

ಹೊಸೂರು : ಕಳೆದ 25 ದಿನಗಳಿಂದ ನಾಪತ್ತೆಯಾಗಿದ್ದ ಯುವಕ ಶವವಾಗಿ ಪತ್ತೆಯಾಗಿದ್ದು, ಪ್ರಕರಣ ಸಂಬಂಧ ಮೂವರು ಆರೋಪಿಗಳನ್ನು ಹೊಸೂರು ಠಾಣೆ ಪೊಲೀಸರು ಬಂಧಿಸಿದ್ದಾರೆ. ಪೇಂಟರ್ ಕೆಲಸ ಮಾಡುತ್ತಿದ್ದ ಕೃಷ್ಣಗಿರಿ ಜಿಲ್ಲೆ ರಾಜಗಣಪತಿ ನಗರದ ಅರ್ಜುನ್(23) ಕೊಲೆಯಾಗಿದ್ದು, ಪ್ರಕರಣದಲ್ಲಿ ರಾಮ್ನಗರದ ಸಕುಲ್ ಅಮೀದ್, ಪವನ್ ಪ್ರಕಾಶ್ ಹಾಗೂ ಸೈಬು ಎಂಬುವರನ್ನು ಬಂಧಿಸಲಾಗಿದೆ.
ಹಣದ ವಿಚಾರಕ್ಕೆ ಅರ್ಜುನ್ ಹಾಗೂ ಆರೋಪಿಗಳ ನಡುವೆ ದ್ವೇಷ ಬೆಳೆದಿತ್ತು. ಈ ಹಿನ್ನೆಲೆಯಲ್ಲಿ ಅರ್ಜುನ್ನನ್ನು ಅಪಹರಿಸಿದ ಆರೋಪಿಗಳು ಚಿನ್ನಾರು ಬದಿಯಲ್ಲಿರುವ ಶೂಲಗಿರಿ ಬಳಿಯ ಅರಣ್ಯ ಪ್ರದೇಶದಲ್ಲಿ ಕೊಲೆ ಮಾಡಿ ಶವವನ್ನು ಹೂತಿದ್ದರು. ಆರೋಪಿಗಳ ಮಾಹಿತಿಯಂತೆ ಸ್ಥಳಕ್ಕೆ ಭೇಟಿ ನೀಡಿದ ಪೊಲೀಸರು ಶವವನ್ನು ಹೊರತೆಗೆದು ಮರಣೋತ್ತರ ಪರೀೆಗೆ ಕಳುಹಿಸಿದ್ದಾರೆ.
ಕೊಲೆ ಸಂಚು: ಸಕುಲ್ ಅಮೀದ್ ಮತ್ತು ಸೂಪಿ ಎಂಬುವರು ಗೆಳೆಯರಾಗಿದ್ದರು. ಸೂಫಿ ಮೃತ ಅರ್ಜುನನ ಸ್ನೇಹಿತನಾಗಿದ್ದ ಹಣದ ವಿಚಾರಕ್ಕೆ ಇಬ್ಬರ ನಡುವೆ ಜಗಳವಾಗಿತ್ತು, ಈ ಬಗ್ಗೆ ಸೂಫಿ ಗೆಳೆಯ ಅರ್ಜುನನಿಗೆ ಮಾಹಿತಿ ನೀಡಿದ್ದ. ಈ ವೇಳೆ ಸಕುಲ್ ಅಮೀದ್ ಹಾಗೂ ಅರ್ಜುನನ ನಡುವೆ ಜಗಳವಾಗಿತ್ತು. ಇದರಿಂದ ಕುಪಿತನಾದ ಸಕುಲ್ ಅಮೀದ್ ಸಹಚರರೊಂದಿಗೆ ಸೇರಿ ಕೊಲೆಗೆ ಸಂಚು ರೂಪಿಸಿದ್ದ ಎಂದು ಪೊಲೀಸ್ ತನಿಖೆಯಲ್ಲಿ ತಿಳಿದುಬಂದಿದೆ.