

ಮೈಸೂರು: ನಗರದ ಜಿಲ್ಲಾ ಕೇಂದ್ರ ಕಾರಾಗೃಹದಲ್ಲಿ ಎಸೆನ್ಸ್ ಕುಡಿದು ಅಸ್ವಸ್ಥಗೊಂಡು ಸಾವಿಗೀಡಾದ ಕೈದಿಗಳ ಸಂಖ್ಯೆ ಬುಧವಾರ ಮೂರಕ್ಕೆ ಏರಿಕೆಯಾಗಿದೆ. ಮಂಗಳವಾರ ಕೈದಿಯೊಬ್ಬರು ಮೃತಪಟ್ಟಿದ್ದರು. ಬುಧವಾರ ಮತ್ತಿಬ್ಬರು ಕೈದಿಗಳು ಮೃತಪಟ್ಟಿದ್ದಾರೆ.
ಚಾಮರಾಜನಗರದ ನಾಗರಾಜು (36), ಮೈಸೂರಿನ ಸಾತಗಳ್ಳಿಯ ಮಾದೇಶ್ (37) ಹಾಗೂ ರಮೇಶ್(28) ಮೃತ ಕೈದಿಗಳು. ಇವರನ್ನು ನಗರದ ಕೆ.ಆರ್. ಆಸ್ಪತ್ರೆಯಲ್ಲಿ ದಾಖಲಿಸಲಾಗಿತ್ತು. ಮಾದೇಶ್ ಅವರ ದೇಹ ಚಿಕಿತ್ಸೆಗೆ ಸ್ಪಂದಿಸದೆ ಮಂಗಳವಾರ ಕೊನೆಯುಸಿರೆಳೆದಿದ್ದರು. ಬುಧವಾರ ನಾಗರಾಜು ಹಾಗೂ ರಮೇಶ್ ಮೃತಪಟ್ಟಿದ್ದಾರೆ. ಈ ಮೂವರು ವಿವಿಧ ಪ್ರಕರಣಗಳಲ್ಲಿ ಜೀವಾವಧಿ ಶಿಕ್ಷೆಗೆ ಗುರಿಯಾಗಿದ್ದ ಕೈದಿಗಳಾಗಿದ್ದಾರೆ.
ಸಾವಿಗೆ ಕಾರಣವೇನು?: ಹೊಸ ವರ್ಷ ಹಿನ್ನೆಲೆಯಲ್ಲಿ ಕಾರಾಗೃಹದಲ್ಲಿ ಕೇಕ್ ತಯಾರಿಸಲು ಎಸೆನ್ಸ್ ತರಿಸಲಾಗಿತ್ತು. ಈ ಮೂವರು ಕೈದಿಗಳು ಕಾರಾಗೃಹದ ಬೇಕರಿ ವಿಭಾಗದಲ್ಲಿ ಕಾರ್ಯನಿರ್ವಹಿಸುತ್ತಿದ್ದರು. ಹಾಗಾಗಿ ಕೇಕ್ ತಯಾರಿಸಿ ಉಳಿದ ಎಸೆನ್ಸ್‌ಅನ್ನು ಈ ಮೂವರು ಕೈದಿಗಳು ಅಮಲೇರಿಸಿಕೊಳ್ಳಲು ಕುಡಿದಿದ್ದಾರೆ.
ಕೈದಿಗಳು ಡಿ.28 ರಂದು ಎಸೆನ್ಸ್ ಕುಡಿದಿದ್ದರು. ಆದರೆ, ಈ ವಿಚಾರವನ್ನು ಯಾರಿಗೂ ಹೇಳಿರಲಿಲ್ಲ. ಸಾಕಷ್ಟು ಪ್ರಮಾಣದಲ್ಲಿ ಎಸೆನ್ಸ್ ಕುಡಿದ ಹಿನ್ನೆಲೆಯಲ್ಲಿ ಮೂವರಿಗೆ ಹೊಟ್ಟೆ ನೋವು ಕಾಣಿಸಿಕೊಂಡ ಹಿನ್ನೆಲೆಯಲ್ಲಿ ಕಾರಾಗೃದಲ್ಲಿಯೇ ಆರಂಭದಲ್ಲಿ ಚಿಕಿತ್ಸೆ ನೀಡಲಾಯಿತು. ತೀವ್ರವಾಗಿ ಹೊಟ್ಟೆನೋವು ಕಾಣಿಸಿಕೊಂಡಿದ್ದ ಮಾದೇಶ್ ಅವರನ್ನು ಡಿ.29 ರಂದು ಕೆ.ಆರ್. ಆಸ್ಪತ್ರೆಗೆ ದಾಖಲಿಸಲಾಗಿತ್ತು. ನಂತರ ಡಿ.30 ರಂದು ಕೊಳ್ಳೇಗಾಲದ ನಾಗರಾಜು ಹಾಗೂ ಜ.2 ರಂದು ಹಾಸನದ ರಮೇಶ್ ಅವರನ್ನು ಆಸ್ಪತ್ರೆಗೆ ದಾಖಲಿಸಲಾಯಿತು. ಆದರೆ, ಈ ಮೂವರು ಆಸ್ಪತ್ರೆಯ ವೈದ್ಯರಿಗೂ ಸಹ ಎಸೆನ್ಸ್ ಕುಡಿದ ವಿಚಾರವನ್ನು ತಿಳಿಸಿರಲಿಲ್ಲ. ಆದರೆ, ಚಿಕಿತ್ಸೆ ನೀಡಿದರೂ ಹೊಟ್ಟೆನೋವು ಶಮನ ಆಗದೆ ಇದ್ದಾಗ ವೈದ್ಯರು ಮತ್ತಷ್ಟು ವಿಚಾರಿಸಿದಾಗ ಕೈದಿಗಳು ಹೊಟ್ಟೆ ನೋವಿಗೆ ಕಾರಣವಾದ ಅಂಶವನ್ನು ತಿಳಿಸಿದ್ದಾರೆ. ಆದರೆ, ಅಷ್ಟು ಹೊತ್ತಿಗಾಗಲೇ ಸಾಕಷ್ಟು ಸಮಯವಾದ ಹಿನ್ನೆಲೆಯಲ್ಲಿ ಅವರ ದೇಹ ಚಿಕಿತ್ಸೆಗೆ ಸೂಕ್ತ ರೀತಿಯಲ್ಲಿ ಸ್ಪಂದಿಸದೆ ಮೃತಪಟ್ಟಿದ್ದಾರೆ. ಸ್ಥಳಕ್ಕೆ ಕಾರಾಗೃಹ ಇಲಾಖೆ ಡಿಐಜಿ ಕೆ.ಸಿ.ದಿವ್ಯಶ್ರೀ ಭೇಟಿ ನೀಡಿ ಪರಿಶೀಲಿಸಿ ಮಾಹಿತಿ ಕಲೆಹಾಕಿದರು. ಮಂಡಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.