

ಬೆಳಗಾವಿ: ತಾಲೂಕಿನ ಪಣಗುತ್ತಿ ಗ್ರಾಮದಲ್ಲಿ ಮೂರು ತಿಂಗಳ ಹಿಂದೆ ಮನೆಯೊಂದರಲ್ಲಿ ಬಂಗಾರದ ಆಭರಣ ಕಳವು ಮಾಡಿದ್ದ ಕಳ್ಳನನ್ನು ಕಾಕತಿ ಠಾಣೆ ಪೊಲೀಸರು ಮಂಗಳವಾರ ಬಂಧಿಸಿ, ಆತನಿಂದ 37ಗ್ರಾಂ ಚಿನ್ನಾಭರಣ ಹಾಗೂ 1.35 ಲಕ್ಷ ರೂ. ನಗದು ವಶಪಡಿಸಿಕೊಂಡಿದ್ದಾರೆ.
ಹುಕ್ಕೇರಿ ತಾಲೂಕಿನ ಹಗೇದಾಳ ಗ್ರಾಮದ ಯಲ್ಲಪ್ಪ ಭೀಮಪ್ಪ ನಾಯಕ (27) ಬಂಧಿತ ವ್ಯಕ್ತಿ. ಜೂ.27ರ ರಾತ್ರಿ ಬೆಳಗಾವಿ ತಾಲೂಕಿನ ಪಣಗುತ್ತಿ ಗ್ರಾಮದ ಯಲ್ಲಪ್ಪ ಗಂಗಪ್ಪ ಗೌಡಣ್ಣವರ ಎಂಬುವರ ಮನೆಯಲ್ಲಿ ಯಾರೂ ಇಲ್ಲದ್ದನ್ನು ಖಾತ್ರಿ ಮಾಡಿಕೊಂಡಿದ್ದ ಯಲ್ಲಪ್ಪ, ಹಿತ್ತಲು ಬಾಗಿಲು ಮುರಿದು ಒಳನುಗ್ಗಿ 2.39 ಲಕ್ಷ ರೂ. ಮೌಲ್ಯದ 58 ಗ್ರಾಂ ಚಿನ್ನಾಭರಣ ಹಾಗೂ 1.35 ಲಕ್ಷ ರೂ. ನಗದು ಸೇರಿದಂತೆ 3.74 ಲಕ್ಷ ರೂ. ಮೌಲ್ಯದ ವಸ್ತುಗಳನ್ನು ದೋಚಿ ಪರಾರಿಯಾಗಿದ್ದನು. ಈ ಕುರಿತು ಜೂ.8ರಂದು ಕಾಕತಿ ಪೊಲೀಸ್ ಠಾಣೆಯಲ್ಲಿ ದೂರು ದಾಖಲಾಗಿತ್ತು.
ಕಾಕತಿ ಠಾಣೆ ಪೊಲೀಸ್ ಇನ್‌ಸ್ಪೆಕ್ಟರ್ ರಾಘವೇಂದ್ರ ಎಚ್.ಹಳ್ಳೂರ ನೇತೃತ್ವದಲ್ಲಿ ಪಿಎಸ್‌ಐ ಎ.ವಿ.ಎರಗೊಪ್ಪ, ಸಿಬ್ಬಂದಿ ಎ.ಎಸ್. ಲಕ್ಕನಗೌಡರ್, ಬಾಳೇಶ ಗುನ್ನಗೋಳ, ತುಕರಾಮ ದೊಡ್ಡಮನಿ ತನಿಖೆ ನಡೆಸಿದ್ದರು. ಈ ತಂಡ ಕಳ್ಳನನ್ನು ಮಂಗಳವಾರ ಬಂಧಿಸಿದೆ. ಆತನ ಬಳಿಯಿದ್ದ 14.560 ಗ್ರಾಂ ಬಂಗಾರದ ಸರ, 17.5 ಗ್ರಾಂ ನೆಕ್ಲೇಸ್, 5 ಗ್ರಾಂ ಬಂಗಾರದ ಸರ ಸೇರಿದಂತೆ 37.060 ಗ್ರಾಂ ಚಿನ್ನಾಭರಣ ಹಾಗೂ 1.35 ಲಕ್ಷ ರೂ. ನಗದು ಸೇರಿದಂತೆ 2.71 ಲಕ್ಷ ರೂ. ಮೌಲ್ಯದ ಸ್ವತ್ತನ್ನು
ಪೊಲೀಸರು ವಶಪಡಿಸಿಕೊಂಡಿದ್ದಾರೆ. ಬಂಧಿತನನ್ನು ನ್ಯಾಯಾಲಯಕ್ಕೆ ಒಪ್ಪಿಸಲಾಗಿದೆ.