

ಹಾಸನ: ಚನ್ನರಾಯಪಟ್ಟಣ ಹಾಗೂ ಅರಸೀಕೆರೆ ತಾಲೂಕಿನಲ್ಲಿ ಭಾನುವಾರ ಸಂಭವಿಸಿದ ಪ್ರತ್ಯೇಕ ರಸ್ತೆ ಅಪಘಾತದಲ್ಲಿ ಮೂವರು ಬೈಕ್ ಸವಾರರು ಮೃತಪಟ್ಟಿದ್ದಾರೆ.
ಪ್ರಕರಣ 1: ಕಾರು ಡಿಕ್ಕಿಯಾಗಿ ಚನ್ನರಾಯಪಟ್ಟಣ ತಾಲೂಕು ದಿಡಗ ಗ್ರಾಮದ ಡಿ.ಎಂ.ಆದರ್ಶ (21) ಮೃತಪಟ್ಟಿದ್ದಾರೆ. ಭಾನುವಾರ ಬೆಳಗ್ಗೆ ಬೈಕ್‌ನಲ್ಲಿ ಮೂಕಿಕೆರೆ-ಕನುವಘಟ್ಟ ಗ್ರಾಮದ ರಸ್ತೆಯಲ್ಲಿ ಹೋಗುತ್ತಿದ್ದಾಗ ಕಬ್ಬಳಿ ಕಡೆಯಿಂದ ವೇಗವಾಗಿ ಬಂದ ಕಾರು ಡಿಕ್ಕಿ ಹೊಡೆದಿದೆ. ಇದರಿಂದ ರಸ್ತೆ ಮೇಲೆ ಬಿದ್ದ ಬೈಕ್ ಸವಾರನಿಗೆ ತೀವ್ರ ರಕ್ತಸ್ರಾವವಾಗಿ ಸ್ಥಳದಲ್ಲೇ ಮೃತಪಟ್ಟಿದ್ದಾರೆ. ಹಿರೀಸಾವೆ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಪ್ರಕರಣ 2: ಚನ್ನರಾಯಪಟ್ಟಣ ತಾಲೂಕಿನ ಬೀರೂರು ಗ್ರಾಮದಲ್ಲಿ ಕಾರು ಡಿಕ್ಕಿಯಾಗಿ ಬೈಕ್ ಸವಾರ ಸಾವಿಗೀಡಾಗಿ, ಹಿಂಬದಿ ಸವಾರ ಗಂಭೀರವಾಗಿ ಗಾಯಗೊಂಡಿದ್ದಾರೆ. ಅರಸೀಕೆರೆ ತಾಲೂಕಿನ ಎಂ.ವಿ.ಹಟ್ಟಿ ಗ್ರಾಮದ ಪಾಲಾಕ್ಷ (28) ಮೃತರು. ಶುಂಠಿ ಕೆಲಸದ ನಿಮಿತ್ತ ಸಂಬಂಧಿ ನವೀನ್ ಅವರ ಜತೆ ಕೆ.ಆರ್.ಪೇಟೆ ತಾಲೂಕಿನ ಗದ್ದಿಗೆ ಗ್ರಾಮಕ್ಕೆ ತೆರಳಿ ವಾಪಸ್ ಬರುವಾಗ ಅರಸೀಕೆರೆ ಕಡೆಯಿಂದ ಬಂದ ಅಪರಿಚಿತ ಕಾರು ಬೈಕ್‌ಗೆ ಡಿಕ್ಕಿ ಹೊಡೆದಿದೆ. ಬೈಕ್ ಮೇಲಿದ್ದ ಇಬ್ಬರಿಗೂ ಗಂಭೀರ ಗಾಯಗಳಾಗಿದ್ದರಿಂದ ಕೂಡಲೇ ಚನ್ನರಾಯಪಟ್ಟಣ ಸಾರ್ವಜನಿಕ ಆಸ್ಪತ್ರೆಗೆ ದಾಖಲಿಸಲಾಗಿತ್ತು. ಆದರೆ, ಪಾಲಾಕ್ಷ ಚಿಕಿತ್ಸೆ ಫಲಿಸದೆ ಮೃತಪಟ್ಟಿದ್ದಾರೆ. ಚನ್ನರಾಯಪಟ್ಟಣ ಗ್ರಾಮಾಂತರ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಪ್ರಕರಣ 3: ಅರಸೀಕೆರೆಯಲ್ಲಿ ಬೈಕ್‌ಗೆ ಲಾರಿ ಡಿಕ್ಕಿ ಹೊಡೆದು ಬೈಕ್‌ಗೆ ಬೆಂಕಿ ಹೊತ್ತಿಕೊಂಡ ಪರಿಣಾಮ ಸವಾರ ಮೃತಪಟ್ಟಿದ್ದಾರೆ. ಬಾಣಾವರ ಹೋಬಳಿ ಕೆ.ಜಿ.ಅಗ್ರಹಾರ ಗ್ರಾಮದ ನವೀನ್ ಕುಮಾರ್ ಮೃತರು. ನಗರದ ಹೋಟೆಲ್ ಒಂದರಲ್ಲಿ ಕೆಲಸ ಮಾಡಿಕೊಂಡಿದ್ದ ನವೀನ್‌ಕುಮಾರ್ ಭಾನುವಾರ ರಾತ್ರಿ 11.30 ಕೆಲಸ ಮುಗಿಸಿಕೊಂಡು ಮನೆ ಕಡೆ ಹೊರಟಿದ್ದಾಗ ಎದುರಿನಿಂದ ಬಂದ ಲಾರಿ ಡಿಕ್ಕಿ ಹೊಡೆದಿದೆ. ಡಿಕ್ಕಿಯ ರಭಸಕ್ಕೆ ಬೈಕ್‌ಗೆ ಬೆಂಕಿ ಹೊತ್ತಿಕೊಂಡಿದ್ದು, ಸವಾರನಿಗೆ ಗಂಭೀರ ಗಾಯಗಳಾದವು. ಸಾರ್ವಜನಿಕ ಆಸ್ಪತ್ರೆಗೆ ದಾಖಲಿಸಲಾಯಿತಾದರೂ ಸವಾರ ಮೃತಪಟ್ಟಿದ್ದಾರೆ. ಅರಸೀಕೆರೆ ನಗರ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.