ಮನೆ ಕಳವು ಮೂವರು ನೇಪಾಳದ ಕಳ್ಳರ ಬಂಧನ

ತಿಲಕ್ ಕುಮಾರ್ ಖಡ್ಕ
ತಿಲಕ್ ಕುಮಾರ್ ಖಡ್ಕ
Published on
ಮಂಗಳೂರು: ನಗರದ ಉರ್ವ ಮಾರ್ಕೆಟ್ ಮಠದಕಣಿ ಮನೆಯಲ್ಲಿ ನಡೆದ ಕಳವು ಪ್ರಕರಣಕ್ಕೆ ಸಂಬಂಧಿಸಿ ನೇಪಾಳದ ಮೂವರು ಆರೋಪಿಗಳನ್ನು ಬರ್ಕೆ ಠಾಣೆ ಪೊಲೀಸರು ಶುಕ್ರವಾರ ಬಂಧಿಸಿದ್ದಾರೆ.
ನೇಪಾಳ ಚೈನ್ಪೂರು ಕೇತ್ ಕೊಟ್ ಗ್ರಾಮ ನಿವಾಸಿ ತಿಲಕ್ ಕುಮಾರ್ ಖಡ್ಕ (36), ನೇಪಾಳ ಸುದರ್ ಪಶ್ಚಿಮ ರನಡ ಗ್ರಾಮ ನಿವಾಸಿ ಅಶೋಕ್ ರಾಜ್ ಯಾನೆ ಅಶೋಕ್ ಸಿಂಗ್ (33), ನೇಪಾಳ ಪಲ್ಟುಡೇ ಬಜಾರ್ ನಿವಾಸಿ ದಿಪೆಂದರ್ ರಸೈಲಿ (25) ಬಂಧಿತರು.
ಪ್ರಕರಣ ವಿವರ: ಉರ್ವ ಮಾರ್ಕೆಟ್ ಬಳಿಯ ಮಠದಕಣಿಯ ಮನೆಯೊಂದರ ನಿವಾಸಿಗಳು ಜು.11ರಂದು ಸಂಜೆ 5.30ಕ್ಕೆ ಮನೆಗೆ ಲಾಕ್ ಮಾಡಿ ಬಂಟ್ವಾಳ ತಾಲೂಕಿನ, ವಿಟ್ಲ ಕಡಂಬು ಎಂಬಲ್ಲಿರುವ ಅವರ ಸಂಬಂಧಿಕರ ಮನೆಗೆ ತೆರಳಿದ್ದರು. ಜು.12ರಂದು ಬೆಳಗ್ಗೆ ಬಂದು ನೋಡಿದಾಗ ಮನೆಯ ಹಿಂಭಾಗದ ಬಾಗಿಲು ಒಡೆದು ಯಾರೋ ಕಳ್ಳರು ಮನೆಯಲ್ಲಿದ್ದ ಸುಮಾರು 64 ಗ್ರಾಮ್ ತೂಕದ ಚಿನ್ನಾಭರಣ ಹಾಗೂ 25,000 ರೂ. ಸೇರಿದಂತೆ ಒಟ್ಟು 8,57,000 ರೂ. ಮೌಲ್ಯದ ವಸ್ತುಗಳನ್ನು ಕಳವು ಮಾಡಿದ್ದರು. ಈ ಬಗ್ಗೆ ಬರ್ಕೆ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿತ್ತು.
ಬೋಳೂರಲ್ಲಿ ಬಂಧನ: ಕಳವು ನಡೆದ ಮನೆ ಹಾಗೂ ಸುತ್ತಮುತ್ತಲ ಪ್ರದೇಶದ ಸಿಸಿ ಕ್ಯಾಮೆರಾ ಸೇರಿದಂತೆ ತಾಂತ್ರಿಕ ದಾಖಲೆಗಳನ್ನು ಪರಿಶೀಲಿಸಿದ ಪೊಲೀಸರು ಆರೋಪಿಗಳ ಬಂಧನಕ್ಕೆ ಬಲೆ ಬೀಸಿದ್ದರು. ಬರ್ಕೆ ಪೊಲೀಸ್ ಠಾಣಾ ಅಧಿಕಾರಿ ಮತ್ತು ಸಿಬ್ಬಂದಿ ಜು.17ರಂದು ಬೆಳಗ್ಗಿನ ಜಾವ ನೇಪಾಳ ಮೂಲದ 3 ಜನ ಕುಖ್ಯಾತ ಮನೆಗಳ್ಳರನ್ನು ಬೋಳೂರಿನಲ್ಲಿ ಬಂಧಿಸಿದ್ದಾರೆ. ಆರೋಪಿಗಳನ್ನು ವಿಚಾರಣೆಗೆ ಒಳಪಡಿಸಿದಾಗ ಮಠದಕಣಿಯ ಮನೆಯಿಂದ ಕಳ್ಳತನ ಮಾಡಿದ ಎಲ್ಲ ಚಿನ್ನಾಭರಣಗಳು ಮತ್ತು ಮಹಾರಾಷ್ಟ್ರ ರಾಜ್ಯದ ನಾಸಿಕ್ ನಗರದಿಂದ ಕಳವು ಮಾಡಿದ್ದ 790 ಗ್ರಾಂ ಬೆಳ್ಳಿ ಆಭರಣಗಳು ಸೇರಿದಂತೆ ಸುಮಾರು 10 ಲಕ್ಷ ರೂ. ಮೌಲ್ಯದ ಸೊತ್ತುಗಳನ್ನು ವಶಕ್ಕೆ ಪಡೆದಿದ್ದಾರೆ.
ಈ ಕಾರ್ಯಚರಣೆಯಲ್ಲಿ ಬರ್ಕೆ ಪೊಲೀಸ್ ಠಾಣೆಯ ಅಧಿಕಾರಿ ಸಿಬ್ಬಂದಿಗಳನ್ನು ಭಾಗವಹಿಸಿ ಆರೋಪಿಗಳನ್ನು ಪತ್ತೆ ಹಚ್ಚುವಲ್ಲಿ ಯಶಸ್ವಿಯಾಗಿರುತ್ತಾರೆ.
ಆರೋಪಿಗಳು ಈ ಹಿಂದೆ 2026ನೇ ಮಾರ್ಚ್ ತಿಂಗಳಿನಲ್ಲಿ ಉರ್ವಾ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಮನೆ ಕಳ್ಳತನ ಪ್ರಯತ್ನ ಮಾಡಿದ್ದರು. ಆದರೆ ಯಾವುದೇ ವಸ್ತುಗಳು ಕಳವಾಗಿರಲಿಲ್ಲ. ಬಂಧಿತ ಆರೋಪಿಗಳು ಸದ್ರಿ ಪ್ರಕರಣದಲ್ಲಿ ಭಾಗಿಯಾಗಿರುವುದು ವಿಚಾರಣಾ ವೇಳೆಯಲ್ಲಿ ಒಪ್ಪಿಕೊಂಡಿದ್ದಾರೆ.
15ಕ್ಕೂ ಅಧಿಕ ಪ್ರಕರಣ: ಕರ್ನಾಟಕ ರಾಜ್ಯದ ಬೆಂಗಳೂರು, ದಾವಣಗೆರೆ, ಉಡುಪಿ ಸೇರಿದಂತೆ ಹಲವಾರು ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಸುಮಾರು 15 ಕ್ಕೂ ಹೆಚ್ಚು ಮನೆ ಕಳ್ಳತನ ಮಾಡಿದ್ದು, ಇವರ ಮೇಲೆ ಪ್ರಕರಣ ದಾಖಲಾಗಿರುತ್ತದೆ. ಅಲ್ಲದೆ ತಮಿಳುನಾಡು, ದೆಹಲಿ, ಹರ್ಯಾಣ ರಾಜ್ಯಗಳಲ್ಲಿ ಆರೋಪಿತರ ಮೇಲೆ ಪ್ರಕರಣ ದಾಖಲಾಗಿದ್ದು, ಮಾಹಿತಿ ಸಂಗ್ರಹಿಸಲಾಗುತ್ತಿದ್ದು, ಮುಂದಿನ ತನಿಖೆ ನಡೆಸಲಾಗುವುದು ಎಂದು ಪೊಲೀಸ್ ಆಯುಕ್ತ ಸುಧೀರ್ ಕುಮಾರ್ ರೆಡ್ಡಿ ತಿಳಿಸಿದ್ದಾರೆ.
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net