

ರಾಯಚೂರು: ದಡಾರ ಮತ್ತು ರುಬೆಲ್ಲಾ ರೋಗ ನಿರ್ಮೂಲನೆಗಾಗಿ ಹಮ್ಮಿಕೊಂಡಿರುವ ಇಂದ್ರಧನುಷ್ 5.0 ಲಸಿಕೆ ಅಭಿಯಾನ ಯಶಸ್ವಿಗೊಳಿಸಲು ಅಧಿಕಾರಿಗಳು ಜವಾಬ್ದಾರಿಯುತವಾಗಿ ಕಾರ್ಯನಿರ್ವಹಿಸಬೇಕು ಎಂದು ಜಿಲ್ಲಾಧಿಕಾರಿ ಚಂದ್ರಶೇಖರ ನಾಯಕ ತಿಳಿಸಿದರು.
ಜಿಲ್ಲಾಧಿಕಾರಿ ಕಚೇರಿ ಸಭಾಂಗಣದಲ್ಲಿ ಇಂದ್ರಧನುಷ್ ಟಾಸ್ಕ್‌ಫೋರ್ಸ್ ಸಭೆ ಅಧ್ಯಕ್ಷತೆ ವಹಿಸಿ ಶುಕ್ರವಾರ ಮಾತನಾಡಿದರು. ಜಿಲ್ಲೆಯ ಎಲ್ಲ ಸರ್ಕಾರಿ ಆರೋಗ್ಯ ಕೇಂದ್ರಗಳು ಹಾಗೂ ಅಂಗನವಾಡಿ ಕೇಂದ್ರಗಳಲ್ಲಿ ಗರ್ಭಿಣಿಯರು ಮತ್ತು ಐದು ವರ್ಷದೊಳಗಿನ ಮಕ್ಕಳಿಗೆ ಲಸಿಕೆಯನ್ನು ಉಚಿತವಾಗಿ ನೀಡಲಾಗುವುದು. ಲಸಿಕೆ ಪಡೆಯುವವರು ಆಶಾ ಕಾರ್ಯಕರ್ತೆಯರಿಂದ ಯು-ವಿನ್‌ನಲ್ಲಿ ಮುಂಚಿತವಾಗಿ ನೋಂದಾಯಿಸಿಕೊಳ್ಳಬಹುದಾಗಿದೆ ಎಂದರು.
ಆ.7 ರಿಂದ 12ರವರೆಗೆ ಮೊದಲನೇ ಹಂತದ ಲಸಿಕಾಕರಣ ಹಮ್ಮಿಕೊಳ್ಳಲಾಗಿದ್ದು, ಸೆ.11 ರಿಂದ 16ರವರೆಗೆ 2ನೇ ಹಂತ, ಅ.9 ರಿಂದ 14ರವರೆಗೆ 3ನೇ ಹಂತದ ಅಭಿಯಾನ ಹಮ್ಮಿಕೊಳ್ಳಲಾಗಿದೆ. ಈಗಾಗಲೇ ಲಸಿಕೆಯಿಂದ ವಂಚಿತರಾಗಿರುವ ಮಕ್ಕಳು ಮತ್ತು ಗರ್ಭಿಣಿಯರನ್ನು ಗುರುತಿಸಿ ಇಂದ್ರಧನುಷ್ ಲಸಿಕೆ ಹಾಕಿಸಬೇಕು ಎಂದು ಚಂದ್ರಶೇಖರ ನಾಯಕ ತಿಳಿಸಿದರು. ಅಭಿಯಾನದ ಪೋಸ್ಟರ್ ಬಿಡುಗಡೆಗೊಳಿಸಲಾಯಿತು. ಜಿಲ್ಲಾ ಆಯುಷ್ ಅಧಿಕಾರಿ ಡಾ.ಶಂಕರಗೌಡ ಪಾಟೀಲ್, ತಾಲೂಕು ಆರೋಗ್ಯಾಧಿಕಾರಿ ಡಾ.ಮಹ್ಮದ್ ಶಾಕೀರ್ ಇದ್ದರು.