ಕಳವು ಮಾಡುತ್ತಿದ್ದ ಮೂವರ ಬಂಧನ

h5-hubli rural
Published on

ಹುಬ್ಬಳ್ಳಿ: ಹುಬ್ಬಳ್ಳಿ ಗ್ರಾಮೀಣ ಠಾಣಾ ವ್ಯಾಪ್ತಿಯ ಎರಡು ಮನೆಗಳ ಕಳವು ಪ್ರಕರಣಕ್ಕೆ ಸಂಬಂಧಿಸಿದಂತೆ ಮೂವರನ್ನು ಬಂಧಿಸಿದ ಪೊಲೀಸರು, ಅವರಿಂದ 9 ಲಕ್ಷ ರೂ. ಮೌಲ್ಯ ಆಭರಣ ಹಾಗೂ ಕೃತ್ಯಕ್ಕೆ ಬಳಸಿದ ಎರಡು ದ್ವಿಚಕ್ರ ವಾಹನ ವಶಕ್ಕೆ ಪಡೆದಿದ್ದಾರೆ.

ಕುಂದಗೋಳ ತಾಲೂಕಿನ ಗುಡಗೇರಿ ಶ್ರೀಧರ ಬಿಂಜಡಗಿ(27), ಹೇಮಂತ ಧರೆಣ್ಣವರ(34) ಹಾಗೂ ಗೆಬಿ ಫರ್ನಾಂಡೀಸ್ ಪಾವಲು( 31) ಬಂಧಿತರು.

ತಾಲೂಕಿನ ತಾರಿಹಾಳ ಗ್ರಾಮದ ಸೈದುಸಾಬ್ ನದಾಫ್ ಎಂಬುವವರ ಮನೆಯ ಬೀಗ ಮುರಿದ ಕಳ್ಳರು ಮನೆಯಲಿದ್ದ ಬಂಗಾರ, ಬೆಳ್ಳಿ ಆಭರಣ ಹಾಗೂ ನಗದು ದೋಚಿ ಪರಾರಿಯಾಗಿದ್ದರು. ಅದೇ ರೀತಿ ಅಂಚಟಗೇರಿ ಗ್ರಾಮದ ಮಂಜುನಾಥ ಜಗಲಾರ ಎಂಬುವವರು ಮನೆಯಲ್ಲಿಟ್ಟಿದ್ದ 1.42 ಲಕ್ಷ ರೂ. ಮೌಲ್ಯ ವಸ್ತುಗಳನ್ನು ಕಳವು ಮಾಡಿದ್ದರು. ಈ ಎರಡು ಪ್ರತ್ಯೇಕ ಪ್ರಕರಣಗಳು ಗ್ರಾಮೀಣ ಪೊಲೀಸ್ ಠಾಣೆಯಲ್ಲಿ ದಾಖಲಾಗಿದ್ದವು. ಪ್ರಕರಣ ತನಿಖೆ ಕೈಗೊಂಡ ಪೊಲೀಸ್ ಇನ್‌ಸ್ಪೆಕ್ಟರ್ ಮುರಗೇಶ ಚನ್ನಣ್ಣನವರ ನೇತೃತ್ವದ ತಂಡ ಆರೋಪಿಗಳನ್ನು ಬಂಧಿಸುವಲ್ಲಿ ಯಶಸ್ವಿಯಾಗಿದೆ.

ಪಿಎಸ್‌ಐ ಸಚಿನ್ ಆಲಮೇಲಕರ, ಎಎಸ್‌ಐ ಎನ್.ಎಂ. ಹೊನ್ನಪ್ಪನವರ, ಸಿಬ್ಬಂದಿ ಎ.ಎ. ಕಾಕರ, ಎಚ್.ಬಿ. ಐಹೋಳೆ, ಎಚ್.ಎಲ್. ಮಲ್ಲಿಗವಾಡ, ಸಂತೋಷ ಚವ್ಹಾಣ, ಚನ್ನಪ್ಪ ಬಳ್ಕೊಳ್ಳಿ, ಮಹಾಂತೇಶ ಮದ್ದಿನ, ಗಿರೀಶ ತಿಪ್ಪಣ್ಣವರ, ವಿಶ್ವನಾಥ ಬಡಿಗೇರ ಕಾರ್ಯಾಚರಣೆಯಲ್ಲಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net