

ಚಿಕ್ಕಬಳ್ಳಾಪುರ: ಕಾರ್ಮಿಕರ ಅಭಿವೃದ್ಧಿಗಾಗಿ ಕ್ರಾಂತಿಕಾರಕ ಯೋಜನೆಗಳನ್ನು ಜಾರಿಗೆ ತರುವ ಮೂಲಕ ಭದ್ರತೆಯ ಜತೆಗೆ ಹೆಚ್ಚಿನ ಸವಲತ್ತುಗಳನ್ನು ಒದಗಿಸಲಾಗುತ್ತಿದೆ ಎಂದು ಕಾರ್ಮಿಕ ಸಚಿವ ಸಂತೋಷ್ ಎಸ್.ಲಾಡ್ ತಿಳಿಸಿದ್ದಾರೆ.
ಚಿಕ್ಕಬಳ್ಳಾಪುರ ನಗರದಲ್ಲಿನ ಕನ್ನಡ ಭವನದಲ್ಲಿ ಜಿಲ್ಲಾಡಳಿತ, ಜಿ.ಪಂ, ರಾಜ್ಯ ಅಸಂಘಟಿತ ಕಾರ್ಮಿಕರ ಸಾಮಾಜಿಕ ಭದ್ರತಾ ಮಂಡಳಿ, ಸಾರಿಗೆ ಇಲಾಖೆ, ಕಾರ್ಮಿಕ ಇಲಾಖೆಯು ಕೈಗೊಂಡಿದ್ದ ವಿವಿಧ ವರ್ಗಗಳ ಅಸಂಘಟಿತ ಕಾರ್ಮಿಕರಿಗೆ ಸ್ಮಾರ್ಟ್ ಕಾರ್ಡ್ ವಿತರಣೆ ಮತ್ತು ಅರಿವು ಕಾರ್ಯಕ್ರಮಕ್ಕೆ ಚಾಲನೆ ನೀಡಿ ಅವರು ಮಾತನಾಡಿದರು.
ಕಾರ್ಮಿಕ ಇಲಾಖೆಯು ಕಳೆದ ಎರಡು ವರ್ಷಗಳಲ್ಲಿ ಇಡೀ ದೇಶದಲ್ಲಿಯೇ ಮೊದಲೆನಿಸುವ ಕಾರ್ಮಿಕರ ಪರ ಮೂರು ಯೋಜನೆಗಳನ್ನು ಜಾರಿಗೊಳಿಸಿದೆ. ದ್ವಿಚಕ್ರ ವಾಹನ ಸೇರಿದಂತೆ ವಿವಿಧ ಸಾರಿಗೆ ವ್ಯವಸ್ಥೆಯ ಮೂಲಕ ಆಹಾರ ಪೂರೈಕೆ ಮತ್ತಿತರ ಸೇವೆಗಳನ್ನು ಒದಗಿಸುತ್ತಿರುವ ಸ್ವಿಗ್ಗಿ, ಜೊಮ್ಯಾಟ್ ಇನ್ನಿತರ ಕಂಪನಿಗಳ ಕಾರ್ಮಿಕರ ಅನುಕೂಲಕ್ಕಾಗಿ ಗಿಗ್ ವಿಶಿಷ್ಟ ಯೋಜನೆ, ಪರಿಶಿಷ್ಟ ಜಾತಿ ಮತ್ತು ಪಂಗಡದ ನಿರುದ್ಯೋಗಿ ಯುವಜನರಿಗೆ ಖಾಸಗಿ ವಲಯದಲ್ಲಿ ಉದ್ಯೋಗಾವಕಾಶಗಳನ್ನು ಕಲ್ಪಿಸಲು ಖಾಸಗಿ ಉದ್ಯೋಗದಾತರು ಇಲ್ಲವೇ ಮಾಲೀಕರನ್ನು ಉತ್ತೇಜಿಸುವ ಆಶಾದೀಪ ಯೋಜನೆ ಹಾಗೂ ಅಂಬೇಡ್ಕರ್ ಸಹಾಯ ಹಸ್ತ ಯೋಜನೆಯಡಿ ಕಾರ್ಮಿಕರಿಗೆ ಸಾಕಷ್ಟು ಸವಲತ್ತುಗಳು ಸಿಕ್ಕಿವೆ ಎಂದು ತಿಳಿಸಿದ್ದಾರೆ.
