

ಉತ್ತರಕನ್ನಡ: ಜೇನುನೊಣಗಳ ದಾಳಿಯಿಂದ ವಿದ್ಯಾರ್ಥಿನಿ ಸೇರಿ ಮೂವರು ಅಸ್ವಸ್ಥಗೊಂಡಿದ್ದು, ರಜೆಗೆಂದು ಮನೆಗೆ ಹೊರಟವರು ನೇರ ಆಸ್ಪತ್ರೆಗೆ ಹೋಗುವಂತಾಗಿದೆ. ಉತ್ತರಕನ್ನಡ ಜಿಲ್ಲೆಯ ಅಂಕೋಲಾದಲ್ಲಿ ಇಂಥದ್ದೊಂದು ಪ್ರಕರಣ ವರದಿಯಾಗಿದೆ.
ಅಂಕೋಲಾದ ಕೆಎಲ್ಇ ಕಾಲೇಜಿನ ನರ್ಸಿಂಗ್ ವಿದ್ಯಾರ್ಥಿನಿ ಹಾಗೂ ಆಕೆಯ ಇಬ್ಬರು ಸಂಬಂಧಿಗಳು ರಜೆ ನಿಮಿತ್ತ ಕಾಲೇಜಿನಿಂದ ಹೊರಟು ಮನೆಯತ್ತ ತೆರಳುತ್ತಿದ್ದಾಗ ಅಂಕೋಲಾ ಬಸ್ ನಿಲ್ದಾಣದಲ್ಲಿ ಜೇನುನೊಣಗಳು ದಾಳಿ ಮಾಡಿವೆ.
ನೂರಾರು ಜೇನುನೊಣಗಳು ದಾಳಿ ನಡೆಸಿದ್ದರಿಂದ ಮೂವರೂ ಅಸ್ವಸ್ಥಗೊಂಡಿದ್ದು, ಅವರನ್ನು ತಕ್ಷಣ ತಾಲೂಕು ಆಸ್ಪತ್ರೆಗೆ ಕರೆದೊಯ್ದು ಚಿಕಿತ್ಸೆ ನೀಡಲಾಗಿದೆ. ಗಾಯಗೊಂಡಾಕೆ ಗೋವಾ ಮೂಲದ ವಿದ್ಯಾರ್ಥಿನಿ ಎನ್ನಲಾಗಿದೆ. ಅಂಕೋಲಾ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಈ ಘಟನೆ ನಡೆದಿದೆ.