

ದೇವನಹಳ್ಳಿ: ಬೆಂಗಳೂರಿನಿಂದ ಚಿಕ್ಕಬಳ್ಳಾಪುರ ಕಡೆಗೆ ತೆರಳುತ್ತಿದ್ದ ಖಾಸಗಿ ಬಸ್ ಡಿಕ್ಕಿಯಾಗಿ ಗಂಭೀರ ಗಾಯಗೊಂಡಿದ್ದ ಬೈಕ್ ಸವಾರ ಆಸ್ಪತ್ರೆಗೆ ಸಾಗಿಸುವ ಮಾರ್ಗಮಧ್ಯೆ ಮೃತಪಟ್ಟಿದ್ದಾನೆ. ಚಿಕ್ಕಬಳ್ಳಾಪುರ ತಾಲೂಕಿನ ಡಿ.ಕುರುಬರಹಳ್ಳಿ ನಿವಾಸಿ, ಇಂಜಿನಿಯರ್ ಸಂತೋಷ್ ಕುಮಾರ್( 24) ಮೃತ. ದೇವನಹಳ್ಳಿ ಸಂಚಾರ ಠಾಣೆ ವ್ಯಾಪ್ತಿಯ ಕನ್ನಮಂಗಲ ಗೇಟ್ ಬಳಿ ಸೋಮವಾರ ಮಧ್ಯಾಹ್ನ ಅವಘಡ ಸಂಭವಿಸಿದೆ. ಅಪಘಾತದ ಬಳಿಕ ಚಾಲಕ ಬಸ್ ಬಿಟ್ಟು ಪರಾರಿಯಾಗಿದ್ದಾನೆ. ಶವವನ್ನು ಮರಣೋತ್ತರ ಪರೀಕ್ಷೆಗಾಗಿ ಆಕಾಶ ಆಸ್ಪತ್ರೆಯ ಶವಾಗಾರದಲ್ಲಿರಿಸಲಾಗಿದೆ. ಬಸ್ ಮತ್ತು ಬೈಕ್ ವಶಕ್ಕೆ ಪಡೆದು ತನಿಖೆ ನಡೆಸಲಾಗುತ್ತಿದೆ ಎಂದು ಸಂಚಾರ ವಿಭಾಗದ ಪಿಎಸ್‌ಐ ಸಾವಿತ್ರಿ ತಿಳಿಸಿದ್ದಾರೆ.
ಪೊಲೀಸ್ ವಾಹನಕ್ಕೆ ಡಿಕ್ಕಿಯಾಗಿ ಸಾವು
ನೆಲಮಂಗಲ: ಬೆಂಗಳೂರು ಉತ್ತರ ತಾಲೂಕಿನ ಮಾದಾವರದಲ್ಲಿ ಭಾನುವಾರ ರಾತ್ರಿ ನಿಂತಿದ್ದ ಪೊಲೀಸ್ ವಾಹನಕ್ಕೆ ದ್ವಿಚಕ್ರವಾಹನ ಡಿಕ್ಕಿ ಹೊಡೆದು ಸವಾರ ಸ್ಥಳದಲ್ಲೇ ಮೃತಪಟ್ಟಿದ್ದಾನೆ. ಮೂಲತಃ ಮಧುಗಿರಿ ನಿವಾಸಿ ವಿನಯ್(42) ಮೃತ. ಈತ 15 ವರ್ಷದಿಂದ ಬೆಂಗಳೂರು ಉತ್ತರ ತಾಲೂಕಿನ ಮಾದಾವರದಲ್ಲಿ ಬಾಡಿಗೆ ಮನೆಯಲ್ಲಿ ವಾಸವಾಗಿದ್ದ. ಸೆಕ್ಯುರಿಟಿ ಕೆಲಸ ಮಾಡುತ್ತಿದ್ದ ವಿನಯ್, ಭಾನುವಾರ ರಾತ್ರಿ 9.30ರಲ್ಲಿ ದ್ವಿಚಕ್ರ ವಾಹನದಲ್ಲಿ ಮನೆಗೆ ತೆರಳುತ್ತಿದ್ದಾಗ ಖಾಸಗಿ ಬಡಾವಣೆಯಲ್ಲಿ ನಿಲ್ಲಿಸಿದ್ದ ಪೊಲೀಸ್ ವಾಹನಕ್ಕೆ ಡಿಕ್ಕಿ ಹೊಡೆದು ಮೃತಪಟ್ಟಿದ್ದಾನೆ. ಮಾದನಾಯಕನಹಳ್ಳಿ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ವಿದ್ಯುತ್ ವಿತರಕಕ್ಕೆ ಕೈ ಇಟ್ಟವ ಮರಣನೆಲಮಂಗಲ: ನಗರದ ಭಿನ್ನಮಂಗಲ ಬಳಿ ಕುಡಿದ ಮತ್ತಿನಲ್ಲಿ ವಿದ್ಯುತ್ ಕಂಬ ಏರಿ ಟ್ರಾನ್ಸ್ ಫಾರ್ಮರ್ಗೆ ಕೈ ಇಟ್ಟ ವ್ಯಕ್ತಿ ಸ್ಥಳದಲ್ಲೇ ಮೃತಪಟ್ಟಿದ್ದಾನೆ. ಚಿಕ್ಕಬಳ್ಳಾಪುರದ ವೆಂಕಟೇಶ್ (32)ಮೃತ. ಮೂರು ದಿನಗಳ ಹಿಂದೆ ಮನೆ ಬಿಟ್ಟು ಉಡುಪಿಗೆ ತೆರಳಿದ್ದ ಈತ, ನಗರದ ಬಸ್ ನಿಲ್ದಾಣಕ್ಕೆ ಬಂದಿಳಿದು ಮದ್ಯ ಸೇವನೆ ಮಾಡಿ, ಬಳಿಕ ರಸ್ತೆಯಲ್ಲಿ ಸಾಗುತ್ತಿರುವಾಗ ಇದ್ದಕ್ಕಿದ್ದಂತೆ ವಿದ್ಯುತ್ ವಿತರಕದ ಕಂಬ ಏರಿ ಕೈ ಹಾಕಿದ್ದು, ವಿದ್ಯುತ್ ಶಾಕ್ ತಗುಲಿ ಮೃತಪಟ್ಟಿದ್ದಾನೆ. ಬಳಿಕ ನೆಲಮಂಗಲ ಸಾರ್ವಜನಿಕ ಆಸ್ಪತ್ರೆಯಲ್ಲಿ ಮರಣೋತ್ತರ ಪರೀಕ್ಷೆ ನಡೆಸಿ ಕುಟಂಬಸ್ಥರಿಗೆ ಶವ ಹಸ್ತಾಂತರಿಸಲಾಗಿದೆ. ಘಟನೆ ದೃಶ್ಯ ಅಂಗಡಿಯೊಂದರ ಸಿಸಿ ಕ್ಯಾಮರಾದಲ್ಲಿ ಸೆರೆಯಾಗಿದೆ. ನಗರ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.