

ಮಡಿಕೇರಿ:
ಕಾಂಗ್ರೆಸ್ ಸರ್ಕಾರದ ಮಹತ್ವಾಕಾಂಕ್ಷಿ ಇಂದಿರಾ ಕ್ಯಾಂಟೀನ್‌ಗೆ ರಾಜ್ಯಾದ್ಯಂತ ಮತ್ತೆ ಮರು ಜೀವ ಕೊಡಲು ಮುಖ್ಯಮಂತ್ರಿ ಸಿದ್ದರಾಮಯ್ಯ ಮುಂದಾಗಿದ್ದು, ಹೊಸದಾಗಿ ೧೮೫ ಇಂದಿರಾ ಕ್ಯಾಂಟೀನ್‌ಗಳ ಆರಂಭಕ್ಕೆ ಸರ್ಕಾರ ಅನುಮೋದನೆ ಕೊಟ್ಟಿದೆ. ಇದರಲ್ಲಿ ಕೊಡಗಿನಲ್ಲಿ ನೂತನವಾಗಿ ಆರಂಭವಾಗಲಿರುವ ೩ ಇಂದಿರಾ ಕ್ಯಾಂಟೀನ್‌ಗಳೂ ಸೇರಿದೆ. ಇವುಗಳಿಗೆ ಸಂಬಂಧಿಸಿದ ಪೂರ್ವಭಾವಿ ಸಿದ್ಧತೆಗಳು ಆರಂಭವಾಗಿದ್ದು, ಮುಂದಿನ ತಿಂಗಳ ೩ ರಂದೇ ಮುಖ್ಯಮಂತ್ರಿ ಸಿದ್ದರಾಮಯ್ಯ ಕೈಯಲ್ಲಿ ಚಾಲನೆ ಕೊಡಿಸುವ ಚಿಂತನೆಯಲ್ಲಿ ಜಿಲ್ಲೆಯ ಕಾಂಗ್ರೆಸ್ ಮುಖಂಡರು ಇದ್ದಾರೆ.
ದುಡಿಯುವ ವರ್ಗ, ಬಡವರು, ನಿರ್ಗತಿಕರು, ವಿದ್ಯಾರ್ಥಿಗಳ ಹಸಿವನ್ನು ನೀಗಿಸುವಲ್ಲಿ ಇಂದಿರಾ ಕ್ಯಾಂಟೀನ್ ಕೊಡುಗೆ ದೊಡ್ಡದಿದೆ. ಯಾರೊಬ್ಬರೂ ಹಸಿವಿನಿಂದ ಮಲಗಬಾರದು ಎನ್ನುವ ಮುಖ್ಯಮಂತ್ರಿ ಸಿದ್ಧರಾಮಯ್ಯ ಅವರ ಕಾಳಜಿಯೇ ಇಂದಿರಾ ಕ್ಯಾಂಟೀನ್ ಆರಂಭಕ್ಕೆ ಪ್ರೇರಣೆ. ಈ ಯೋಜನೆ ಹಲವು ಜನರ ಅಕ್ಷಯ ಪಾತ್ರೆಯಾಗಿದೆ ಎನ್ನುವ ವ್ಯಾಖ್ಯಾನವೂ ಇದೆ. ತಮಿಳುನಾಡಿನ ಅಮ್ಮಾ ಕ್ಯಾಂಟೀನ್ ಮಾದರಿಯಲ್ಲಿ ೨೦೧೭ರ ಆ. ೧೬ರಂದು ರಾಜ್ಯದಲ್ಲೂ ಇಂದಿರಾ ಕ್ಯಾಂಟೀನ್ ಆರಂಭಿಸಲಾಯಿತು. ಶುರುವಿನಲ್ಲಿ ಬೆಂಗಳೂರು, ಬೆಂಗಳೂರು ಗ್ರಾಮಾಂತರ, ಚಿಕ್ಕಬಳ್ಳಾಪುರ, ತುಮಕೂರು ಭಾಗದಲ್ಲಿ ಶುರುವಾದ ಇಂದಿರಾ ಕ್ಯಾಂಟೀನ್‌ಗಳು ನಂತರದ ದಿನಗಳಲ್ಲಿ ಎಲ್ಲಾ ಜಿಲ್ಲಾ ಕೇಂದ್ರಕ್ಕೂ ವಿಸ್ತರಣೆ ಆದವು.
