ರಂಗಾಯಣ ನಿರ್ದೇಶಕ ಸ್ಥಾನಕ್ಕೆ ಮೂವರ ಹೆಸರು ಶಿಫಾರಸು

Rangayana (1)
Published on

ಮೈಸೂರು: ಕಳೆದ ಒಂದು ವರ್ಷದಿಂದ ಖಾಲಿ ಇರುವ ಮೈಸೂರು ರಂಗಾಯಣ ನಿರ್ದೇಶನ ಸ್ಥಾನಕ್ಕೆ ಮೂವರ ಹೆಸರನ್ನು ರಂಗ ಸಮಾಜವು ಶಿಫಾರಸು ಮಾಡಿದೆ.


ಕನ್ನಡ ಮತ್ತು ಸಂಸ್ಕೃತಿ ಸಚಿವ ಶಿವರಾಜ ತಂಗಡಗಿ ಅಧ್ಯಕ್ಷತೆಯಲ್ಲಿ ಬೆಂಗಳೂರಿನಲ್ಲಿ ಇತ್ತೀಚಿಗೆ ರಂಗ ಸಮಾಜದ ಸಭೆ ನಡೆದಿತ್ತು. ಸದಸ್ಯರಾದ ಶಶಿಧರ ಬಾರಿಘಾಟ್, ರಾಜಪ್ಪ ದಳವಾಯಿ, ನರೇಶ್ ಡಿಂಗ್ರಿ, ಸುರೇಶ್ ಬಾಬು, ಮಹಾಂತೇಶ್ ಗಜೇಂದ್ರಗಡ ಒಳಗೊಂಡ ರಂಗ ಸಮಾಜದ ಸಭೆಯಲ್ಲಿ ಈ ಕುರಿತು ಚರ್ಚೆ ನಡೆದಿತ್ತು.


ಅಂತಿಮವಾಗಿ ಜಾನಪದ ಗಾಯಕ ಪಿಚ್ಚಳ್ಳಿ ಶ್ರೀನಿವಾಸ, ತಿಪಟೂರಿನ ಭೂಮಿ ಬಳಗದ ತಿಪಟೂರು ಸತೀಶ್ ಹಾಗೂ ರಂಗಾಯಣದ ನಿವೃತ್ತ ಕಲಾವಿದ ಕೃಷ್ಣಪ್ರಸಾದ್ ಅವರ ಹೆಸರನ್ನು ಶಿಫಾರಸು ಮಾಡಲಾಗಿದೆ. ಈ ಪೈಕಿ ಒಬ್ಬರ ಹೆಸರನ್ನು ಮುಖ್ಯಮಂತ್ರಿ ಸಿದ್ದರಾಮಯ್ಯ ಅಂತಿಮಗೊಳಿಸಲಿದ್ದಾರೆ ಎಂದು ಮೂಲಗಳು ತಿಳಿಸಿವೆ.


ಅಲ್ಲದೆ, ಮೈಸೂರು ರಂಗಾಯಣದೊಂದಿಗೆ ಶಿವಮೊಗ್ಗ, ಧಾರವಾಡ, ಕಲಬುರಗಿ, ದಾವಣಗೆರೆ ಹಾಗೂ ಕಾರ್ಕಳದ ರಂಗಾಯಣದ ನಿರ್ದೇಶಕ ಸ್ಥಾನಗಳಿಗೂ ತಲಾ ಮೂವರ ಹೆಸರನ್ನು ಶಿಫಾರಸು ಮಾಡಿದ್ದು, ಶೀಘ್ರದಲ್ಲೇ ನೇಮಕಾತಿ ಆದೇಶ ಹೊರಬೀಳುವ ಸಾಧ್ಯತೆ ಇದೆ ಎಂದು ರಂಗ ಸಮಾಜದ ಸದಸ್ಯರೊಬ್ಬರು ತಿಳಿಸಿದ್ದಾರೆ.


ಮೈಸೂರಿನ ರಂಗಾಯಣ ನಿರ್ದೇಶಕ ಸ್ಥಾನವು 2023ರ ಮೇ 14ರಿಂದ ಖಾಲಿಯಾಗಿದೆ. ವಿಧಾನಸಭೆ ಚುನಾವಣೆಯ ಬಳಿಕ ಕಾಂಗ್ರೆಸ್ ಸರ್ಕಾರ ರಚನೆಯಾಗುವುದಕ್ಕೂ ಮುನ್ನವೇ ಅಡ್ಡಂಡ ಸಿ.ಕಾರ್ಯಪ್ಪ ರಂಗಾಯಣ ನಿರ್ದೇಶಕರ ಸ್ಥಾನಕ್ಕೆ ರಾಜೀನಾಮೆ ನೀಡಿದ್ದರು. ನಂತರ ಯಾರನ್ನೂ ನೇಮಕ ಮಾಡಿರಲಿಲ್ಲ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net