ಮುಂಬರುವ ದಿನಗಳಲ್ಲಿ ಗೃಹ ಕೆಲಸ ಕಾರ್ಮಿಕರು ಹಾಗೂ ಸಿನಿಮಾ ಕ್ಷೇತ್ರದಲ್ಲಿನ ಕಾರ್ಮಿಕರಿಗಾಗಿ ವಿಶೇಷ ಯೋಜನೆ ರೂಪಿಸಲಾಗಿದೆ. ಸಿನಿಮಾ ಟಿಕೆಟ್ ಮೇಲೆ ಶೇ.1 ಇಲ್ಲವೇ 2 ರಷ್ಟು ಮನರಂಜನಾ ತೆರಿಗೆ ಸಂಗ್ರಹಿಸಿ, ನೆರವು ಒದಗಿಸಲಾಗುತ್ತಿದೆ. ವಿವಿಧ ಸರ್ಕಾರಿ ಕಚೇರಿಗಳಲ್ಲಿನ ಹೊರಗುತ್ತಿಗೆಯಾಧಾರಿತ ಕಾರ್ಮಿಕರಿಗೆ ವೇತನ ನೀಡಲು ಜಿಲ್ಲಾಧಿಕಾರಿಗಳ ಅಧ್ಯಕ್ಷತೆಯಲ್ಲಿ ಸೊಸೈಟಿಯೊಂದನ್ನು ಸ್ಥಾಪಿಸಲಾಗುತ್ತಿದೆ. ಇದರ ಮೂಲಕ ನೇರವಾಗಿ ಸಂಬಂಧಪಟ್ಟ ನೌಕರರ ಖಾತೆಗೆ ವೇತನ ಜಮೆಗೊಳಿಸಲಿದ್ದು ಮಧ್ಯವರ್ತಿ ಏಜೆನ್ಸಿಗಳು ದುರುಪಯೋಗ ತಡೆಯಲಾಗುವುದು ಎಂದು ಭರವಸೆ ನೀಡಿದ್ದಾರೆ.
ಕಾರ್ಯಕ್ರಮದಲ್ಲಿ ಶಾಸಕ ಪ್ರದೀಪ್ ಈಶ್ವರ್ ಅಯ್ಯರ್, ಲಿಡ್ಕರ್ ಅಭಿವೃದ್ಧಿ ನಿಗಮದ ಅಧ್ಯಕ್ಷ ನಾಗರಾಜ್, ಕಾರ್ಮಿಕ ಇಲಾಖೆ ಆಯುಕ್ತ ಹೆಚ್.ಎನ್.ಗೋಪಾಲಕೃಷ್ಣ, ಜಿಲ್ಲಾ ಗ್ಯಾರಂಟಿ ಯೋಜನೆಗಳ ಅನುಷ್ಠಾನ ಪ್ರಾಧಿಕಾರದ ಅಧ್ಯಕ್ಷ ಯಲುವಳ್ಳಿ ರಮೇಶ್, ನಗರಾಭಿವೃದ್ಧಿ ಪ್ರಾಧಿಕಾರದ ಅಧ್ಯಕ್ಷ ಕೆ.ಎನ್.ಕೇಶವರೆಡ್ಡಿ ಮತ್ತಿತರರು ಇದ್ದರು.
*ಫಲಾನುಭವಿಗಳಿಗೆ ವಿತರಣೆ
ಆಶಾದೀಪ ಯೋಜನೆಯಡಿ ಪರಿಶಿಷ್ಟ ಜಾತಿ, ಪರಿಶಿಷ್ಟ ಪಂಗಡದ ಉದ್ಯೋಗಿಗಳ ಅಪ್ರೆಂಟೆಸ್ ತರಬೇತಿ ಪಡೆದವರಿಗೆ ಶಿಷ್ಯವೇತನ, ಅಪಘಾತದಿಂದ ಮೃತಪಟ್ಟ ಖಾಸಗಿ ವಾಣಿಜ್ಯ ಚಾಲಕರ ಆವಲಂಬಿತರಿಗೆ ತಲಾ ೫ ಲಕ್ಷ ರೂ ಚೆಕ್, ಅಪಘಾತದಿಂದ ಮೃತಪಟ್ಟ ಚಾಲಕರ ಇಬಬ್ರು ಮಕ್ಕಳಿಗೆ ತಲಾ ೧೦ ಸಾವಿರ ರೂ ಶೈಕ್ಷಣಿಕ ಧನ ಸಹಾಯದ ಚೆಕ್ ಹಾಗೂ ಅಸಂಘಟಿತ ವಲಯದ ಕಾರ್ಮಿಕರಿಗೆ ಸ್ಮಾರ್ಟ್ ಕಾರ್ಡ್ ಅನ್ನು ವಿತರಿಸಲಾಯಿತು.