ಆರ್ಥಿಕವಾಗಿ ದುರ್ಬಲರಾದವರ ತುತ್ತಿನ ಚೀಲವನ್ನು ಪ್ರತಿದಿನವೂ ಕಡಿಮೆ ಖರ್ಚಿನಲ್ಲಿ ತುಂಬಿಸುತ್ತಿದ್ದ ಇಂದಿರಾ ಕ್ಯಾಂಟೀನ್ ಬಗ್ಗೆ ಹಿಂದಿನ ಬಿಜೆಪಿ ಸರ್ಕಾರ ಮಲತಾಯಿ ಧೋರಣೆ ತೋರಿಸಿತ್ತು ಎನ್ನುವ ಆರೋಪಗಳಿವೆ. ಆದರೆ ಸಿದ್ದರಾಮಯ್ಯ ಮುಖ್ಯಮಂತ್ರಿಯಾಗಿ ಮತ್ತೆ ಪ್ರಮಾಣ ವಚನ ಸ್ವೀಕರಿಸುತ್ತಿದ್ದಂತೆಯೇ ’ಬಿಜೆಪಿ ನೇತೃತ್ವದ ರಾಜ್ಯ ಸರ್ಕಾರದ ಅವಧಿಯಲ್ಲಿ ನಿರ್ಲಕ್ಷ್ಯಕ್ಕೆ ಒಳಗಾಗಿ, ಮುಚ್ಚಲ್ಪಟ್ಟಿದ ಇಂದಿರಾ ಕ್ಯಾಂಟೀನ್‌ಗಳನ್ನು ರಾಜ್ಯಾದ್ಯಂತ ಪುನಃ ಆರಂಭಿಸಲಾಗುವುದು’ ಎಂದು ಹೆಳಿದ್ದರು. ಅದರಂತೆ ಇಂದಿರಾ ಕ್ಯಾಂಟೀನ್‌ಗಳಿಗೆ ಮರುಜೀವ ಕೊಡುವ ಕೆಲಸ ಶುರುವಾಗಿದೆ. ಹಳೆಯ ಪರಿಕಲ್ಪನೆ ಜತೆಗೆ ಮತ್ತಷ್ಟು ಸದೃಢವಾಗಿ ಇಂದಿರಾ ಕ್ಯಾಂಟೀನ್ ಎದ್ದು ನಿಲ್ಲಲು ಬೇಕಾದ ವ್ಯವಸ್ಥೆ ಮಾಡಲಾಗುತ್ತಿದೆ.
ಜಿಲ್ಲೆಯಲ್ಲಿ ಈಗಾಗಲೇ ಜಿಲ್ಲಾ ಕೇಂದ್ರ ಮಡಿಕೇರಿಯ ಹೊಸ ಖಾಸಗಿ ಬಸ್ ನಿಲ್ದಾಣದ ಬಳಿಯಲ್ಲಿ ಮತ್ತು ತಾಲೂಕು ಕೇಂದ್ರ ವಿರಾಜಪೇಟೆಯಲ್ಲಿ ೨೦೧೮ರಿಂದಲೇ ಇಂದಿರಾ ಕ್ಯಾಂಟೀನ್ ಜನಸಾಮಾನ್ಯರಿಗೆ ಅನುಕೂಲ ಆಗುವ ರೀತಿಯಲ್ಲಿ ಕಾರ್ಯ ನಿರ್ವಹಿಸುತ್ತಿವೆ. ಇದೀಗ ಶಾಸಕ ಡಾ. ಮಂತರ್ ಗೌಡ ಪ್ರಯತ್ನದ ಫಲವಾಗಿ ಜಿಲ್ಲೆಯಲ್ಲಿ ಇನ್ನೂ ಮೂರು ಇಂದಿರಾ ಕ್ಯಾಂಟೀನ್ ಆರಂಭಕ್ಕೆ ಸರ್ಕಾರ ಗ್ರೀನ್ ಸಿಗ್ನಲ್ ಕೊಟ್ಟಿದೆ. ಇದರೊಂದಿಗೆ ಕೊಡಗಿನಲ್ಲಿ ಒಟ್ಟು ೫ ಇಂದಿರಾ ಕ್ಯಾಂಟೀನ್‌ಗಳು ಆರಂಭವಾದಂತಾಗಲಿದೆ. ಇದರ ಜತೆಗೆ ಪೊನ್ನಂಪೇಟೆ ತಾಲೂಕಿನಲ್ಲೂ ಇಂದಿರಾ ಕ್ಯಾಂಟೀನ್ ಆರಂಭಕ್ಕೆ ಅದಷ್ಟು ಶೀಘ್ರವಾಗಿ ಪ್ರಸ್ತಾವನೆ ಸಲ್ಲಿಸಲು ಸರ್ಕಾರ ಸೂಚಿಸಿದೆ.
