇಲೆ ಅತ್ಯಾಚಾರ ಎಸಗಿದ ಮೂರು ಪ್ರತ್ಯೇಕ ಪ್ರಕರಣಗಳಲ್ಲಿ ಮೂವರು ಅಪರಾಧಿಗಳಿಗೆ ಜಿಲ್ಲಾ ಪೋಕ್ಸೋ ನ್ಯಾಯಾಲಯದ ನ್ಯಾಯಾಧೀಶೆ ಸಿ.ಎಂ.ಪುಷ್ಪಲತಾ ದಂಡ ಸಹಿತ ಶಿಕ್ಷೆ ವಿಧಿಸಿ ತೀರ್ಪು ಪ್ರಕಟಿಸಿದ್ದಾರೆ.
ಬೆಳಗಾವಿ ತಾಲೂಕಿನ ಗುಗ್ರಾನಟ್ಟಿ ಗ್ರಾಮದ ಬಸವರಾಜ ಶಿಂದೋಳಕರ (33), ಚಿಕ್ಕೋಡಿ ತಾಲೂಕಿನ ಬೆಡಕಿಹಾಳ ಗ್ರಾಮದ ಸಿದ್ಧಾರ್ಥ ಜಾಧವ (22), ಕರೋಶಿ ಗ್ರಾಮದ ಸುಧಾಕರ ಜೈದೆ (28) ಶಿಕ್ಷೆಗೆ ಒಳಗಾದ ಅಪರಾಧಿಗಳು.
ಗುಗ್ರಾ$ನಟ್ಟಿ ಗ್ರಾಮದ ಅಪರಾಧಿ ಬಸವರಾಜ 2021ರಲ್ಲಿ ಅಪ್ರಾಪ್ತೆಯನ್ನು ಅಪಹರಿಸಿ ಲೈಂಗಿಕ ಅತ್ಯಾಚಾರ ಎಸಗಿದ್ದ ಕುರಿತು ಕಾಕತಿ ಠಾಣೆಯಲ್ಲಿ ದೂರು ದಾಖಲಾಗಿತ್ತು. ದೂರಿನನ್ವಯ ತನಿಖಾಧಿಕಾರಿ ಆರ್.ಎಚ್.ಹಳ್ಳೂರ ದೋಷಾರೋಪ ಪಟ್ಟಿ ಸಲ್ಲಿಸಿದ್ದರು. ವಿಚಾರಣೆ ನಡೆಸಿದ ನ್ಯಾಯಾಧೀಶರು ಅಪರಾಧಿಗೆ 30 ವರ್ಷ ಕಠಿಣ ಕಾರಾಗೃಹ ಶಿಕ್ಷೆ, 10 ಸಾವಿರ ರೂ. ದಂಡ ವಿಧಿಸಿ ತೀರ್ಪು ನೀಡಿದ್ದಾರೆ.
ಬೆಡಕಿಹಾಳದ ಅಪರಾಧಿ ಸಿದ್ಧಾರ್ಥ 2022ರಲ್ಲಿ ಪ್ರೀತಿ&ಪ್ರೇಮದ ಹೆಸರಿನಲ್ಲಿ ಅಪ್ರಾಪ್ತೆಯನ್ನು ಅಪಹರಿಸಿ ಲೈಂಗಿಕ ದೌರ್ಜನ್ಯ ಎಸಗಿದ್ದ ಕುರಿತು ಸದಲಗಾ ಪೊಲೀಸ್ ಠಾಣೆಯಲ್ಲಿ ದೂರು ದಾಖಲಾಗಿತ್ತು. ದೂರಿನನ್ವಯ ತನಿಖಾಧಿಕಾರಿ ರವೀಂದ್ರ ಅಜ್ಜನ್ನವರ ದೋಷಾರೋಪ ಪಟ್ಟಿ ಸಲ್ಲಿಸಿದ್ದರು. ವಿಚಾರಣೆ ನಡೆಸಿದ ನ್ಯಾಯಾಧೀಶರು ಅಪರಾಧಿಗೆ 3 ವರ್ಷ ಕಾರಾಗೃಹ ಶಿಕ್ಷೆ, 5 ಸಾವಿರ ರೂ. ದಂಡ ವಿಧಿಸಿ ತೀರ್ಪು ನೀಡಿದ್ದಾರೆ.
ಕರೋಶಿಯ ಅಪರಾಧಿ ಸುಧಾಕರ 2022ರಲ್ಲಿ ಅಪ್ರಾಪ್ತೆ ಮೇಲೆ ಲೈಂಗಿಕ ದೌರ್ಜನ್ಯ ಎಸಗಿದ್ದ ಕುರಿತು ಚಿಕ್ಕೋಡಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿತ್ತು. ತನಿಖಾಧಿಕಾರಿ ಆರ್.ಆರ್.ಪಾಟೀಲ ನ್ಯಾಯಾಲಯಕ್ಕೆ ದೋಷಾರೋಪ ಪಟ್ಟಿ ಸಲ್ಲಿಸಿದ್ದರು. ವಿಚಾರಣೆ ನಡೆಸಿದ ನ್ಯಾಯಾಧೀಶರು ಅಪರಾಧಿಗೆ 30 ವರ್ಷ ಕಠಿಣ ಕಾರಾಗೃಹ ಶಿೆ, 10 ಸಾವಿರ ರೂ. ದಂಡ ವಿಧಿಸಿ ತೀರ್ಪು ಪ್ರಕಟಿಸಿದ್ದಾರೆ. ಮೂರು ಪ್ರಕರಣಗಳಲ್ಲಿ ಸರ್ಕಾರದ ಪರವಾಗಿ ಅಭಿಯೋಜಕ ಎಲ್.ವಿ.ಪಾಟೀಲ ವಾದ ಮಂಡಿಸಿದ್ದರು.