

ದಾವಣಗೆರೆ : ದಿನವೂ ಕರೊನಾ ಸೋಂಕಿತರ ಸಂಖ್ಯೆ ಹೆಚ್ಚಾಗುತ್ತಿರುವ ಬಗ್ಗೆಯೇ ಕೇಳಿ ಆತಂಕಗೊಂಡಿದ್ದ ಜಿಲ್ಲೆಯ ಜನರಿಗೆ ಬುಧವಾರ ಗುಡ್‌ನ್ಯೂಸ್ ಕಾದಿತ್ತು. ಸೋಂಕಿಗೆ ಒಳಗಾಗಿದ್ದ ಮೂವರು ಗುಣಮುಖರಾಗಿ ಚಿಗಟೇರಿ ಜಿಲ್ಲಾಸ್ಪತ್ರೆಯಿಂದ ಬಿಡುಗಡೆಯಾದರು.
ಹದಿನಾರು ವರ್ಷದ ಬಾಲಕ (ಪಿ-585), 11 ವರ್ಷದ ಬಾಲಕ (ಪಿ-635) ಮತ್ತು 52 ವರ್ಷದ ಮಹಿಳೆ (ಪಿ-616) ಇವರನ್ನು ಕಳೆದ ತಿಂಗಳು 30ರಂದು ಆಸ್ಪತ್ರೆಗೆ ದಾಖಲಿಸಲಾಗಿತ್ತು. 20 ದಿನಗಳ ಕಾಲ ವೈರಸ್ ಜತೆಗೆ ಹೋರಾಡಿದ ಮೂವರು ಸಂಪೂರ್ಣ ಗುಣಮುಖರಾಗಿ ಮನೆಗೆ ಮರಳಿದರು.
ಅವರ ಬಿಡುಗಡೆ ಹಿನ್ನೆಲೆಯಲ್ಲಿ ಆಸ್ಪತ್ರೆ ಆವರಣದಲ್ಲಿ ಕಾರ್ಯಕ್ರಮವೊಂದನ್ನು ಆಯೋಜಿಸಲಾಗಿತ್ತು. ಒಬ್ಬೊಬ್ಬರಾಗಿ ಆಸ್ಪತ್ರೆಯಿಂದ ಹೊರ ಬಂದ ಮೂವರ ಮೇಲೆ ಪುಷ್ಪವೃಷ್ಟಿ ಮಾಡಲಾಯಿತು. ಅವರ ಮುಂದಿನ ಜೀವನ ಆರೋಗ್ಯಕರವಾಗಿರಲಿ ಎಂದು ಹಾರೈಸಲಾಯಿತು. ಜಿಲ್ಲಾಧಿಕಾರಿ ಮಹಾಂತೇಶ ಬೀಳಗಿ, ಎಸ್ಪಿ ಹನುಮಂತರಾಯ ಇನ್ನಿತರ ಅಧಿಕಾರಿಗಳು ಇದ್ದರು.