ಮಡಿಕೇರಿಯಲ್ಲಿ ಹೊಸ ಖಾಸಗಿ ಬಸ್ ನಿಲ್ದಾಣದ ಬಳಿ ಹಾಲಿ ಕಾರ್ಯನಿರ್ವಹಿಸುತ್ತಿರುವ ಇಂದಿರಾ ಕ್ಯಾಂಟೀನ್ ಜನಸಂದಣಿಯಿಂದ ದೂರದಲ್ಲಿದ್ದು, ಹೆಚ್ಚಿನ ಜನರಿಗೆ ಉಪಯೋಗ ಆಗುತ್ತಿಲ್ಲ ಎನ್ನುವ ಮಾತುಗಳು ಮೊದಲಿನಿಂದಲೂ ಕೇಳಿಬರುತ್ತಿದೆ. ಹಾಗಾಗಿ ನಗರದಲ್ಲಿ ಸಾಮಾನ್ಯವಾಗಿ ಹೆಚ್ಚು ಜನಸಂದಣಿ ಇರುವ ಕೊಡಗು ವೈದ್ಯಕೀಯ ವಿದ್ಯಾಲಯದ ಬೋಧಕ ಆಸ್ಪತ್ರೆ ಬಳಿ ಇಂದಿರಾ ಕ್ಯಾಂಟೀನ್ ಆರಂಭಿಸುವಂತೆ ಸ್ಥಳೀಯರು ಬೇಡಿಕೆ ಮುಂದಿಟ್ಟಿದ್ದರು. ಇಲ್ಲಿ ಇಂದಿರಾ ಕ್ಯಾಂಟೀನ್ ಶುರುವಾದರೆ ಆಸ್ಪತ್ರೆಗೆ ಬರುವ ಬಡ ರೋಗಿಗಳಿಗೆ ಕಡಿಮೆ ದರದಲ್ಲಿ ಊಟ ಸಿಗುತ್ತದೆ. ಇಂದಿರಾ ಕ್ಯಾಂಟೀನ್‌ಗೆ ಹೆಚ್ಚು ಪ್ರಚಾರವೂ ಆಗುತ್ತದೆ ಎನ್ನುವ ಅಭಿಪ್ರಾಯ ವ್ಯಕ್ತವಾಗುತ್ತಿತ್ತು. ಇದಕ್ಕೆ ಸ್ಪಂದಿಸಿದ ಶಾಸಕ ಡಾ. ಮಂತರ್ ಗೌಡ ಜಿಲ್ಲಾ ಆಸ್ಪತ್ರೆ ಬಳಿಯಲ್ಲೇ ಮಡಿಕೇರಿಯ ಮತ್ತೊಂದು ಇಂದಿರಾ ಕ್ಯಾಂಟೀನ್ ಸ್ಥಾಪನೆಗೆ ನಿರ್ಧರಿಸಿದ್ದಾರೆ.
ಮಡಿಕೇರಿ ಮತ್ತು ವಿರಾಜಪೇಟೆಯಲ್ಲಿ ಇಂದಿರಾ ಕ್ಯಾಂಟೀನ್ ಶುರುವಾದಾಗಲೇ ಮತ್ತೊಂದು ಪ್ರಮುಖ ತಾಲೂಕು ಕೇಂದ್ರ ಸೋಮವಾರಪೇಟೆಯಲ್ಲೂ ಇಂದಿರಾ ಕ್ಯಾಂಟೀನ್ ಆರಂಭಕ್ಕೆ ಸ್ಥಳೀಯರು ಬೇಡಿಕೆ ಇಟ್ಟಿದ್ದರು. ಸರ್ಕಾರದಿಂದ ಅನುಮೋದನೆಯೂ ಸಿಕ್ಕಿತ್ತು. ಈ ಬೆನ್ನಲ್ಲೇ ಸಿ.ಕೆ. ಸುಬ್ಬಯ್ಯ ರಸ್ತೆಯಲ್ಲಿ ಹೈ ಟೆಕ್ ಮಾರುಕಟ್ಟೆ ಬಳಿ ಜಾಗ ಗುರುತಿಸಿ ಅಡಿಪಾಯವನ್ನೂ ಹಾಕಲಾಗಿತ್ತು. ಆದರೆ ನಂತರ ಬದಲಾದ ರಾಜಕೀಯ ಸನ್ನಿವೇಶದಲ್ಲಿ ಸೋಮವಾರಪೇಟೆಗೆ ಇಂದಿರಾ ಕ್ಯಾಂಟೀನ್‌ನ ಭಾಗ್ಯ ಸಿಕ್ಕಿರಲಿಲ್ಲ. ಈಗ ಮತ್ತೆ ಸರ್ಕಾರದಿಂದ ಮತ್ತೆ ಅನುಮೋದನೆ ಸಿಕ್ಕಿದ್ದು, ಮೊದಲು ನಿರ್ಧರಿಸಿದ್ದ ಜಾಗದಲ್ಲೇ ಇಂದಿರಾ ಕ್ಯಾಂಟೀನ್ ತಲೆ ಎತ್ತಲಿದೆ.
