ಈಜಲು ಹೋದವರಲ್ಲಿ ಮೂವರು ಒಂದೇ ಕುಟುಂಬದ ಮಕ್ಕಳು

Hirekere
Published on

ಚಿಕ್ಕಮಗಳೂರು: ಆಲ್ದೂರು ಸಮೀಪದ ವಸ್ತಾರೆಯ ಹಿರೇಕೆರೆಯಲ್ಲಿ ಬುಧವಾರ ಸಾವಿಗೀಡಾದ ಮೂವರು ಒಂದೇ ಕುಟುಂಬದವರು.

ಸಾವಿಗೀಡಾದವರನ್ನು ಆಲದಗುಡ್ಡೆ ಸಮೀಪದ ಹಂಚೂರು ಗ್ರಾಮದ ಒಂದೇ ಕುಟುಂಬದ ಅವಳಿ ಮಕ್ಕಳಾದ ದಿಲೀಪ್ (19) ಹಾಗೂ ದೀಪಕ್(19) ಮತ್ತು ಅವರ ಸಹೋದರ ಸುದೀಪ್(17), ವಸ್ತಾರೆ ಗ್ರಾಮದ ಮಹೇಶ್ ಅವರ ಪುತ್ರ ಸಂದೀಪ್ (17) ಮತ್ತವರ ಸಂಬಂಧಿ ರಾಘವೇಂದ್ರ (25) ಎಂದು ಗುರುತಿಸಲಾಗಿದೆ.

ಸಂಭ್ರಮದಲ್ಲಿದ್ದ ಮನೆ ಶೋಕದಲ್ಲಿ

ಮಹೇಶ್ ಅವರ ಮನೆಯಲ್ಲಿ ಕಳೆದ ವಾರವಷ್ಟೇ ಮಗಳ ಮದುವೆ ಸಮಾರಂಭ ನಡೆದಿದ್ದು ಬುಧವಾರ ಬೀಗರ ಔತಣ ಮುಗಿದ ಬಳಿಕ ಮಹೇಶ್ ಕುಟುಂಬದವರು ಮಗಳನ್ನು ಗಂಡನ ಮನೆಗೆ ಕಳುಹಿಸಿದ್ದರು. ಸಂತಸದಲ್ಲಿದ್ದ ಮಹೇಶ್ ಅವರ ಕುಟುಂಬ ಘಟನೆಯಿಂದ ಆಘಾತಗೊಂಡಿದ್ದು ಮದುವೆ ಸಂಭ್ರಮದ ಮನೆಯಲ್ಲಿ ಶೋಕ ಮಡುಗಟ್ಟಿದೆ.

ಜಿಲ್ಲಾ ಅಗ್ನಿಶಾಮಕ ದಳದ ಸಿಬ್ಬಂದಿ ಕೆರೆಯಿಂದ ಶವಗಳನ್ನು ಹೊರ ತೆಗೆದಿದ್ದು ಮರಣೋತ್ತರ ಪರೀಕ್ಷೆಗಾಗಿ ನಗರದ ಜಿಲ್ಲಾ ಆಸ್ಪತ್ರೆಗೆ ತರಲಾಗಿದೆ. ಘಟನೆ ನಡೆದ ಸ್ಥಳಕ್ಕೆ ಆಲ್ದೂರು ಪಿಎಸ್‍ಐ ಶಂಭುಲಿಂಗಯ್ಯ ಹಾಗೂ ಸಿಬ್ಬಂದಿ ಭೇಟಿ ನೀಡಿದ್ದರು.

ದೇವರ ಕೆರೆ

ದೇವರ ಕೆರೆ ಎಂದೇ ಕರೆಯಲಾಗುವ ಈ ಕೆರೆಗೆ ನೂರಾರು ವರ್ಷಗಳ ಇತಿಹಾಸವಿದೆ. ಸುಮಾರು 35 ಎಕರೆ ವಿಸ್ತೀರ್ಣ ಹೊಂದಿದ್ದು 15 ರಿಂದ 30 ಅಡಿ ಅಳವಿದೆ. ಇದುವರೆಗೆ ಈ ಕೆರೆಯಲ್ಲಿ ಯಾವುದೇ ಅಹಿತಕರ ಘಟನೆ ನಡೆದಿರಲಿಲ್ಲ. ದೇವರಕೆರೆ ಎಂಬ ನಂಬಿಕೆಯಿಂದ ಸ್ಥಳೀಯರು ಯಾರೂ ಸಹ ಈಜಲು ಹೋಗುವುದಿಲ್ಲ. ಆದರೆ ಈ ಯುವಕರು ಈಜಲು ಹೋಗಿ ಸಾವನ್ನಪ್ಪಿರುವುದು ದುರದೃಷ್ಟಕರ ಎಂದು ಹೇಳುತ್ತಾರೆ ವಸ್ತಾರೆ ಗ್ರಾಮಸ್ಥರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net