ಸಿಎಫ್‌ಟಿಆರ್‌ಐನಲ್ಲಿ ಮೂರು ಉತ್ಪನ್ನಗಳು ಬಿಡುಗಡೆ

CFTRI
Published on

ಮೈಸೂರು: ನಗರದ ಕೇಂದ್ರೀಯ ಆಹಾರ ತಂತ್ರಜ್ಞಾನ ಸಂಶೋಧನಾಲಯ (ಸಿಎಫ್‌ಟಿಆರ್‌ಐ) ಮಂಗಳವಾರ 3 ಹೊಸ ಆಹಾರ ಉತ್ಪನ್ನಗಳನ್ನು ಬಿಡುಗಡೆ ಮಾಡಿದೆ.

ಸಿಎಫ್‌ಟಿಆರ್‌ಐನಲ್ಲಿ ಹಮ್ಮಿಕೊಂಡಿರುವ ‘ಒಂದು ವಾರ ಒಂದು ಪ್ರಯೋಗಾಲಯ’ ಕಾರ್ಯಕ್ರಮದಲ್ಲಿ ಪುಷ್ಟೀಕರಿಸಿದ ಫೈಬರ್ ರಸ್ಕ್, ಮಸಾಲೆ ಬ್ರೆಡ್ ಹಾಗೂ ಗ್ಲುಟನ್-ಫ್ರೀ ಕೇಕ್ ಮಿಕ್ಸ್ ಉತ್ಪನ್ನಗಳನ್ನು ಬಿಡುಗಡೆ ಮಾಡಲಾಯಿತು.

ಗ್ಲುಟನ್-ಫ್ರೀ ಕೇಕ್ ಮಿಕ್ಸ್ ಅನ್ನು ಬಳಸಿಕೊಂಡು ಸುಲಭವಾಗಿ ಹಾಗೂ ಕಡಿಮೆ ಸಮಯದಲ್ಲಿ ಕೇಕ್ ತಯಾರಿಸಬಹುದು. ಸಾಮಾನ್ಯವಾಗಿ ಕೇಕ್ ತಯಾರಿಸಲು ಸಾಕಷ್ಟು ಸಮಯ ಬೇಕಾಗುತ್ತದೆ. ಆದರೆ, ಈ ಮಿಕ್ಸ್ ಬಳಸಿದರೆ ಕಡಿಮೆ ಅವಧಿಯಲಿ ಕೇಕ್ ತಯಾರಿಸಬಹುದು. ಈ ಮಿಕ್ಸ್‌ನಲ್ಲಿ ಅಕ್ಕಿ ಹಿಟ್ಟು, ಸಕ್ಕರೆ, ನೈಸರ್ಗಿಕ ಬಣ್ಣ ಹಾಗೂ ವಿವಿಧ ವಸ್ತುಗಳನ್ನು ಸೇರಿಸಲಾಗಿದೆ. ಈ ಮಿಕ್ಸ್ ಬಳಸಿ ಕೇಕ್ ತಯಾರಿಸುವ ಸಂದರ್ಭ ಹೆಚ್ಚುವರಿಯಾಗಿ ನೀರು, ಹಾಲು, ಮೊಟ್ಟೆ, ಎಣ್ಣೆಯನ್ನು ಬಳಸಬೇಕು.

ಪುಷ್ಟೀಕರಿಸಿದ ಫೈಬರ್ ರಸ್ಕ್‌ನಲ್ಲಿ ಫೈಬರ್ ಅಂಶ ಹೆಚ್ಚಿನ ಪ್ರಮಾಣದಲ್ಲಿ ಇದೆ. ಧಾನ್ಯಗಳಿಂದ ಈ ರಸ್ಕ್ ತಯಾರಿಸಿರುವ ಹಿನ್ನೆಲೆಯಲ್ಲಿ ಫೈಬರ್ ಹಾಗೂ ಪೌಷ್ಟಿಕಾಂಶ ಹೆಚ್ಚಿನ ಪ್ರಮಾಣದಲ್ಲಿ ಇದೆ. ಸಾಮಾನ್ಯ ರಸ್ಕ್‌ಗೆ ಹೋಲಿಸಿದರೆ ಈ ಉತ್ಪನ್ನವು ಹೆಚ್ಚಿನ ಪೌಷ್ಟಿಕಾಂಶ ಹಾಗೂ ಜೀರ್ಣಸಾಧ್ಯತೆಯನ್ನು ಹೊಂದಿದೆ. ಅದೇ ರೀತಿ ಬ್ರೆಡ್ ಪ್ರಧಾನ ಆಹಾರಗಳಲ್ಲಿ ಒಂದಾಗಿದೆ, ಇದನ್ನು ಜನರು ವ್ಯಾಪಕವಾಗಿ ಬಳಸುತ್ತಾರೆ. ಈ ಹಿನ್ನೆಲೆಯಲ್ಲಿ ಸಿಎಫ್‌ಟಿಆರ್‌ಐ ಹೆಚ್ಚು ಪೌಷ್ಟಿಕಾಂಶದಿಂದ ಕೂಡಿದ ಮಸಾಲೆ ಬ್ರೆಡ್ ಅನ್ನು ಬಿಡುಗಡೆ ಮಾಡಿದೆ.

ಸಿಎಫ್‌ಟಿಆರ್‌ಐ ಉತ್ಪನ್ನಗಳನ್ನು ವಿಶ್ವ ಸಂಸ್ಥೆಯ ಮಾಜಿ ಮುಖ್ಯ ವಿಜ್ಞಾನಿ ಡಾ.ಸೌಮ್ಯ ಸ್ವಾಮಿನಾಥನ್ ಬಿಡುಗಡೆ ಮಾಡಿದರು. ಪಶ್ಚಿಮಬಂಗಾಳ ವಿದ್ಯುತ್ ನಿಯಂತ್ರಣ ಆಯೋಗ ಅಧ್ಯಕ್ಷ ಡಾ.ಎ.ವಿ. ರಾವ್, ಸಿಎಫ್‌ಟಿಆರ್‌ಐ ನಿರ್ದೇಶಕಿ ಡಾ.ಶ್ರೀದೇವಿ ಅನ್ನಪೂರ್ಣ ಸಿಂಗ್ ಇದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net