ಜಿಲ್ಲೆಯಲ್ಲೇ ವೇಗವಾಗಿ ಬೆಳೆಯುತ್ತಿರುವ ವಾಣಿಜ್ಯ ನಗರಿ ಹೆಗ್ಗಳಿಕೆಯ ಕುಶಾಲನಗರಕ್ಕೂ ಇಂದಿರಾ ಕ್ಯಾಂಟೀನ್ ಬೇಕು ಎನ್ನುವ ಬೇಡಿಕೆಯನ್ನು ೨೦೧೮ರಲ್ಲೇ ಸರ್ಕಾರದ ಮುಂದೆ ಇಡಲಾಗಿತ್ತು. ಆದರೆ ಇದಕ್ಕೆ ಈಗ ಕಾಲ ಕೂಡಿ ಬಂದಿದೆ. ನಗರದ ಹೃದಯ ಭಾಗದಲ್ಲಿ ಇರುವ ಕೆಎಸ್‌ಆರ್‌ಟಿಸಿ ಬಸ್ ನಿಲ್ದಾಣದ ಆವರಣದಲ್ಲೇ ಇಂದಿರಾ ಕ್ಯಾಂಟೀನ್ ನಿರ್ಮಾಣ ಆಗಲಿದೆ. ಈಗಾಗಲೇ ಶಾಸಕ ಡಾ. ಮಂತರ್ ಗೌಡ ಖುದ್ದಾಗಿ ಇಲ್ಲಿ ೨-೩ ಕಡೆ ಜಾಗ ಪರಿಶೀಲನೆ ನಡೆಸಿದ್ದು, ಅಧಿಕಾರಿಗಳು ಅಂತಿಮಗೊಳಿಸುವ ಸ್ಥಳದಲ್ಲಿ ಇಂದಿರಾ ಕ್ಯಾಂಟೀನ್ ನಿರ್ಮಾಣ ಆಗಲಿದೆ.
ಇಂದಿರಾ ಕ್ಯಾಂಟೀನ್ ಮೆನುವಿನಲ್ಲಿ ಗ್ರಾಹಕರ ಅಪೇಕ್ಷೆಗೆ ಮೇರೆಗೆ ಊಟದ ಮೆನು ಸ್ವಲ್ಪ ಬದಲು ಮಾಡಲಾಗುತ್ತಿದೆ. ಮಧ್ಯಾಹ್ನ ಮತ್ತು ರಾತ್ರಿ ಊಟಕ್ಕೆ ಈಗ ಇಲ್ಲಿ ರೈಸ್ ಬಾತ್ ಅಥವಾ ಅನ್ನ, ಸಾಂಬರ್, ಮೊಸರನ್ನ ಕೊಡಲಾಗುತ್ತಿತ್ತು. ಈ ಮಧ್ಯೆ ಹಿರಿಯ ನಾಗರಿಕರು, ಸಕ್ಕರೆ ಕಾಯಿಲೆ ಇರುವವರು ಸೇರಿದಂತೆ ಹಲವರು ಮುದ್ದೆ, ಚಪ್ಪಾತಿ ನೀಡುವಂತೆಯೂ ಮನವಿ ಮಾಡಿದ್ದರು. ಹಾಗಾಗಿ ಹೊಸ ವರ್ಷದಿಂದ ಇಂದಿರಾ ಕ್ಯಾಂಟೀನ್‌ನಲ್ಲಿ ಮುದ್ದೆ ಕೂಡ ದೊರೆಯಲಿದೆ. ಸಂಕ್ರಾಂತಿ ವೇಳೆಗೆ ಇದು ಜಾರಿಗೆ ಬರುವ ಸಾಧ್ಯತೆ ಇದೆ. ಸಿಹಿ ತಿನಿಸು ಕೂಡ ಕೊಡಲು ಚಿಂತನೆ ನಡೆದಿದೆ. ತಾಂತ್ರಿಕವಾಗಿಯೂ ಇಂದಿರಾ ಕ್ಯಾಂಟೀನ್‌ಗಳನ್ನು ’ಅಪ್‌ಡೇಟ್’ ಮಾಡಲಾಗುತ್ತಿದೆ. ಇಂದಿರಾ ಕ್ಯಾಂಟೀನ್‌ನಲ್ಲಿ ಸುಳ್ಳು ಲೆಕ್ಕ ನೀಡಿ, ರಿಯಾಯಿತಿ ಹಣ ದುರುಪಯೋಗ ಮಾಡಲಾಗುತ್ತಿದೆ ಎನ್ನುವ ಆರೋಪ ಹಿನ್ನೆಲೆಯಲ್ಲಿ ಇಂದಿರಾ ಕ್ಯಾಂಟೀನ್‌ನಲ್ಲಿ ಗ್ರಾಹಕ ಊಟ ಅಥವಾ ತಿಂಡಿಯ ಕೂಪನ್ ಪಡೆದರೆ ಆ ಮಾಹಿತಿ ನೇರವಾಗಿ ಕೇಂದ್ರ ಕಚೇರಿಗೆ ತಲುಪುವ ತಂತ್ರಜ್ಞಾನ ಅಭಿವೃದ್ಧಿ ಪಡಿಸಲಾಗಿದೆ.
ಜಿಲ್ಲೆಯ ಮೂರು ಕಡೆಗಳಲ್ಲಿ ಹೊಸದಾಗಿ ಆರಂಭವಾಗಲಿರುವ ಇಂದಿರಾ ಕ್ಯಾಂಟೀನ್‌ಗಳನ್ನು ಜ.೩ಕ್ಕೆ ಜಿಲ್ಲೆಗೆ ಆಗಮಿಸಲಿರುವ ಮುಖ್ಯಮಂತ್ರಿ ಸಿದ್ದರಾಮಯ್ಯ ಉದ್ಘಾಟಿಸಲಿದ್ದಾರೆ ಎನ್ನಲಾಗುತ್ತಿದೆ. ಅಂದು ಜಿಲ್ಲೆಯಲ್ಲಿ ಸಿದ್ದರಾಮಯ್ಯ ಅವರ ಕಾರ್ಯಕ್ರಮ ನಿಗದಿಯಾಗಿದ್ದು, ಕೂಡಿಗೆಯಲ್ಲಿ ನಡೆಯಲಿರುವ ಬಾಲಕಿಯರ ರಾಷ್ಟ್ರೀಯ ಮಟ್ಟದ ಹಾಕಿ ಕ್ರೀಡಾಕೂಟಕ್ಕೆ ಚಾಲನೆ ನೀಡಲಿದ್ದಾರೆ. ಇದೇ ಸಂದರ್ಭದಲ್ಲಿ ಸಿದ್ದರಾಮಯ್ಯ ಅವರ ಮಹತ್ವಾಕಾಂಕ್ಷಿಯ ಇಂದಿರಾ ಕ್ಯಾಂಟೀನ್ ಅವರ ಕೈಯಲ್ಲೇ ಉದ್ಘಾಟಿಸಿದರೆ ಹೆಚ್ಚು ಸೂಕ್ತ ಎನ್ನುವುದು ಜಿಲ್ಲೆಯ ಕಾಂಗ್ರೆಸ್ ನಾಯಕರ ಅಭಿಮತ. ಇಂದಿರಾ ಕ್ಯಾಂಟೀನ್ ಕಟ್ಟಡವನ್ನು ಸಾಂಪ್ರದಾಯಿಕ ಪದ್ಧತಿಯಲ್ಲಿ ನಿರ್ಮಿಸದೇ ಪ್ರೀಕಾಸ್ಟ್ ತಂತ್ರಜ್ಞಾನ ಬಳಸುವುದರಿಂದ ಕಟ್ಟಡ ನಿರ್ಮಾಣಕ್ಕೆ ಹೆಚ್ಚಿನ ಸಮಯ ಬೇಕಾಗುವುದಿಲ್ಲ. ಹಾಗಾಗಿ ಈಗಿರುವ ಅವಧಿ ಬಳಸಿಕೊಂಡು ಅಗತ್ಯ ಸಿದ್ಧತೆಗಳನ್ನು ಮಾಡಿಕೊಳ್ಳಲು ಸಮಸ್ಯೆ ಇಲ್ಲ ಎನ್ನುತ್ತಾರೆ ಕಾಂಗ್ರೆಸ್ ನಾಯಕರು.
