ಜಿಲ್ಲೆಯಲ್ಲಿ ಮತ್ತೆ ಮೂರು ಪಾಸಿಟಿವ್

12-gdg-5
Published on

ವಿಜಯವಾಣಿ ಸುದ್ದಿಜಾಲ ಗದಗ

ಜಿಲ್ಲೆಯಲ್ಲಿ ಮತ್ತೆ ಮೂವರಿಗೆ ಕರೊನಾ ಸೋಂಕು ದೃಢಪಟ್ಟಿದ್ದು ಜನರಲ್ಲಿ ಆತಂಕ ಶುರುವಾಗಿದೆ.

ಗುಜರಾತ್ ಪ್ರವಾಸ ಕೈಗೊಂಡಿದ್ದ ನರಗುಂದ ಪಟ್ಟಣದ 36 ವರ್ಷದ ವ್ಯಕ್ತಿಯೊಬ್ಬರಿಗೆ (ಪ್ರಕರಣ ಪಿ-905) ಸೋಂಕು ತಗುಲಿರುವುದು ದೃಢವಾಗಿದೆ. ಇದಲ್ಲದೆ, ಗದಗ ನಗರದ ಗಂಜಿ ಬಸವೇಶ್ವರ ಓಣಿಯ ಮತ್ತಿಬ್ಬರಿಗೆ ಸೋಂಕು ಖಚಿತವಾಗಿದೆ. ಈ ಮೂಲಕ ಜಿಲ್ಲೆಯಲ್ಲಿ ಸೋಂಕಿತರ ಸಂಖ್ಯೆ 8ಕ್ಕೆ ಏರಿದೆ. ಈ ಪೈಕಿ ನಾಲ್ವರು ಗುಣಮುಖರಾಗಿ ಆಸ್ಪತ್ರೆಯಿಂದ ಬಿಡುಗಡೆಯಾಗಿ ದ್ದಾರೆ ಎಂದು ಜಿಲ್ಲಾಡಳಿತ ತಿಳಿಸಿದೆ.

ಈಗ ಸೋಂಕು ಖಚಿತವಾಗಿರುವ ಗದಗ ನಗರದ ಗಂಜಿ ಬಸವೇಶ್ವರ ಓಣಿಯ ನಿವಾಸಿಯು 75 ವರ್ಷದ ವೃದ್ಧರಿಗೆ (ಪ್ರಕರಣ ಪಿ- 514) ಈ ಮೊದಲೇ ಸೋಂಕು ತಗಲಿದ್ದು, ಕಳೆದ ಶನಿವಾರ ಅವರು ಗುಣಮುಖರಾಗಿದ್ದಾರೆ. ಆದರೆ, ಈ ವೃದ್ಧರ ದ್ವಿತೀಯ ಸಂಪರ್ಕಕ್ಕೆ ಬಂದ 61 ವರ್ಷದ ವ್ಯಕ್ತಿ (ಪ್ರಕರಣ ಪಿ-912) ಹಾಗೂ 65 ವರ್ಷದ (ಪ್ರಕರಣ ಪಿ-913) ಇಬ್ಬರು ಈಗ ಹೊಸದಾಗಿ ಸೋಂಕು ತಗುಲಿದವರಾಗಿದ್ದಾರೆ.

ಒಂದು ತಿಂಗಳಿಂದ ನಗರದ ರಂಗನವಾಡಿ ಗಲ್ಲಿಯಲ್ಲಿ ನಾಲ್ಕು ಕರೊನಾ ಪಾಸಿಟಿವ್ ಪ್ರಕರಣಗಳು ದೃಢಪಟ್ಟಿದ್ದವು. ಇದರಲ್ಲಿ ಮೂವರು ಗುಣಮುಖರಾಗಿ ಬಿಡುಗಡೆ ಗೊಂಡಿದ್ದಾರೆ. 80 ವರ್ಷದ ವೃದ್ಧೆ ಹೃದಯಾಘಾತದಿಂದ ಮೃತಪಟ್ಟಿದ್ದರು. ಐದನೇ ಕೇಸ್ ಗಂಜಿ ಬಸವೇಶ್ವರ ಓಣಿ ಯಲ್ಲಿ ಪತ್ತೆಯಾಗಿತ್ತು. ಈಗ ಮತ್ತೆರಡು ಪ್ರಕರಣಗಳು ಇಲ್ಲಿಯೇ ಪತ್ತೆಯಾಗಿರು ವುದರಿಂದ ನಗರದಲ್ಲಿ ಭೀತಿ ಆವರಿಸಿದೆ.

ಜಿಲ್ಲಾಸ್ಪತ್ರೆಯಲ್ಲಿ ಚಿಕಿತ್ಸೆ: ಗುಜರಾತಿನ ಪಾಲನಪೂರದಿಂದ ಬಂದ 14 ಹಾಗೂ ಅಹಮದಾಬಾದ್​ನಿಂದ ಆಗಮಿಸಿದ 16 ವ್ಯಕ್ತಿಗಳ ಪ್ರಾಥಮಿಕ ಆರೋಗ್ಯ ತಪಾಸಣೆ ನಡೆಸಿ ಅವರನ್ನು ಕ್ವಾರಂಟೈನ್​ನಲ್ಲಿ ಇರಿಸಲಾಗಿದೆ. ಇದರಲ್ಲಿ ಒಬ್ಬರಿಗೆ ಸೋಂಕು ದೃಢಪಟ್ಟಿದೆ. ಪಿ-514 ಪ್ರಕರಣದ ದ್ವಿತೀಯ ಸಂಪರ್ಕಕ್ಕೆ ಬಂದ ಇಬ್ಬರು ಸೇರಿ ಈಗ ಹೊಸದಾಗಿ ಪ್ರಕರಣ ದೃಢಪಟ್ಟ ಮೂವರನ್ನು ಗದಗ ಜಿಲ್ಲಾ ಕೋವಿಡ್-19 ಆಸ್ಪತ್ರೆಯಲ್ಲಿ ದಾಖಲಿಸಿ ಚಿಕಿತ್ಸೆ ನೀಡಲಾಗುತ್ತಿದೆ.

ಬಂದೋಬಸ್ತ್ ಬಿಗಿ: ಗದಗ ನಗರದ ರಂಗನವಾಡಿ ಗಲ್ಲಿ ಹಾಗೂ ಗಂಜಿ ಬಸವೇಶ್ವರ ಓಣಿಯನ್ನು ಕಂಟೇನ್ಮೆಂಟ್ ವಲಯ ಎಂದು ಜಿಲ್ಲಾಡಳಿತ ಘೊಷಿಸಿ ಬಿಗಿ ಬಂದೋಬಸ್ತ್ ನಿಯೋಜಿಸಿದೆ. ಅಲ್ಲದೆ, ಈ ಪ್ರದೇಶದಲ್ಲಿ ಜನರಿಗೆ ಒಳ ಹೋಗಲು ಮತ್ತು ಹೊರಗೆ ಬರಲು ನಿಷೇಧಿಸಲಾಗಿದೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net