

ರಾಮನಗರ: ಓವರ್ ಟೇಕ್ ಮಾಡುವ ವೇಳೆ ಒಮ್ನಿ ಕಾರು ಲಾರಿಗೆ ಹಿಂದಿನಿಂದ ಡಿಕ್ಕಿಯೊಡೆದು ಸಂಭವಿಸಿದ ಅಪಘಾತದಲ್ಲಿ ಒಂದೇ ಕುಟುಂಬದ ಮೂವರು ಮೃತಪಟ್ಟಿರುವ ಘಟನೆ ಬೆಂಗಳೂರು - ಮೈಸೂರು ದಶಪಥ ಹೆದ್ದಾರಿಯ ಕೆಂಪಗೇಗೌಡನದೊಡ್ಡಿ ಬಳಿ ನಡೆದಿದೆ.
ಬೆಂಗಳೂರಿನ ಪೀಣ್ಯ ನಿವಾಸಿಗಳಾದ ರಾಜೇಶ್ (50) ಇವರ ಪತ್ನಿ ಸುಮಾ (45) ಹಾಗೂ ಮತ್ತೊಬ್ಬ ಮಹಿಳೆ ಲಕ್ಷ್ಮಮ್ಮ ಮೃತಪಟ್ಟಿದ್ದಾರೆ. ಇತರೆ ನಾಲ್ವರಿಗೆ ಗಾಯಗಳಾಗಿದ್ದು, ಇವರನ್ನು ವಿವಿಧ ಆಸ್ಪತ್ರೆಗಳಿಗಾಗಿ ಚಿಕಿತ್ಸೆಗೆ ದಾಖಲು ಮಾಡಲಾಗಿದೆ.
ಪೀಣ್ಯದಲ್ಲಿ ನಲೆಸಿರುವ ಕುಟುಂಬ ಮಹಾಲಯ ಅಮಾವಾಸ್ಯ ಹಿನ್ನೆಲೆಯಲ್ಲಿ ಪಿತೃಪಕ್ಷ ಪೂಜೆ ಮಾಡಿಸಲು ಶ್ರೀರಂಗಪಟ್ಟಣಕ್ಕೆ ತೆರಳುತಿತ್ತು. ಈ ವೇಳೆ ಕೆಂಪೇಗೌಡನದೊಡ್ಡಿ ಬಳಿ ಮುಂದೆ ಸಾಗುತ್ತಿದ್ದ ಬೃಹತ್ ಲಾರಿಯನ್ನು ಹಿಂದಿಕ್ಕಲು ಹೋಗಿ ಹಿಂದಿನಿಂದ ಒಮ್ನಿ ಕಾರು ಡಿಕ್ಕಿಯೊಡೆದಿದೆ. ಡಿಕ್ಕಿಯ ರಭಸಕ್ಕೆ ಕಾರು ಸಂಪೂರ್ಣ ಜಖಂ ಗೊಂಡಿದ್ದು, ರಾಜೇಶ್, ಸುಮಾ ಸ್ಥಳದಲ್ಲಿಯೇ ಮೃತಪಟ್ಟಿದ್ದಾರೆ.
ಕಾರಿನಲ್ಲಿದ್ದ ಸುರೇಶ್, ಲಕ್ಷ್ಮಮ್ಮ, ಸೃಜನ್, ಮೋಹನ್, ರೋಹನ್ ತೀವ್ರವಾಗಿ ಗಾಯಗೊಂಡಿದ್ದು, ತಕ್ಷಣ ಇವರನ್ನು ರಾಮನಗರದ ವಿವಿಧ ಆಸ್ಪತ್ರೆಗಳಿಗೆ ಕರೆದುಕೊಂಡು ಹೋಗುವಾಗ ಲಕ್ಷ್ಮಮ್ಮ ಮಾರ್ಗ ಮಧ್ಯದಲ್ಲಿ ಮೃತಪಟ್ಟಿದ್ದಾರೆ. ಘಟನಾ ಸ್ಥಳಕ್ಕೆ ರಾಮನಗರ ಸಂಚಾರ ಪೊಲೀಸರು ಬೇಟಿ ನೀಡಿದ್ದು, ಸಂಚಾರವನ್ನು ನಿಯಂತ್ರಿಸಿದ್ದಾರೆ.