

ಗುತ್ತಲ: ಸಮೀಪದ ಹಾವನೂರ ಮತ್ತು ಹರಳಹಳ್ಳಿ ಗ್ರಾಮಗಳ ತುಂಗಭದ್ರಾ ನದಿಯ ದಡದಲ್ಲಿ ಅಕ್ರಮ ಮರಳು ಗಣಿಗಾರಿಕೆಯ ಮೇಲೆ ಗಣಿ ಮತ್ತು ವಿಜ್ಞಾನ ಇಲಾಖೆಯ ಅಧಿಕಾರಿಗಳು ಗುರುವಾರ ದಾಳಿ ನಡೆಸಿ ಹಾವನೂರ ಗ್ರಾಮದಲ್ಲಿ 3 ಕಬ್ಬಿಣದ ತೆಪ್ಪಗಳನ್ನು ವಶಪಡಿಸಿಕೊಂಡಿದ್ದಾರೆ.
ಹರಳಹಳ್ಳಿ ಗ್ರಾಮದ ನದಿಯ ದಡದಲ್ಲಿ 2 ಬಿದಿರಿನ ತೆಪ್ಪಗಳನ್ನು ಜೆಸಿಬಿ ಸಹಾಯದಿಂದ ನಾಶಪಡಿಸಿದ್ದಾರೆ. ಅಂದಾಜು 68 ಸಾವಿರ ರೂ. ಮೌಲ್ಯದ 80 ಮೆಟ್ರಿಕ್ ಟನ್ ಮರಳು ವಶಪಡಿಸಿಕೊಂಡಿದ್ದಾರೆ.
ಗಣಿ ಮತ್ತು ಭೂ ವಿಜ್ಞಾನ ಇಲಾಖೆಯ ಹಿರಿಯ ಭೂ ವಿಜ್ಞಾನಿ ನವೀನ ಪಿ.ಎಸ್., ನೇತೃತ್ವದಲ್ಲಿ ದಾಳಿ ಮಾಡಲಾಗಿದೆ. ಹಾವನೂರ, ಹರಳಹಳ್ಳಿ, ಮೇವುಂಡಿ ಮತ್ತು ತೇರದಹಳ್ಳಿ ಗ್ರಾಮಗಳಲ್ಲಿ ನಿರಂತರವಾಗಿ ರಾತ್ರೋರಾತ್ರಿ ಅಕ್ರಮ ಮರಳು ಗಣಿಗಾರಿಕೆ ನಡೆಯುತ್ತಿದ್ದು ಮುಂದಿನ ದಿನಗಳಲ್ಲಿ ನಿರಂತರವಾಗಿ ದಾಳಿ ಮಾಡಲಾಗುವುದು ಎಂದು ಭೂ ವಿಜ್ಞಾನಿ ಶಬ್ಬಿರಅಹ್ಮದ ದಿಡಗೂರ ತಿಳಿಸಿದ್ದಾರೆ.
ಅಕ್ರಮ ಗಣಿಗಾರಿಕೆ ನಡೆಸುತ್ತಿದ್ದ ಹಾವನೂರ ಗ್ರಾಮದ ಚಾಂದಸಾಬ ಘಾಟೀನ್ ಎಂಬುವರ ಮೇಲೆ ಗುತ್ತಲ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ಕಾರ್ಯಾಚರಣೆಯಲ್ಲಿ ಭೂ ವಿಜ್ಞಾನಿ ಅವಿನಾಶ ಎಸ್., ಖನಿಜ ರಕ್ಷಣಾ ಪಡೆಯ ರಮೇಶ ಹುಲ್ಲೂರ, ಎಎಸೈ ಎಸ್.ಎಂ ಸಾಸರವಾಡ ಇದ್ದರು.