ಸಾಲಬಾಧೆಗೆ ಕುಟುಂಬದ ದುರಂತ ಅಂತ್ಯ: ಪಾಲಕರ ಶವ ಪತ್ತೆ, ಮಗಳು ನೀರಿನಲ್ಲಿ ನಾಪತ್ತೆ

Three people die due to debt Mandya
Published on

ಮಂಡ್ಯ: ರಾಜ್ಯದಲ್ಲಿ ಮೈಕ್ರೋ ಫೈನಾನ್ಸ್ ಹಾವಳಿ ತಡೆಯುವ ನಿಟ್ಟಿನಲ್ಲಿ ಸುಗ್ರೀವಾಜ್ಞೆ ಜಾರಿಗೊಳಿಸಿದರೂ ಜನರ ಸಾವಿನ ಸರಣಿ ನಿಂತಿಲ್ಲ. ಸಾಲಬಾಧೆ ತಾಳಲಾರದೇ ಸೋಮವಾರ ತಂದೆ, ತಾಯಿ ಮತ್ತು ಮಗಳು ವಿಷ ಸೇವಿಸಿ ನಾಲೆಗೆ ಹಾರಿದ್ದಾರೆ. ಪರಿಣಾಮ ಪಾಲಕರ ಶವಪತ್ತೆಯಾಗಿದ್ದು, ಮಗಳಿಗಾಗಿ ಶೋಧ ಕಾರ್ಯ ನಡೆದಿದೆ.

ಶ್ರೀರಂಗಪಟ್ಟಣದ ಗಂಜಾಂ ನಿವಾಸಿಗಳಾದ ಆಟೋ ಚಾಲಕ ಮಾಸ್ತಪ್ಪ(52), ಈತನ ಪತ್ನಿ ರತ್ನಮ್ಮ(40) ಮೃತ ದುದೈರ್ವಿಗಳು. ದಂಪತಿಯ ಮಗಳು ಲಕ್ಷ್ಮೀ(16) ನೀರಿನಲ್ಲಿ ನಾಪತ್ತೆಯಾಗಿದ್ದಾರೆ. ಮಾಸ್ತಯ್ಯ ಅವರು ಕುಟುಂಬ ನಿರ್ವಹಣೆ ಹಾಗೂ ಇತರ ಖರ್ಚಿಗಾಗಿ 12 ಲಕ್ಷ ರೂ ಸಾಲ ಪಡೆದುಕೊಂಡಿದ್ದರು. ಈ ಹಿನ್ನೆಲೆಯಲ್ಲಿ ಸಾಲ ಮರುಪಾವತಿಗಾಗಿ ಸಾಲ ಕೊಟ್ಟವರಿಂದ ಒತ್ತಡ ಹೆಚ್ಚಾದ ಹಿನ್ನಲೆಯಲ್ಲಿ ಇವರು ಆತ್ಮಹತ್ಯೆಗೆ ಶರಣಾಗಿದ್ದಾರೆ ಎನ್ನಲಾಗಿದೆ.

ಸೋಮವಾರ ಮಧ್ಯಾಹ್ನ ತಮ್ಮದೇ ಆಟೋದಲ್ಲಿ ಶ್ರೀರಂಗಪಟ್ಟಣದ ಗಂಜಾನಿಂದ ಮಂಡ್ಯ ತಾಲೂಕು ಚಂದಗಾಲು ಬಳಿಯ ವಿಶ್ವೇಶ್ವರಯ್ಯ ನಾಲೆಯ ಏರಿ ಮೇಲೆ ಆಟೋ ನಿಲ್ಲಿಸಿ, ಮೂವರು ವಿಷ ಸೇವಿಸಿ ನಂತರ ನಾಲೆಗೆ ಬಿದ್ದಿದ್ದಾರೆ. ಇದನ್ನು ಗಮನಿಸಿದ ಅಕ್ಕಪಕ್ಕದ ಜಮೀನಿನಲ್ಲಿ ಕೆಲಸ ಮಾಡುತ್ತಿದ್ದವರು ಸಹ ನಾಲೆಗೆ ಜಿಗಿದು ಮೂವರನ್ನು ರಕ್ಷಿಸುವ ಪ್ರಯತ್ನ ಮಾಡಿದ್ದಾರೆ. ಆದರೆ, ತುಂಬಿ ಹರಿಯುತ್ತಿದ್ದ ನಾಲೆಯ ನೀರಿನಲ್ಲಿ ಮುಳುಗಿ ಕೊಚ್ಚಿಕೊಂಡು ಹೋಗಿದ್ದಾರೆ.

ಆದಾಗ್ಯೂ ಕೂಡ ಈಜುಗಾರರು ನಾಲೆಯಲ್ಲೇ ಈಜುತ್ತಾ ಹುಡುಕಾಟ ನಡೆಸಿದ್ದಾರೆ. ಕಡೆಗೆ ಘಟನೆ ಸ್ಥಳದಿಂದ ಸುಮಾರು 5 ಕಿ.ಮೀ. ದೂರದಲ್ಲಿನ ಸುಂಡಹಳ್ಳಿಯ ಮಹದೇಶ್ವರ ದೇವಾಲಯಕ್ಕೆ ಹೋಗುವ ಮಾರ್ಗದ ರಸ್ತೆ ಸಮೀಪ ನಾಲೆಯಲ್ಲಿ ಪಾಲಕರ ಶವ ಪತ್ತೆಯಾಗಿವೆ. ಲಕ್ಷ್ಮೀಗಾಗಿ ಅಗ್ನಿಶಾಮಕ ದಳದ ಸಿಬ್ಬಂದಿ ಹುಡುಕಾಟದ ಕಾರ್ಯಾಚರಣೆ ನಡೆಸುತ್ತಿದ್ದಾರೆ. ಸ್ಥಳಕ್ಕೆ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಮಲ್ಲಿಕಾರ್ಜುನ ಬಾಲದಂಡಿ, ಡಿವೈಎಸ್‌ಪಿ ಎಲ್.ಕೆ.ರಮೇಶ್, ಮಂಡ್ಯ ಗ್ರಾಮಾಂತರ ಠಾಣೆಯ ಇನ್ಸ್‌ಪೆಕ್ಟರ್ ಶಿವಪ್ರಸಾದ್‌ರಾವ್, ಪಿಎಸ್‌ಐ ರಸೂಲ್‌ಸಾಬ ಎಂ.ಗೌಂಡಿ ಭೇಟಿ ನೀಡಿ ಪರಿಶೀಲನೆ ನಡೆಸಿದರು. ಘಟನೆ ಸಂಬಂಧ ಮಂಡ್ಯ ಗ್ರಾಮಾಂತರ ಪೊಲೀಸರು ಪ್ರಕರಣ ದಾಖಲಿಸಿಕೊಂಡಿದ್ದಾರೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net