

ಶ್ರೀರಂಗಪಟ್ಟಣ: ಪಟ್ಟಣ ಪುರಸಭಾ ವ್ಯಾಪ್ತಿಯ ಕಾವೇರಿ ನದಿ ತೀರದ ಪ್ರದೇಶಗಳಲ್ಲಿ ಎಲ್ಲೆಂದರಲ್ಲಿ ಅಸ್ಥಿ ವಿಸರ್ಜನೆ ಹಾಗೂ ಧಾರ್ಮಿಕ ಕ್ರಿಯೆ ನಡೆಸುತ್ತಿದ್ದ ಅಕ್ರಮ ಅಡ್ಡೆಗಳಿಗೆ ಕಡಿವಾಣ ಹಾಕಲು ಸ್ಥಳೀಯ ಆಡಳಿತ ತೀರ್ಮಾನಿಸಿದ್ದು, ನಿಗದಿತ ಮೂರು ಪ್ರದೇಶಗಳಲ್ಲಿ ಮಾತ್ರ ಕಾನೂನಾತ್ಮಕವಾಗಿ ವಿಧಿ-ವಿಧಾನ ನಡೆಸುವ ಕ್ರಮಕ್ಕೆ ಮುಂದಾಗಿದೆ.
ಪಟ್ಟಣ ಪುರಸಭೆಯ ಸಭಾಂಗಣದಲ್ಲಿ ಸೋಮವಾರ ಪುರಸಭಾ ಉಪಾಧ್ಯಕ್ಷ ಎಂ.ಎಲ್.ದಿನೇಶ್ ಅಧ್ಯಕ್ಷತೆಯಲ್ಲಿ ಆಯೋಜಿಸಿದ್ದ ತುರ್ತು ಸಭೆಯಲ್ಲಿ ಹಾಜರಿದ್ದ ಸದಸ್ಯರು ಒಮ್ಮತದಿಂದ ನಿರ್ಧಾರ ಕೈಗೊಂಡರು.
ಉಪಾಧ್ಯಕ್ಷ ಎಂ.ಎಲ್.ದಿನೇಶ್ ಮಾತನಾಡಿ, ಪಟ್ಟಣದ ಸುತ್ತಲು ಜೀವನದಿ ಕಾವೇರಿ ಕಲುಷಿತಗೊಂಡು ಮಲಿನಗೊಳ್ಳುತ್ತಿರುವ ವಿಚಾರ ಕುರಿತು ಕುಶಾಲ್ ಕುಮಾರ್ ಕೌಶಿಕ್ ಎಂಬುವರು ಹೈಕೋರ್ಟ್ ಮೆಟ್ಟಿಲೇರಿದ ಹಿನ್ನೆಲೆಯಲ್ಲಿ ಕೋರ್ಟ್‌ನ ನಿರ್ದೇಶನ ಮೇರೆಗೆ ಜಿಲ್ಲಾಧಿಕಾರಿ, ಪಾಂಡವಪುರ ಉಪವಿಭಾಗಾಧಿಕಾರಿ, ತಹಸೀಲ್ದಾರ್ ಹಾಗೂ ಮುಖ್ಯಾಧಿಕಾರಿ ಒಳಗೊಂಡ ಸಮಿತಿ ರಚಿಸಿ ಈ ಬಗ್ಗೆ ಕ್ರಮಕೈಗೊಳ್ಳಲು ಸೂಚನೆ ನೀಡಲಾಗಿದೆ.
ಇನ್ನು ಶ್ರೀರಂಗಪಟ್ಟಣ, ಪಶ್ಚಿಮವಾಹಿನಿ ಹಾಗೂ ಗಂಜಾಂನ ಪ್ರದೇಶಗಳ ನದಿ ತೀರಗಳಲ್ಲಿ ಎಲ್ಲೆಂದರಲ್ಲಿ ವ್ಯಾಪಕವಾಗಿ ತಲೆ ಎತ್ತಿರುವ ಧಾರ್ಮಿಕ ಕ್ರಿಯೆ ಅಕ್ರಮ ಅಡ್ಡೆಗಳಿಂದ ಅಸ್ಥಿ, ಪ್ಲಾಸ್ಟಿಕ್ ತ್ಯಾಜ್ಯ ಹಾಗೂ ಬಟ್ಟೆಗಳ ವಿಸರ್ಜನೆಯಿಂದ ಕಾವೇರಿ ಮಾಲಿನ್ಯಗೊಳ್ಳುತ್ತಿದೆ. ಜತೆಗೆ ಇಲ್ಲಿಗೆ ಬರುವ ಜನರಿಂದ ಹೆಚ್ಚುವರಿ ಹಣ ಸುಲಿಗೆಯಂತಹ ಸಾಕಷ್ಟು ದೂರುಗಳು ಕೇಳಿಬಂದಿವೆ. ಇಲ್ಲಿನ ನದಿಯಲ್ಲಿ ಜನರು ಮುಳುಗಿ ಸಾಯುವ ಪ್ರಕರಣಗಳಿಗೆ ಕಡಿವಾಣ ಹಾಕಲು ಈ ನಿರ್ಧಾರ ಕೈಗೊಳ್ಳಲಾಗಿದೆ. ಹೀಗಾಗಿ, ಗೋಸಾಯ್ ಘಾಟ್, ನಿಮಿಷಾಂಬ ದೇಗುಲ ಸೇರಿದಂತೆ ಸುತ್ತಮುತ್ತಲ ಕೃಷಿಭೂಮಿಗಳಲ್ಲಿನ ಅಕ್ರಮ ಅಡ್ಡೆಗಳಿಗೆ ನಿಷೇಧ ಹೇರಲಿದ್ದು, ಪಟ್ಟಣ ಪುರಸಭೆಯಿಂದ ಇನ್ಮುಂದೆ ಶ್ರೀರಂಗಪಟ್ಟಣದ ಸ್ನಾನಘಟ್ಟ, ಗಂಜಾಂನ ತ್ರಿವೇಣಿ ಸಂಗಮ ಹಾಗೂ ಪಶ್ಚಿಮವಾಹಿನಿಯಲ್ಲಿ ಮಾತ್ರ ಧಾರ್ಮಿಕ ಅಪರ ಕ್ರಿಯೆಗಳಿಗೆ ಅವಕಾಶ ನೀಡಲು ತೀರ್ಮಾನಿಸಿ ಕಾನೂನಾತ್ಮಕವಾಗಿ ಟೆಂಡರ್ ಪ್ರಕ್ರಿಯೆ ಆರಂಭಿಸುವ ಜತೆಗೆ ತ್ಯಾಜ್ಯ ವೈಜ್ಞಾನಿಕ ವಿಲೇವಾರಿಗೆ ಪುರಸಭಾ ಆಡಳಿತ ಮುಂದಾಗಲಿದೆ. ಪ್ರಮುಖವಾಗಿ ಈ ಸ್ಥಳಗಳಲ್ಲಿ ಪೂಜಾ ಕೈಂಕರ್ಯ ನಡೆಸುವ ವೈದಿಕರು ಆಧಿಕೃತ ಪರವಾನಗಿ ಪಡೆದು ಕಡ್ಡಾಯವಾಗಿ ಗುರುತಿನ ಕಾರ್ಡ್ ಧರಿಸಿ ಕಾರ್ಯ ನಿರ್ವಹಿಸಲು ಕ್ರಮ ಕೈಗೊಳ್ಳಲು ಡಿಪಿಆರ್ ಸಿದ್ಧಪಡಿಸಿ ನ್ಯಾಯಾಲಯಕ್ಕೆ ಕಳುಹಿಸಲಾಗುತ್ತದೆ ಎಂದರು.
ಪುರಸಭಾ ಸದಸ್ಯ ಎಸ್.ಎನ್.ದಯಾನಂದ್ ಮಾತನಾಡಿ, ಪಟ್ಟಣದ ಸ್ನಾನಘಟ್ಟದಲ್ಲಿ ಶ್ರೀರಂಗನಾಥಸ್ವಾಮಿ ಹಾಗೂ ಶ್ರೀ ಗಂಗಾಧರೇಶ್ವರಸ್ವಾಮಿ ದೇವರ ಉತ್ಸವಕ್ಕೆ ಅಷ್ಟತೀರ್ಥ ನಡೆಸಲಾಗುತ್ತದೆ. ಇನ್ನು ಈ ಸ್ಥಳ ಪುರಜನರ ಕುಡಿಯುವ ನೀರು ಹಾಗೂ ನಿತ್ಯದ ಬಳಕೆ ಸೇರಿದಂತೆ ಪ್ರವಾಸಿಗರು ಭೇಟಿ ನೀಡುವ ಪ್ರಮುಖ ತಾಣವಾಗಿದೆ. ಯಾರೋ ಪಟ್ಟಭದ್ರ ಹಿತಾಸಕ್ತಿಗಳು ಇತ್ತೀಚೆಗೆ ನಿರ್ಮಾಣ ಮಾಡಿಕೊಂಡ ಅಕ್ರಮ ಅಡ್ಡೆಗಳನ್ನು ತೆರವು ಮಾಡಿ ಬೇರೆಡೆ ವರ್ಗಾಯಿಸಿ ಸಾರ್ವಜನಿಕರಿಗೆ ಮುಕ್ತ ಅವಕಾಶ ಕಲ್ಪಿಸಿ ಎಂದು ಮನವಿ ಮಾಡಿದರು.
ಈ ವಾದಕ್ಕೆ ಸದಸ್ಯರು ಗಂಜಾಂ ಶಿವು ಹಾಗೂ ಶ್ರೀನಿವಾಸ್ ಸಹ ದನಿಗೂಡಿಸಿದರು. ತಹಸೀಲ್ದಾರ್ ಪರಶುರಾಮ್ ಸತ್ತಿಗೇರಿ, ಮುಖ್ಯಾಧಿಕಾರಿ ರಾಜಣ್ಣ ಹಾಗೂ ಉಪಾಧ್ಯಕ್ಷ ದಿನೇಶ್ ಪರಿಶೀಲಿಸಿ ಕ್ರಮ ವಹಿಸುವ ಭರವಸೆ ನೀಡಿದರು.
ಪುರಸಭಾ ಸದಸ್ಯರಾದ ನಿರ್ಮಲಾ, ಮಂಗಳಮ್ಮ, ಪಾರ್ವತಿ, ಪೂರ್ಣಿಮಾ, ಎಸ್.ಟಿ.ರಾಜು, ನರಸಿಂಹೇಗೌಡ, ಹೂವು ರವಿ ಸೇರಿದಂತೆ ಹಲವರು ಇದ್ದರು.