ಮುಖ್ಯಮಂತ್ರಿ ಸಿದ್ದರಾಮಯ್ಯ ಅವರ ಮಹತ್ವಾಕಾಂಕ್ಷಿ ಯೋಜನೆ ಆಗಿರುವ ಇಂದಿರಾ ಕ್ಯಾಂಟೀನ್ ಬಡವರ ಹೊಟ್ಟೆ ತುಂಬಿಸುವಲ್ಲಿ ಪ್ರಮುಖ ಪಾತ್ರ ವಹಿಸುತ್ತಿದೆ. ಎಲ್ಲಾ ಪ್ರಜೆಗಳಿಗೂ ಕಡಿಮೆ ದರದಲ್ಲಿ ಆಹಾರ ಸಿಗಬೇಕು ಎನ್ನುವುದು ಸಿದ್ದರಾಮಯ್ಯ ಕನಸು. ಇದಕ್ಕೆ ಪೂರಕವಾಗಿ ಇಂದಿರಾ ಕ್ಯಾಂಟೀನ್ ಕಾರ್ಯನಿರ್ವಹಿಸುತ್ತಿದ್ದು, ಕೊಡಗಿನ ಮೂರು ಕಡೆಗಳಲ್ಲಿ ಹೊಸದಾಗಿ ಇಂದಿರಾ ಕ್ಯಾಂಟೀನ್ ಆರಂಭಕ್ಕೆ ಸರ್ಕಾರ ಅನುಮೋದನೆ ನೀಡಿದೆ. ಇಂದಿರಾ ಕ್ಯಾಂಟೀನ್ ಸ್ಥಾಪನೆಗೆ ಈಗಾಗಲೇ ಜಾಗ ಗುರುತಿಸಲಾಗಿದೆ. ಸದ್ಯದಲ್ಲೇ ಭೂಮಿ ಪೂಜೆ ನೆರವೇರಿಸಿ ಆದಷ್ಟು ಬೇಗ ಇಂದಿರಾ ಕ್ಯಾಂಟೀನ್ ಆರಂಭವಾಗುವಂತೆ ನೋಡಿಕೊಳ್ಳಲಾಗುವುದು.
ಡಾ. ಮಂತರ್ ಗೌಡ, ಮಡಿಕೇರಿ ಶಾಸಕ
ಕುಶಾಲನಗರದಲ್ಲೂ ಇಂದಿರಾ ಕ್ಯಾಂಟೀನ್ ಬೇಕು ಎನ್ನುವ ಸ್ಥಳೀಯರ ಬೇಡಿಕೆಗೆ ಸಕಾರಾತ್ಮಕವಾಗಿ ಸ್ಪಂದಿಸಿದ ಮಡಿಕೇರಿ ಶಾಸಕ ಡಾ. ಮಂತರ್ ಗೌಡ ಅವರ ಕಾಳಜಿ ಶ್ಲಾಘನಾರ್ಹ. ಶಾಸಕರ ಪ್ರಯತ್ನದ ಫಲವಾಗಿ ಆರಂಭವಾಗುತ್ತಿರುವ ಇಂದಿರಾ ಕ್ಯಾಂಟೀನ್‌ನಿಂದ ಇಲ್ಲಿನವರಿಗೆ ದೊಡ್ಡ ಮಟ್ಟದ ಪ್ರಯೋಜನ ಆಗಲಿದೆ. ಕೂಲಿ ಕಾರ್ಮಿಕರು, ವಿದ್ಯಾರ್ಥಿಗಳು, ಆಟೋ ಚಾಲಕರು ಸೇರಿದಂತೆ ಹಲವರು ಕಡಿಮೆ ಖರ್ಚಿನಲ್ಲಿ ಹೊಟ್ಟೆ ತುಂಬಾ ಊಟ ಮಾಡುವ ಅವಕಾಶ ಇದರಿಂದ ಲಭ್ಯವಾಗಲಿದೆ.
ಚಂದನ್‌ಕುಮಾರ್, ಕುಶಾಲನಗರ ನಿವಾಸಿ