ಮೂವರು ಕೊಲೆ ಆರೋಪಿಗಳ ಕಾಲಿಗೆ ಗುಂಡು

h28-firing
Published on

ಹುಬ್ಬಳ್ಳಿ: ಸ್ಥಳ ಮಹಜರು ವೇಳೆ ಪೊಲೀಸರ ಮೇಲೆ ಹಲ್ಲೆ ಮಾಡಿ ತಪ್ಪಿಸಿಕೊಳ್ಳಲು ಯತ್ನಿಸಿದ ಮೂವರು ಕೊಲೆ ಆರೋಪಿಗಳ ಕಾಲಿಗೆ ಪೊಲೀಸರು ಮಂಗಳವಾರ ಬೆಳಗ್ಗೆ ಇಲ್ಲಿಯ ಎಂಟಿಎಸ್ ಕಾಲನಿಯಲ್ಲಿ ಗುಂಡು ಹಾರಿಸಿದ್ದಾರೆ.

ವಿದ್ಯಾನಗರದ ಗೋಲ್ಡನ್ ಹೈಟ್ಸ್ ಬಾರ್ ಆ್ಯಂಡ್ ರೆಸ್ಟೋರೆಂಟ್‌ನ ಪಾರ್ಕಿಂಗ್ ಜಾಗದಲ್ಲಿ ಸೋಮವಾರ ತಡರಾತ್ರಿ ಆಕಾಶ ವಾಲ್ಮೀಕಿ (22) ಎನ್ನುವ ಯುವಕನನ್ನು ಚಾಕುವಿನಿಂದ ಇರಿದು ಐವರು ಹತ್ಯೆಗೈದು ಪರಾರಿಯಾಗಿದ್ದರು. ಈ ಐವರಲ್ಲಿ ಆನಂದ ನಗರದ ಅಭಿಷೇಕ ಶಿರೂರ, ಯಲ್ಲಪ್ಪ ಕೋಟಿ, ವಿನೋದ ಅಂಬಿಗೇರ ಎನ್ನುವವರನ್ನು ಪೊಲೀಸರು ಬಂಧಿಸಿದ್ದರು. ಬಂಧಿತರನ್ನು ಮಂಗಳವಾರ ಬೆಳಗ್ಗೆ ಸ್ಥಳ ಮಹಜರಿಗೆ ಕರೆದುಕೊಂಡು ಹೋಗಲಾಗಿತ್ತು. ಹಲ್ಲೆ ಮಾಡಿ ತಪ್ಪಿಸಿಕೊಳ್ಳಲು ಯತ್ನಿಸಿದ ಈ ಮೂವರ ಕಾಲಿಗೆ ಪಿಎಸ್‌ಐಗಳಾದ ಸುನೀಲ್ ಎಂ., ಶ್ರೀಮಂತ ಹುಣಸೀಕಟ್ಟಿ ಗುಂಡು ಹಾರಿಸಿದ್ದಾರೆ.

ಆರೋಪಿಗಳ ಹಲ್ಲೆಯಿಂದ ಕಮರಿಪೇಟೆ ಪಿಎಸ್‌ಐ ಸುನೀಲ್ ಎಂ., ವಿದ್ಯಾನಗರ ಠಾಣೆ ಪಿಎಸ್‌ಐ ಶ್ರೀಮಂತ ಹುಣಸೀಕಟ್ಟಿ, ಕಾನ್‌ಸ್ಟೇಬಲ್‌ಗಳಾದ ಮುತ್ತಪ್ಪ ಲಮಾಣಿ, ಶರಣಗೌಡ ಮೂಲಮನಿ ಗಾಯಗೊಂಡಿದ್ದಾರೆ. ಗಾಯಾಳುಗಳನ್ನು ಕೆಎಂಸಿಆರ್‌ಐನಲ್ಲಿ ದಾಖಲಿಸಿ ಚಿಕಿತ್ಸೆ ನೀಡಲಾಗುತ್ತಿದೆ.

‘ಮೃತ ಆಕಾಶ ಕೂಡ ಪ್ರಕರಣವೊಂದರಲ್ಲಿ ಆರೋಪಿ. ಕೊಲೆ ಆರೋಪಿಗಳು ಹಾಗೂ ಆಕಾಶ ತಂಡದ ಮಧ್ಯೆ ಆಗಾಗ ಜಗಳ ನಡೆಯುತ್ತಿತ್ತು. ಕಳೆದ ಶಿವರಾತ್ರಿ ದಿನವೂ ಇವರೊಳಗೆ ಗಲಾಟೆಯಾಗಿತ್ತು. ಇದೇ ದ್ವೇಷದ ಹಿನ್ನೆಲೆಯಲ್ಲಿ ವ್ಯವಸ್ಥಿತಿವಾಗಿ ಸಂಚು ರೂಪಿಸಿ ಆಕಾಶನನ್ನು ಹತ್ಯೆ ಮಾಲಾಗಿದೆ. ಐವರು ಆರೋಪಿಗಳಲ್ಲಿ ಮೂವರನ್ನು ಬಂಧಿಸಿದ್ದು, ಇನ್ನುಳಿದವರ ಬಂಧನಕ್ಕೆ ಜಾಲ ಬೀಸಲಾಗಿದೆ’ ಎಂದು ಪೊಲೀಸ್ ಆಯುಕ್ತ ಎನ್. ಶಶಿಕುಮಾರ ಅವರು ಸುದ್ದಿಗಾರರಿಗೆ ತಿಳಿಸಿದ್ದಾರೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net